ಡಿಕೆ ಶಿವಕುಮಾರ್ ಆರೋಗ್ಯದಲ್ಲಿ ವ್ಯತ್ಯಯ, ಆಸ್ಪತ್ರೆಗೆ ದಾಖಲು
ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ ವಶದಲ್ಲಿರುವ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
Published: 15th September 2019 08:56 AM | Last Updated: 15th September 2019 08:56 AM | A+A A-

ಸಂಗ್ರಹ ಚಿತ್ರ
ಪ್ರಸ್ತುತ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ವಶದಲ್ಲಿರುವ ಕಾಂಗ್ರೆಸ್ ಮುಖಂಡ ಶಿವಕುಮಾರ್
ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ ವಶದಲ್ಲಿರುವ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಮೂಲಗಳ ಪ್ರಕಾರ ಶನಿವಾರ ಮಧ್ಯಾಹ್ನ ಅಧಿಕ ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿದ್ದ ಡಿಕೆ ಶಿವಕುಮಾರ್ ಅವರನ್ನು ರಾಮ ಮನೋಹರ ಲೋಹಿಯಾ ಅಸ್ಪತ್ರೆಗೆ ದಾಖಲು ಮಾಡಲಾಗಿದೆ. ಡಿ.ಕೆ.ಶಿವಕುಮಾರ್ ಅವರ ಕುಟುಂಬದ ವೈದ್ಯರಾಗಿರುವ ಡಾ.ರಂಗನಾಥ್ ಅವರು ಈ ಕುರಿತು ಮಾಹಿತಿ ನೀಡಿದ್ದು, 'ಡಿ.ಕೆ.ಶಿವಕುಮಾರ್ ಅವರು ರಕ್ತದೊತ್ತಡದ ಸಮಸ್ಯೆಯೊಂದಿಗೆ ಜ್ವರದಿಂದ ಬಳಲುತ್ತಿದ್ದಾರೆ ಎಂದು ಹೇಳಿದ್ದಾರೆ.
ಇನ್ನು ಕಳೆದ 10 ದಿನಗಳಿಂದ ಇ.ಡಿ ಅಧಿಕಾರಿಗಳ ವಶದಲ್ಲಿರುವ ಡಿ.ಕೆ.ಶಿವಕುಮಾರ್ ಅವರನ್ನು 11ನೇ ದಿನವಾದ ಶನಿವಾರದಂದು ಬೆಳಗ್ಗೆ 9.30ಕ್ಕೆ ತುಘಲಕ್ ರೋಡ್ ಠಾಣೆಯಿಂದ ಇ.ಡಿ. ಪ್ರಧಾನ ಕಚೇರಿಗೆ ವಿಚಾರಣೆಗೆಂದು ಕರೆದೊಯ್ಯಲಾಗಿತ್ತು. ಆದರೆ ಮಧ್ಯಾಹ್ನ 1 ಗಂಟೆಗೆ ಡಿ.ಕೆ.ಶಿವಕುಮಾರ್ ಅವರ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು ಎಂದು ತಿಳಿದುಬಂದಿದೆ.
ಶುಕ್ರವಾರ ನ್ಯಾಯಾಲಯದಲ್ಲಿ ಆರೋಗ್ಯದ ಸಮಸ್ಯೆಯ ಕಾರಣ ನೀಡಿ ಡಿ.ಕೆ.ಶಿವಕುಮಾರ್ ಜಾಮೀನು ಯಾಚಿಸಿದ್ದರು. ಆದರೆ ನ್ಯಾಯಾಲಯ ಜಾಮೀನು ನೀಡಲು ಒಪ್ಪದಿದ್ದರೂ ಡಿ.ಕೆ.ಶಿವಕುಮಾರ್ ಆರೋಗ್ಯ ಬಗ್ಗೆ ಮುತುವರ್ಜಿ ವಹಿಸುವಂತೆ ಸೂಚಿಸಿ ಮತ್ತೆ ನಾಲ್ಕು ದಿನಗಳ ಕಾಲ ಅಂದರೆ ಸೆ.17ರವರೆಗೆ ಇ.ಡಿ.ಕಸ್ಟಡಿಗೆ ನೀಡಿತ್ತು.