ಕೊರೋನಾ: ಬ್ಯಾಂಕ್ ನೋಟ್, ದಿನಸಿ ವಸ್ತುಗಳಿಗೂ ಬಂತು 'ಸ್ಯಾನಿಟೈಸ್ ಡಿವೈಸ್; ರೂ.500ಕ್ಕಿಂತಲೂ ಕಡಿಮೆ ದರದಲ್ಲಿ ಸಿಗಲಿದೆ ಯಂತ್ರ
ನವದೆಹಲಿ: ದೇಶದಲ್ಲಿ ಕೊರೋನಾ ವೈರಸ್ ಪರಿಣಾಮ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ನಡುವಲ್ಲೇ ವೈರಸ್ ಹತ್ತಿಕ್ಕಲು ಭಾರತೀಯ ತಂತ್ರಜ್ಞಾನ ಸಂಸ್ಥೆ ಕೂಡ ಸರ್ಕಾರದ ಸಹಾಯಕ್ಕೆ ಬಂದಿದ್ದು, ಬ್ಯಾಂಕ್ ನೋಟ್, ಡೆಲಿವರಿ ಪ್ಯಾಕೇಜ್'ಗಳು ಹಾಗೂ ದಿನಸಿ ಸಾಮಾಗ್ರಿಗಳನ್ನು ಶುದ್ಧೀಕರಣಗೊಳಿಸಲು ಸ್ಯಾನಿಟೈಸ್ ಡಿವೈಜ್'ವೊಂದನ್ನು ಅಭಿವೃದ್ಧಿಪಡಿಸಿದೆ.
ಐಐಟಿಯ ರೋಪರ್ ತಂಡ ಈ ಡಿವೈಸ್'ನ್ನು ಅಭಿವೃದ್ಧಿಸಿದೆ. ಈಗಾಗಲೇ ಈ ಡಿವೈಸನ್ನು ವಾಣಿಜ್ಯೀಕರಿಸಲಾಗಿದ್ದು, ರೂ.500ಕ್ಕಿಂತಲೂ ಕಡಿಮೆ ದರದಲ್ಲಿ ಲಭ್ಯವಾಗಲಿದೆ. ಈ ಡಿವೈಸನ್ನು ನೇರಳಾತೀತ ಸೂಕ್ಷ್ಮಾಣು ವಿಕಿರಣ ತಂತ್ರಜ್ಞಾನದೊಂದಿಗೆ ತಯಾರಿಸಲಾಗಿದ್ದು, ಡಿವೈಸ್'ನಲ್ಲಿ ಅಳವಡಿಸಲಾಗಿರುವ ಬೆಳಕು ಅಪಾಯವಾಗಿದ್ದು, ಅದನ್ನು ಜನರು ನೇರವಾಗಿ ನೋಡಬಾರದು. ಮನೆಯ ಬಾಗಿಲ ಬಳಿ ಅಥವಾ ಹೊರಾಂಗಣದ ಜಾಗದಲ್ಲಿ ಈ ಡಿವೈಸ್ ಇಟ್ಟುಕೊಳ್ಳಬಹುದಾಗಿದೆ. ಒಂದು ವಸ್ತುವನ್ನು ಸ್ಯಾನಿಟೈಸ್ ಮಾಡಲು ಹಾಕಿದರೆ 30 ನಿಮಿಷಗಳ ಸಮಯ ತೆಗೆದಕೊಳ್ಳುತ್ತದೆ. ನಂತರ 10 ನಿಮಿಷ ಡಿವೈಸ್ ಕೂಲ್ ಆಗಲು ಬಿಡಬೇಕು. ತಂದ ನಂತರ ಮತ್ತೊಂದು ವಸ್ತುವನ್ನು ಹಾಕಿ ಸ್ಯಾನಿಟೈಸ್ ಮಾಡಬಹುದಾಗಿದೆ.
ಹೊರಗೆ ಬಾರದಿದ್ದರ, ಸಾಮಾಜಿಕ ಅಂತರ ಕಾಯ್ದುಕೊಂಡ ಕೂಡಲೇ ವೈರಸ್ ದೂರಾಗಲು ಸಾಧ್ಯವಾಗುವುದಿಲ್ಲ ಮುಂದಿನ ದಿನಗಳು ಮತ್ತಷ್ಟು ಕಠಿಣವಾಗಿರಲಿದ್ದು, ಈಗಲೇ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವುದು ಮುಖ್ಯವಾಗುತ್ತದೆ. ಇದರಂತೆ ನಾವು ಟ್ರಂಕ್ ರೀತಿಯಲ್ಲಿರುವ ಡಿವೈಸನ್ನು ಕಂಡು ಹಿಡಿದಿದ್ದು, ಮನೆಯ ಬಾಗಿಲಿಗೆ ಹತ್ತಿರುವವಿರುವ ಪ್ರದೇಶದಲ್ಲಿ ಈ ಡಿವೈಸನ್ನು ಇಟ್ಟುಕೊಂಡರೆ ಸಹಾಯಕವಾಗಲಿದೆ ಎಂದು ಐಐಟಿ ತಂಡ ಹೇಳಿದೆ.
ಬಳಕೆಗೂ ಮುನ್ನ ಸಾಕಷ್ಟು ಜನರು ತರಕಾರಿಗಳನ್ನು ಬಿಸಿ ನೀರಿನಲ್ಲಿ ತೊಳೆಯುತ್ತಿದ್ದಾರೆ. ಆದರೆ, ಪರ್ಸ್, ನೋಟುಗಳನ್ನು ತೊಳೆಯಲು ಸಾಧ್ಯವಿಲ್ಲ. ಹೀಗಾಗಿ ಅವುಗಳನ್ನು ಸ್ಯಾನಿಟೈಸ್ ಮಾಡಲು ನಾವು ಡಿವೈಸ್ ವೊಂದನ್ನು ಅಭಿವೃದ್ಧಿ ಪಡಿಸಿದ್ದೇವೆಂದು ಐಐಟಿಯ ರೊಪರ್ ಹಿರಿಯ ವಿಜ್ಞಾನಿ ಹಾಗೂ ಅಧಿಕಾರಿ ನರೇಶ್ ರಾಖಾ ಅವರು ಹೇಳಿದ್ದಾರೆ.
ಡಿವೈಸ್ ಮೂಲಕ ನೋಟುಗಳು, ತರಕಾರಿ, ಹಾಲಿನ ಪ್ಯಾಕೆಟ್ ಸೇರಿದಂತೆ ಹೊರಗಿನಿಂದ ಬರುವ ಕೈಗಡಿಯಾರ, ಪರ್ಸ್, ಮೊಬೈರ್ ಹಾಗೂ ಇತರೆ ದಾಖಲಾತಿಗಳನ್ನೂ ಟ್ರಂಕ್ ಒಳಗಿಟ್ಟು ಸ್ಯಾನಿಟೈಸ್ ಮಾಡಬಹುದಾಗಿದೆ.
ಈ ಡಿವೈಸನ್ನು ನೀರನ್ನು ಶುದ್ಧೀಕರಿಸುವ ನೇರಳಾತೀತ ಸೂಕ್ಷ್ಮಾಣು ವಿಕಿರಣ ತಂತ್ರಜ್ಞಾನದೊಂದಿಗೆ ತಯಾರಿಸಲಾಗಿದ್ದು, ಟ್ರಂಕ್ ಒಳಗಿರುವ ಲೈಟನ್ನು ನೇರವಾಗಿ ನೋಡದಂತೆ ಸಲಹೆ ನೀಡುತ್ತೇವೆಂದು ರಾಖಾ ಅವರು ಹೇಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ