ಭಾರತ ಬಂದ್ ಗೆ ನೀರಸ ಪ್ರತಿಕ್ರಿಯೆ: ಎಲ್ಲೆಡೆ ಬಿಗಿ ಭದ್ರತೆ, ರೈತ ಸಂಘಟನೆಗಳಿಂದ ಪ್ರತಿಭಟನೆ, ಎಂದಿನಂತೆ ಜನಜೀವನ 

ದೇಶಾದ್ಯಂತ ಮಂಗಳವಾರ ರೈತ ಸಂಘಟನೆಗಳು ಕರೆ ನೀಡಿರುವ ಭಾರತ ಬಂದ್ ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಾಮಾನ್ಯ ಜನಜೀವನ, ವ್ಯಾಪಾರ-ವಹಿವಾಟುಗಳು ಎಂದಿನಂತೆ ಮುಂದುವರಿದಿವೆ. 
ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಇಂದು ಕಂಡುಬಂದ ದೃಶ್ಯ
ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಇಂದು ಕಂಡುಬಂದ ದೃಶ್ಯ

ನವದೆಹಲಿ: ದೇಶಾದ್ಯಂತ ಮಂಗಳವಾರ ರೈತ ಸಂಘಟನೆಗಳು ಕರೆ ನೀಡಿರುವ ಭಾರತ ಬಂದ್ ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಾಮಾನ್ಯ ಜನಜೀವನ, ವ್ಯಾಪಾರ-ವಹಿವಾಟುಗಳು ಎಂದಿನಂತೆ ಮುಂದುವರಿದಿವೆ. 

ಕೃಷಿ ಸುಧಾರಣೆ ಕಾಯ್ದೆಗಳನ್ನು ವಿರೋಧಿಸಿ ರೈತ ಸಂಘಟನೆಗಳು ಕೈಗೊಂಡಿರುವ ಭಾರತ ಬಂದ್ ನಲ್ಲಿ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಸಂಘಟನೆಗಳು ಅಲ್ಲಲ್ಲಿ ಪ್ರತಿಭಟನೆ, ರಸ್ತೆತಡೆ, ರೈಲ್ ರೋಕೋ ಅಂಗಡಿ-ಮುಂಗಟ್ಟುಗಳನ್ನು ಒತ್ತಾಯಪೂರ್ವಕವಾಗಿ ಬಂದ್ ಮಾಡಿಸುವುದು ಬಿಟ್ಟರೆ ಬೇರೆ ಯಾವುದೇ ಬದಲಾವಣೆ ಕಂಡುಬಂದಿಲ್ಲ.ಖಾಸಗಿ, ಸರ್ಕಾರಿ ಬಸ್ ಸಂಚಾರ, ಇತರ ವಾಹನಗಳ ಸಂಚಾರ ಸೇವೆ ಎಂದಿನಂತೆ ಇಂದು ಕೂಡ ಮುಂದುವರಿದಿದೆ. 

ಆದರೆ ಭದ್ರತೆ, ಕಾನೂನು-ಸುವ್ಯವಸ್ಥೆ ಕ್ರಮವಾಗಿ ನಗರಗಳಲ್ಲಿ, ಮಾರುಕಟ್ಟೆ, ಜನದಟ್ಟಣೆ ಪ್ರದೇಶಗಳಲ್ಲಿ ಪೊಲೀಸ್ ಭದ್ರತೆಯನ್ನು ಇಂದು ಬಿಗಿಗೊಳಿಸಲಾಗಿದೆ. ದೇಶ ರಾಜಧಾನಿಯ ಗಡಿಭಾಗಗಳು ಸೇರಿದಂತೆ ಹಲವು ಕಡೆಗಳಲ್ಲಿ ಭದ್ರತೆ ಬಿಗಿಗೊಳಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. 

ಟೋಲ್ ಪ್ಲಾಜಾಗಳಲ್ಲಿ ಇಂದು ರೈತರು ಚಕ್ಕ ಜಾಮ್ ನಡೆಸುತ್ತಿದ್ದಾರೆ. ಮೋದಿ ಸರ್ಕಾರ ನಮ್ಮ ಬೇಡಿಕೆಗಳನ್ನು ಒಪ್ಪಿ ಜಾರಿಗೆ ತರಲೇಬೇಕು. ಹೊಸ ಸುಧಾರಣಾ ಕಾಯ್ದೆ ಎಂದು ಹೇಳುವ ಸರ್ಕಾರ ಅವುಗಳನ್ನು ವಾಪಸ್ ಪಡೆಯುವುದೊಂದೇ ನಮ್ಮ ಬೇಡಿಕೆ ಎಂದು ರೈತ ನಾಯಕ ಬಲ್ಬಿರ್ ಸಿಂಗ್ ರಾಜೇವಾಲ್ ತಿಳಿಸಿದ್ದಾರೆ. 

ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ರೈತಪರ ಸಂಘಟನೆಗಳು ರಸ್ತೆಗಿಳಿದು ಪ್ರತಿಭಟನೆ ಮಾಡುವುದು ಬಿಟ್ಟರೆ ಅಗತ್ಯ ವಸ್ತುಗಳು, ವಾಹನ ಸಂಚಾರ, ತುರ್ತು ಸೇವೆ ಯಾವುದಕ್ಕೂ ತೊಂದರೆಯಾಗಿಲ್ಲ. 

ಬೆಂಗಳೂರಿನಲ್ಲಿ 10 ಸಾವಿರಕ್ಕೂ ಹೆಚ್ಚು ರೈತರು ಹಲವು ಸಂಘಟನೆಗಳೊಂದಿಗೆ ಟೌನ್ ಹಾಲ್ ನಿಂದ ರ್ಯಾಲಿ ನಡೆಸಿದರು. ಮೌರ್ಯ ಸರ್ಕಲ್, ರೇಸ್ ಕೋರ್ಸ್ ರಸ್ತೆ, ಕಾರ್ಪೊರೇಷನ್ ವೃತ್ತಗಳಲ್ಲಿ ಐಕೆವೈಎ ಹೋರಾಟ ಸಮಿತಿ ಕರೆ ನೀಡಿರುವ ಬಂದ್ ನಿಂದ ಸಂಚಾರ ದಟ್ಟಣೆ ಉಂಟಾಯಿತು. 

ಬೃಹತ್ ಸಂಖ್ಯೆಯಲ್ಲಿ ಪ್ರತಿಭಟನಾಕಾರರು ಸೇರಿದಾಗ ಪೊಲೀಸರಿಗೆ ವಾಹನ, ಜನ ಸಂಚಾರ ನಿಯಂತ್ರಿಸುವುದು ಕಷ್ಟವಾಗುತ್ತದೆ. ಪ್ರತಿಭಟನಾಕಾರರು ಶಾಂತಿಯುತವಾಗಿ ಪ್ರತಿಭಟನೆ ಮಾಡುತ್ತಿರುವುದರಿಂದ ಯಾರನ್ನೂ ಕಸ್ಟಡಿಗೆ ಪೊಲೀಸರು ತೆಗೆದುಕೊಂಡಿಲ್ಲ. 

ನಗರಾದ್ಯಂತ ಅಂಗಡಿ-ಮುಂಗಟ್ಟುಗಳು ಇಂದು ತೆರೆದಿವೆ. ಶೇಷಾದ್ರಿ ರಸ್ತೆ, ಟೌನ್ ಹಾಲ್ ಮತ್ತು ಮೈಸೂರು ಬ್ಯಾಂಕ್ ವೃತ್ತಗಳಲ್ಲಿ ಪ್ರತಿಭಟನಾಕಾರರು ರಸ್ತೆ ತಡೆ ನಡೆಸಿದರು. ಮೆಜೆಸ್ಟಿಕ್, ಶಾಂತಿನಗರ, ಸ್ಯಾಟಲೈಟ್ ಬಸ್ ನಿಲ್ದಾಣಗಳಲ್ಲಿ ಕೆಎಸ್ ಆರ್ ಟಿಸಿ, ಬಿಎಂಟಿಸಿ ಬಸ್ ಸೇವೆ, ಆಟೋ ಸೇವೆಗಳು ಎಂದಿನಂತೆ ಸಂಚರಿಸುತ್ತಿವೆ. 
 

ದೆಹಲಿ-ಎನ್ ಸಿಆರ್ ಪ್ರದೇಶಗಳಲ್ಲಿ ಸುಮಾರು 4 ಲಕ್ಷ ಆಪ್ ಆಧಾರಿತ ಕ್ಯಾಬ್ ಗಳಿದಿದ್ದು ಅವು ಇಂದು ಮುಷ್ಕರ ನಡೆಸುತ್ತಿವೆ. ಆದರೆ ಉಳಿತ ಆಟೋ ಮತ್ತು ಟ್ಯಾಕ್ಸಿ ಒಕ್ಕೂಟಗಳು ಪ್ರತಿಭಟನೆಯಲ್ಲಿ ಪಾಲ್ಗೊಳ್ಳುತ್ತಿಲ್ಲ. ಐಜಿಐ ವಿಮಾನ ನಿಲ್ದಾಣ ಟ್ಯಾಕ್ಸಿ ಒಕ್ಕೂಟ ಅಧ್ಯಕ್ಷ ಕಿಶಂಜಿ, ಕಪ್ಪು ಮತ್ತು ಹಳದಿ ಟ್ಯಾಕ್ಸಿ ಸೇವೆಗಳು ಎಂದಿನಂತೆ ಮುಂದುವರಿಯಲಿದೆ ಎಂದರು. ದೆಹಲಿ-ಮೀರತ್ ಹೆದ್ದಾರಿಯನ್ನು ಅಪರಾಹ್ನ 3 ಗಂಟೆಯವರೆಗೆ ತಡೆಯಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com