ಮುಂಬೈನಂತೆ ಬೆಂಗಳೂರಿನಲ್ಲೂ 'ನೈಟ್ ಲೈಫ್' 24x7: ಪೊಲೀಸ್ ಆಯುಕ್ತರ ಚಿಂತನೆ

ಮುಂಬೈನಲ್ಲಿ ನಲ್ಲಿ ನೈಟ್ ಲೈಫ್ ಸಾಧ್ಯ ಎನ್ನುವದಾದರೆ ಬೆಂಗಳೂರಿನಲ್ಲಿ ಏಕಿಲ್ಲ? ಎಂದು ಹಲವರು ಪ್ರಶ್ನಿಸುತ್ತಿದ್ದು, ಇದಕ್ಕೆ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು ಉತ್ತರಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಮುಂಬೈನಲ್ಲಿ ನಲ್ಲಿ ನೈಟ್ ಲೈಫ್ ಸಾಧ್ಯ ಎನ್ನುವದಾದರೆ ಬೆಂಗಳೂರಿನಲ್ಲಿ ಏಕಿಲ್ಲ? ಎಂದು ಹಲವರು ಪ್ರಶ್ನಿಸುತ್ತಿದ್ದು, ಇದಕ್ಕೆ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು ಉತ್ತರಿಸಿದ್ದಾರೆ.

ಇತ್ತೀಚಿಗಷ್ಟೇ ಮಹಾರಾಷ್ಟ್ರ ಪ್ರವಾಸೋದ್ಯಮ ಸಚಿವ ಆದಿತ್ಯ ಠಾಕ್ರೆ ಅವರು, ಜನವರಿ 27ರಿಂದ ಮುಂಬೈನಲ್ಲಿ 24x7 ನೈಟ್ ಲೈಫ್ ಜಾರಿ ಗೊಳಿಸುವುದಾಗಿ ಘೋಷಿಸಿದ್ದರು.

ಇದೀಗ ಬೆಂಗಳೂರಿನಲ್ಲಿ ಹಲವು ಜನ ನೈಟ್ ಲೈಫ್ ಜಾರಿಗೊಳಿಸಬೇಕು. ರಾತ್ರಿ 11.30ಕ್ಕೆ ಏಕೆ ಬಂದ್ ಮಾಡಬೇಕು? ಎಂದು ಪ್ರಶ್ನಿಸುತ್ತಿದ್ದಾರೆ. ಬೆಂಗಳೂರು ಸಹ ಆರ್ಥಿಕವಾಗಿ ಅಭಿವೃದ್ಧಿ ಹೊಂದಿದ್ದು, ಜಾಗತಿಕ ಮಾಹಿತಿ ತಂತ್ರಜ್ಞಾನ ಹಬ್ ಆಗಿರುವುದರಿಂದ ಇಲ್ಲಿ ಜನ 24x7 ಕೆಲಸ ಮಾಡುತ್ತಿದ್ದಾರೆ. ರಾತ್ರಿ ಬೇಗ ಬಂದ್ ಮಾಡುವುದರಿಂದ 24x7 ಕೆಲಸ ಮಾಡುವವರಿಗೆ ತೊಂದರೆಯಾಗುತ್ತದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇನ್ನು ಈ ಬಗ್ಗೆ ಇಂಡಿಯನ್ ಎಕ್ಸ್ ಪ್ರೆಸ್ ಗೆ ಪ್ರತಿಕ್ರಿಯಿಸಿದ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು, ಬೆಂಗಳೂರು, ಮುಂಬೈಗಿಂತ ವಿಭಿನ್ನವಾದ ಸಮಸ್ಯೆಗಳನ್ನು ಎದುರಿಸುತ್ತಿದೆ. ಬೆಂಗಳೂರಿನಲ್ಲಿ ಪೊಲೀಸರ ಸಂಖ್ಯೆ ಕೇವಲ 18 ಸಾವಿರ ಇದೆ. ಮುಂಬೈನಲ್ಲಿ 40 ಸಾವಿರ ಪೊಲೀಸ್ ಬಲ ಇದೆ ಎಂದರು.

ಬೆಂಗಳೂರಿನಲ್ಲಿ ನೈಟ್ ಲೈಫ್ ಗೆ ಅವಕಾಶ ನೀಡುವ ಬಗ್ಗೆ ಈಗಲೇ ಹೇಳುವುದು ಕಷ್ಟ. ನಮ್ಮ ಹಿರಿಯ ಅಧಿಕಾರಿಗಳೊಂದಿಗೆ ನಾನು ಈ ಬಗ್ಗೆ ಚರ್ಚಿಸಿಲ್ಲ. ಗಣರಾಜ್ಯೋತ್ಸವದ ಬಳಿಕ ಬೆಂಗಳೂರಿನಲ್ಲೂ ನೈಟ್ ಲೈಫ್ ಸಾಧ್ಯವೇ ಎಂಬುದರ ಬಗ್ಗೆ ಚಿಂತನೆ ಮಾಡುತ್ತೇವೆ. ಈ ಸಂಬಂಧ ಡಿಸಿಪಿಗಳೊಂದಿಗೆ ಮತ್ತು ಇತರೆ ಇಲಾಖೆಗಳೊಂದಿಗೆ ಸಭೆ ನಡೆಸುತ್ತೇವೆ ಎಂದು ಭಾಸ್ಕರ್ ರಾವ್ ಹೇಳಿದ್ದಾರೆ.

ಇನ್ನು ಮುಂಬೈನಂತೆ ಬೆಂಗಳೂರಿನಲ್ಲೂ ವಾಣಿಜ್ಯ ಮಳಿಗೆಗಳು 24x7 ಕಾರ್ಯನಿರ್ವಹಿಸುವುದಕ್ಕೆ ಅವಕಾಶ ನೀಡಬಹುದು. ನಗರದಲ್ಲಿ ಜನ ಮುಕ್ತವಾಗಿ ಜೀವನ ಮಾಡಬೇಕು ಎಂದು ಮಾಜಿ ಪೊಲೀಸ್ ಮಹಾ ನಿರ್ದೇಶಕ ಎಸ್ ಟಿ ರಮೇಶ್ ಅವರು ಹೇಳಿದ್ದಾರೆ. ಅಲ್ಲದೆ ನಗರ 24x7 ಓಪನ್ ಇರುವುದರಿಂದ ಮತ್ತಷ್ಟು ಉದ್ಯೋಗ ಸೃಷ್ಟಿಯಾಗಲಿದೆ ಎಂದಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com