ಗಲ್ಲಿಗೇರಿಸುತ್ತಾರೆಂದರೆ ಅದಕ್ಕಿಂತಲೂ ತುರ್ತು ವಿಚಾರ ಮತ್ತೊಂದಿಲ್ಲ: ಅಪರಾಧಿ ಮುಕೇಶ್ ಅರ್ಜಿ ತುರ್ತು ವಿಚಾರಣೆಗೆ ಸುಪ್ರೀಂ ಸಮ್ಮತಿ
ನವದೆಹಲಿ: ನಿರ್ಭಯಾ ಹತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರಪತಿಗಳು ಕ್ಷಮಾದಾನ ಅರ್ಜಿ ತಿರಸ್ಕರಿಸಿದ್ದನ್ನು ಪ್ರಶ್ನಿಸಿ ಅಪರಾಧಿ ಮುಕೇಶ್ ಕುಮಾರ್ ಸಿಂಗ್ ಸಲ್ಲಿಸಿದ್ದ ಅರ್ಜಿಯ ತುರ್ತು ವಿಚಾರಣೆಗೆ ಸುಪ್ರೀಂಕೋರ್ಟ್ ಸೋಮವಾರ ಸಮ್ಮತಿ ಸೂಚಿಸಿದೆ.
ಯಾರನ್ನಾದರೂ ಗಲ್ಲಿಗೇರಿಸುತ್ತಿದ್ದಾರೆಂದೆ ಅದಕ್ಕಿಂದಲೂ ತುರ್ತು ವಿಚಾರ ಮತ್ತೊಂದಿಲ್ಲ ಎಂದು ಹೇಳಿರುವ ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೊಬಡೆ ನೇತೃತ್ವದ ಪೀಠ, ಮರಣದಂಡನೆ ಪ್ರಕರಣದ ವಿಚಾರಣೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ ಎಂದು ತಿಳಿಸಿದೆ. ಅಲ್ಲದೆ, ಗಲ್ಲಿಗೇರಿಸಲು ನಿರ್ಧರಿಸಲಾಗಿರುವ ಕಾರಣವನ್ನು ಉಲ್ಲೇಖಿಸುವ ಅಧಿಕಾರಿಗಳನ್ನು ಸಂಪರ್ಕಿಸುವಂತೆ ಸಿಂಗ್ ಪರ ವಕೀಲರಿಗೆ ಸೂಚಿಸಿದ್ದಾರೆ.
ನಿರ್ಭಯಾ ಪ್ರಕರಣದ ನಾಲ್ವರು ಅಪರಾಧಿಗಳಿಗೆ ಫೆಬ್ರವರಿ 1 ರ ಬೆಳಿಗ್ಗೆ 6 ಗಂಟೆಗೆ ಗಲ್ಲಿಗೇರಿಸಲು ದಿನಾಂಕ ಹಾಗೂ ಸಮಯ ನಿಗದಿಯಾಗಿದೆ. ಅಪರಾಧಿಗಳನ್ನು ಗಲ್ಲಿಗೇರಿಸುವಂತೆ ದೆಹಲಿಯ ಪಾಟಿಯಾಲ ಹೌಸ್ ನ್ಯಾಯಾಲಯ ವಾರೆಂಟ್ ಜಾರಿ ಮಾಡಿತ್ತು.
ಈ ನಡುವೆ ಪ್ರಕರಣದ ಅಪರಾಧಿಯಾಗಿರುವ ಮುಕೇಶ್ ಕ್ಷಮಾದಾನ ಅರ್ಜಿಯನ್ನು ಸಲ್ಲಿಸಿದ್ದ. ಈ ಅರ್ಜಿಯನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಜನವರಿ 17 ರಂದು ತಿರಸ್ಕರಿಸಿದ್ದರು. ಇದನ್ನು ಪ್ರಶ್ನಿಸಿ ಜನವರಿ 25 ರಂದು ಮುಕೇಶ್ ಪರ ವಕೀಲರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಇದೀಗ ಈ ಅರ್ಜಿಯ ತುರ್ತು ವಿಚಾರಣೆ ನಡೆಸಲು ಸುಪ್ರೀಂಕೋರ್ ಸಮ್ಮತಿ ನೀಡಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ