ಕೊರೋನಾ ವಿರುದ್ಧದ ಹೋರಾಟದಲ್ಲಿ ಭಾರತ ಉತ್ತಮ ಸ್ಥಿತಿಯಲ್ಲಿಯೇ ಇದೆ. ಆದರೆ ಸಮಾಧಾನ ಪಡುವ ಹಾಗಿಲ್ಲ: ಕೇಂದ್ರ ಸರ್ಕಾರ

ಕೊರೋನಾ ವಿರುದ್ಧದ ಹೋರಾಟದಲ್ಲಿ ಭಾರತ ಉತ್ತಮ ಸ್ಥಿತಿಯಲ್ಲಿಯೇ ಇದೆಯಾದರೂ ಸಮಾಧಾನ ಪಟ್ಟುಕೊಳ್ಳುವಂತಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ.
ಹರ್ಷವರ್ಧನ್
ಹರ್ಷವರ್ಧನ್
Updated on

ನವದೆಹಲಿ: ಕೊರೋನಾ ವಿರುದ್ಧದ ಹೋರಾಟದಲ್ಲಿ ಭಾರತ ಉತ್ತಮ ಸ್ಥಿತಿಯಲ್ಲಿಯೇ ಇದೆಯಾದರೂ ಸಮಾಧಾನ ಪಟ್ಟುಕೊಳ್ಳುವಂತಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ.

ಕೊರೋನಾ ವೈರಸ್ ಸಾಂಕ್ರಾಮಿಕದ ಹಿನ್ನಲೆಯಲ್ಲಿ 16ನೇ ಉನ್ನತ ಮಟ್ಟದ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಅವರು, ಕೊರೋನಾ ವೈರಸ್ ತತ್ ಕ್ಷಣದ ದತ್ತಾಂಶದ ಮಾಹಿತಿ ನೀಡಿದರು.  'ಕಳೆದ 24 ಗಂಟೆಗಳಲ್ಲಿ ದೇಶದ ವಿವಿಧ ರಾಜ್ಯಗಳಲ್ಲಿ ಒಟ್ಟಾರೆ 4,785 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಟಾರ್ಜ್ ಆಗಿದ್ದು, ಆ ಮೂಲಕ ಭಾರತದಲ್ಲಿ 1,29,214 ಗುಣಮುಖರಾಗಿದ್ದಾರೆ. ಇದರೊಂದಿಗೆ ಭಾರತದ ಕೊರೋನಾ ವೈರಸ್ ಸೋಂಕಿತರ ಗುಣಮುಖ ಪ್ರಮಾಣ ಶೇ.48.47ಕ್ಕೆ ಏರಿಕೆಯಾಗಿದೆ. ಭಾರತದಲ್ಲಿ ಸೋಂಕಿತರ ಸಂಖ್ಯೆ 2,66,598ಕ್ಕೆ ಏರಿಕೆಯಾಗಿದ್ದು, ಕಳೆದ 24 ಗಂಟೆಗಳಲ್ಲಿ 7,466 ಹೊಸ ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ. ಅಂತೆಯೇ ದೇಶಾದ್ಯಂತ ಇಂದು 266 ಸೋಂಕಿತರು ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ 9,987ಕ್ಕೆ ಏರಿಕೆಯಾಗಿದೆ.  ದೇಶದಲ್ಲಿ ಈ ವರೆಗೂ 1,29,214 ಸೋಂಕಿತರು ಗುಣಮುಖರಾಗಿದ್ದು, 1,29,917 ಸಕ್ರಿಯ ಪ್ರಕರಣಗಳಿವೆ ಎಂದು ಅವರು ಹೇಳಿದರು.

ಅಂತೆಯೇ ದೇಶ ಅನ್ ಲಾಕ್ 1.0 ಹಂತ ಜಾರಿ ಮಾಡಲಾಗಿದ್ದು, ಮತ್ತಷ್ಟು ಕ್ಷೇತ್ರಗಳಲ್ಲಿ ನಿಯಮ ಸಡಿಲಿಕೆ ಮಾಡಲಾಗಿದೆ. ದೇಶದಲ್ಲಿ ಕೊರೋನಾ ಸೋಂಕಿತರ ಪ್ರಮಾಣ ಹೆಚ್ಚಾಗುತ್ತಿದ್ದು, ಈ ನಿಟ್ಟಿನಲ್ಲಿ ದೇಶದ ನಾಗರಿಕರು ಶಿಸ್ತಿನಿಂದ ಇರಬೇಕು. ಸಾಮಾಜಿಕ ಅಂತರ, ಮಾಸ್ಕ್ ಧರಿಸುವುದು, ನೈರ್ಮಲ್ಯ ಮತ್ತು ಉಸಿರಾಟದ ಶಿಷ್ಟಾಚಾರ ಸೇರಿದಂತೆ ಆರೋಗ್ಯ ಇಲಾಖೆ ನೀಡಲಾಗಿರುವ ಮಾರ್ಗದರ್ಶಿ ಸೂತ್ರಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಹೇಳಿದರು.

ಕೊರೋನಾ ವೈರಸ್ ವಿರುದ್ಧದ ಹೋರಾಟದಲ್ಲಿ ಈಗಲೂ ಭಾರತ ಉತ್ತಮ ಸ್ಥಿತಿಯಲ್ಲಿಯೇ ಇದೆ. ಹಾಗೆಂದ ಮಾತ್ರಕ್ಕೆ ನಾವು ಸಮಾಧಾನ ಪಟ್ಟುಕೊಳ್ಳಬಾರದು. ದೇಶದ ಪ್ರತೀಯೊಬ್ಬ ನಾಗರಿಕನೂ ಆರೋಗ್ಯಸೇತು ಆ್ಯಪ್ ಅನ್ನು ಡೌನ್ಲೋಡ್ ಮಾಡಿಕೊಂಡು ಬಳಕೆ ಮಾಡಬೇಕು. ಇದರಿಂದ ಕೊರೋನಾ ಕುರಿತು ತತ್ ಕ್ಷಣದ ಮಾಹಿತಿಗಳು ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳು ಎಲ್ಲರಿಗೂ ತಿಳಿಯುತ್ತದೆ. ದೇಶದಲ್ಲಿ ಈ ವರೆಗೂ ಈ ಆ್ಯಪ್ ಅನ್ನು 12.55ಕೋಟಿ ಬಳಕೆದಾರರು ಬಳಕೆ ಮಾಡುತ್ತಿದ್ದಾರೆ. ದೇಶದಲ್ಲಿ 958 ಆಸ್ಪತ್ರೆಗಳನ್ನು ಕೊರೋನಾಗಾಗಿಯೇ ಮೀಸಲಿಡಲಾಗಿದೆ. ಅಲ್ಲದೆ 1,67,883 ಪ್ರತ್ಯೇಕಿತ ಬೆಡ್ ಗಳಿವೆ. 21,614 ICU ಮತ್ತು 73,469 ಆಕ್ಸಿಜನ್ ಇರುವ ಬೆಡ್ ಗಳಿವೆ.  2,313 ಕೋವಿಡ್-19 ಆರೋಗ್ಯ ಕೇಂದ್ರಗಳಿದ್ದು, ಇಲ್ಲಿಯೂ 1,33,037 ಪ್ರತ್ಯೇಕಿತ ಬೆಡ್ ಗಳು ಮತ್ತು 10,748 ICU ಬೆಡ್ ಗಳು ಮತ್ತು 46,635 ಆಕ್ಸಿಜನ್ ಬೆಡ್ ಗಳನ್ನು ಬಳಕೆಗೆ ಸಿದ್ಧವಾಗಿದೆ. ಇನ್ನೂ 7,525 ಹೊಸ ಕೋವಿಡ್-19 ಕೇಂದ್ರಗಳಲ್ಲಿ 7,10,642 ಬೆಡ್ ಗಳು ಬಳಕೆ ಸಿದ್ಧವಾಗಲಿವೆ.  ಈ ಪೈಕಿ 21,494 ವೆಂಟಿಲೇಟರ್  ಬೆಡ್ ಗಳಿವೆ ಎಂದು ಹರ್ಷವರ್ಧನ್ ಮಾಹಿತಿ ನೀಡಿದರು.  

ಅಂತೆಯೇ ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರ ಹೆಚ್ಚುವರಿಯಾಗಿ 60,848 ವೆಂಟಿಲೇಟರ್ ಗಳ ಖರೀದಿಗೆ ಆರ್ಡರ್ ನೀಡಲಿದೆ. ಇದಲ್ಲದೆ 128.48 ಲಕ್ಷ ಎನ್ 95 ಮಾಸ್ಕ್ ಗಳು, 104.74 ಲಕ್ಷ ಪಿಪಿಇ ಕಿಟ್ ಗಳನ್ನು ದೇಶದ ವಿವಿಧ ರಾಜ್ಯಗಳಿಗೆ ರವಾನೆ ಮಾಡಲಾಗುತ್ತದೆ. ಐಸಿಎಂಆರ್ ನ ಕೊರೋನಾ ಟೆಸ್ಟ್ ಸಾಮರ್ಥ್ಯವನ್ನು 784 ಲ್ಯಾಬ್ ಗಳಿಗೆ ಹೆಚ್ಚಿಸಲಾಗಿದ್ದು ಈ ಪೈಕಿ 553 ಸರ್ಕಾರಿ ಲ್ಯಾಬ್ ಗಳು ಮತ್ತು 231 ಖಾಸಗಿ ಲ್ಯಾಬ್ ಗಳಾಗಿವೆ. ದೇಶದಲ್ಲಿ ಈ ವರೆಗೂ  49 ಲಕ್ಷ ಕೊರೋನಾ ಟೆಸ್ಟ್ ಗಳನ್ನು ಮಾಡಲಾಗಿದೆ. ಕಳೆದ 24 ಗಂಟೆಗಳಲ್ಲಿ 1,41,682 ಮಾದರಿಗಳನ್ನು ಪರೀಕ್ಷಿಸಲಾಗಿದೆ ಎಂದು ಹೇಳಿದರು.

ಇನ್ನು ಇಂದು ನಡೆದ ಸಭೆಯಲ್ಲಿ ವಿದೇಶಾಂಗ ಸಚಿವ ಜೈಶಂಕರ್, ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ, ಗೃಹ ವ್ಯವಹಾರಗಳ ಸಚಿವ ನಿತ್ಯಾನಂದ ರೈ, ಸಾಗಣೆ ಮತ್ತು ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಮನ್ಸುಖ್ ಲಾಲ್ ಮಾಂಡವಿಯಾ ಮತ್ತು ಆರೋಗ್ಯ ರಾಜ್ಯ ಸಚಿವ ಅಶ್ವಿನಿ ಕುಮಾರ್ ಚೌಬೆ ಅವರು ಪಾಲ್ಗೊಂಡಿದ್ದರು. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com