ಭಾರತ-ಚೀನಾ ಗಡಿ ಭಾಗದಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ: ಸೇನಾ ಮುಖ್ಯಸ್ಥ ಜನರಲ್ ಎಂ.ಎಂ. ನಾರವಾನೆ

ಚೀನಾ ಗಡಿ ಭಾಗದಲ್ಲಿ ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಕಾರ್ಪ್ಸ್ ಕಮಾಂಡರ್ ಮಟ್ಟದಿಂದ ಆರಂಭವಾದ ಮಾತುಕತೆ ನಂತರ ನಿರಂತರವಾಗಿ ಮುಂದುವರಿದು ನಂತರ ಸ್ಥಳೀಯ ಮಟ್ಟದಲ್ಲಿ ಕಮಾಂಡರ್ ಗಳ ಮಟ್ಟದಲ್ಲಿ ನಡೆದು ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ ಎಂದು ಭಾರತೀಯ ಸೇನೆಯ ಮುಖ್ಯಸ್ಥ ಜನರಲ್ ಎಂ.ಎಂ.ನಾರವಾನೆ ತಿಳಿಸಿದ್ದಾರೆ.
ಜನರಲ್ ಎಂ ಎಂ ನಾರವಾನೆ
ಜನರಲ್ ಎಂ ಎಂ ನಾರವಾನೆ

ಡೆಹ್ರಾಡೂನ್:ಚೀನಾ ಗಡಿ ಭಾಗದಲ್ಲಿ ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಗಡಿ ವಿಚಾರದಲ್ಲಿ ಎರಡೂ ದೇಶಗಳ ಮಧ್ಯೆ ಇರುವ ಭಿನ್ನಾಭಿಪ್ರಾಯ ಸದ್ಯದಲ್ಲಿಯೇ ಬಗೆಹರಿಯುವ ವಿಶ್ವಾಸವಿದೆ ಎಂದು ಭಾರತೀಯ ಸೇನೆಯ ಮುಖ್ಯಸ್ಥ ಜನರಲ್ ಎಂ ಎಂ ನಾರವಾನೆ ಹೇಳಿದ್ದಾರೆ.

ಪೂರ್ವ ಲಡಾಕ್ ನಲ್ಲಿ ಕಾರ್ಪ್ಸ್ ಕಮಾಂಡರ್ ಮಟ್ಟದಿಂದ ಆರಂಭವಾದ ಮಾತುಕತೆ ನಂತರ ನಿರಂತರವಾಗಿ ಮುಂದುವರಿದು ಸ್ಥಳೀಯ ಮಟ್ಟದಲ್ಲಿ ಕಮಾಂಡರ್ ಗಳ ಮಟ್ಟದಲ್ಲಿ ನಡೆದು ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ. ಭಾರತ-ಚೀನಾ ಮಧ್ಯೆ ಈಗಾಗಲೇ ಸಾಕಷ್ಟು ಸುತ್ತಿನ ಮಾತುಕತೆಗಳು ನಡೆದಿರುವುದರಿಂದ ಭಿನ್ನಾಭಿಪ್ರಾಯಗಳು ಮರೆಯಾಗಿ ಗಡಿಯಲ್ಲಿ ಶಾಂತಿ ನೆಲೆಸುತ್ತದೆ ಎಂಬ ನಂಬಿಕೆ ನಮಗಿದೆ ಎಂದು ಡೆಹ್ರಾಡೂನ್ ನಲ್ಲಿ ಭಾರತೀಯ ಮಿಲಿಟರಿ ಅಕಾಡೆಮಿಯ ಪಾಸಿಂಗ್ ಔಟ್ ಪೆರೇಡ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ನಾರವಾನೆ ಹೇಳಿದರು.

ಎರಡೂ ದೇಶಗಳ ಮಿಲಿಟರಿಗಳು ನಿಯೋಜಿಸಿದ್ದ ಸೇನೆಗಳನ್ನು ಹಂತಹಂತವಾಗಿ ಹಿಂತೆಗೆದುಕೊಳ್ಳುತ್ತಿವೆ.ನಾವು ಉತ್ತರದಿಂದ ಪ್ರಾರಂಭಿಸಿ ಗಾಲ್ವಾನ್ ನದಿಯ ಪ್ರದೇಶದಿಂದ ಸಾಕಷ್ಟು ಸೇನೆಯನ್ನು ಹಿಂಪಡೆದಿದ್ದೇವೆ. ಮುಂದಿನ ದಿನಗಳಲ್ಲಿ ಪರಿಸ್ಥಿತಿ ಖಂಡಿತವಾಗಿಯೂ ಸುಧಾರಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇನ್ನು ನೇಪಾಳ ಸಂಸತ್ತಿನಲ್ಲಿ ರಾಜಕೀಯ ಭೂಪಟವನ್ನು ಅಲ್ಲಿನ ಸರ್ಕಾರ ಪರಿಷ್ಕೃತಗೊಳಿಸಿರುವ ಬಗ್ಗೆ ಕೇಳಿದಾಗ, ನೇಪಾಳದ ಜೊತೆಗೆ ನಮ್ಮ ಸಂಬಂಧ ಗಟ್ಟಿಯಾಗಿದೆ. ಆ ದೇಶದ ಜೊತೆಗೆ ಭೌಗೋಳಿಕ, ಸಾಂಸ್ಕೃತಿಕ, ಐತಿಹಾಸಿಕ, ಧಾರ್ಮಿಕ ಸಂಬಂಧಗಳ ಬೆಸುಗೆಯಿದೆ. ಸಂಬಂಧವನ್ನು ನಂಬುವ ಮಂದಿ ನಮ್ಮಲ್ಲಿ ಇದ್ದಾರೆ. ಈ ಸಂಬಂಧ ಇನ್ನು ಮುಂದೆಯೂ ಮುಂದುವರಿಯಲಿದೆ ಎಂದು ಜ.ನಾರವಾನೆ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com