ಕೊರೋನ ಸೋಂಕಿತರ ಹೆಚ್ಚಳ: ಜೂನ್ 10 ರಿಂದ ತಮಿಳುನಾಡಿನ ಈ ನಗರಗಳಲ್ಲಿ ಸಂಪೂರ್ಣ ಲಾಕ್ ಡೌನ್!
ಚೆನ್ನೈ: ಮಾರಕ ಕೊರೋನಾ ವೈರಸ್ ಗೆ ತತ್ತರಿಸಿ ಹೋಗಿರುವ ತಮಿಳುನಾಡಿನಲ್ಲಿ ಪರಿಸ್ಥಿತಿ ನಿಯಂತ್ರಿಸಲು ಅಲ್ಲಿನ ಸರ್ಕಾರ ಪ್ರಮುಖ ನಗರಗಳಲ್ಲಿ ಜೂನ್ 19ರಿಂದ ಸಂಪೂರ್ಣ ಲಾಕ್ ಡೌನ್ ಹೇರಲು ಮುಂದಾಗಿದೆ.
ಹೌದು.. ತಮಿಳುನಾಡಿನಲ್ಲಿ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದ್ದು, ಇದೇ ಕಾರಣಕ್ಕೆ ಮದ್ರಾಸ್ ಹೈಕೋರ್ಟ್ ಕೂಡ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತ್ತು, ಕೋವಿಡ್-19 ನಿರ್ವಹಣೆಯಲ್ಲಿ ಸರ್ಕಾರ ಸಂಪೂರ್ಣವಾಗಿ ಹಿಂದೆ ಬೀಳುತ್ತಿದೆ ಎಂದು ಛಾಟಿ ಬೀಸಿತ್ತು. ಇದೀಗ ಎಚ್ಚೆತ್ತುಕೊಂಡಿರುವ ಇ ಪಳನಿ ಸ್ವಾಮಿ ಸರ್ಕಾರ ತಮಿಳುನಾಡಿನಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಿರುವ ಪ್ರಮುಖ ನಗರಗಳಲ್ಲಿ ಸಂಪೂರ್ಣ ಲಾಕ್ ಡೌನ್ ಘೋಷಣೆ ಮಾಡಿದೆ.
ತಮಿಳುನಾಡು ರಾಜಧಾನಿ ಚೆನ್ನೈ, ತಿರುವಳ್ಳೂರ್, ಚೆಂಗಲ್ ಪೇಟ್ ಮತ್ತು ಕಾಂಚಿಪುರಂನಲ್ಲಿ ಸಂಪೂರ್ಣ ಲಾಕ್ ಡೌನ್ ಘೋಷಣೆ ಮಾಡಿದೆ. ಅಂತೆಯೇ ಸೋಂಕಿತರ ಸಂಖ್ಯೆ ಕಡಿಮೆ ಇರುವ ಮತ್ತು ಸೋಂಕಿತರೇ ಇಲ್ಲದ ಪ್ರದೇಶಗಳಲ್ಲಿ ಲಾಕ್ ಡೌನ್ ವಿನಾಯಿತಿ ಕೂಡ ನೀಡಲಾಗಿದೆ.
ಬೆಳಗ್ಗೆ 6 ರಿಂದ ಮಧ್ಯಾಹ್ನ 2 ಗಂಟೆಯವರೆಗೂ ಮಾತ್ರ ದಿನಸಿ ಅಂಗಡಿ ಓಪನ್
ಅಂತೆಯೇ ಸೋಂಕಿತರ ಸಂಖ್ಯೆ ಅತೀ ಹೆಚ್ಚಾಗಿರುವ ಚೆನ್ನೈನಲ್ಲಿ ಸಂಪೂರ್ಣ ಲಾಕ್ ಡೌನ್ ಘೋಷಣೆಯಾಗಿದ್ದು, ದಿನಸಿ ಅಂಗಡಿ ಕೂಡ ಬೆಳಗ್ಗೆ 6 ರಿಂದ ಮಧ್ಯಾಹ್ನ 2 ಗಂಟೆಯವರೆಗೂ ಮಾತ್ರ ತೆರೆಯಲು ಅನುಮತಿ ನೀಡಲಾಗಿದೆ. ಈ ನಿಯಮ ಜೂನ್ 30ರವರೆಗೂ ಜಾರಿಯಲ್ಲಿರಲಿದೆ. ಬಳಿಕ ಪರಿಸ್ಥಿತಿ ಅವಲೋಕಿಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಹೇಳಲಾಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ