ಕೇರಳ: ನಿಶ್ಚಿತಾರ್ಥ ಕಾರ್ಯಕ್ರಮ, ಚಿತ್ರಮಂದಿರ, ಮಾಲ್ ಸುತ್ತಿದ ಕೊರೋನಾ ವೈರಸ್ ಪೀಡಿತ ವ್ಯಕ್ತಿ!

ಕೊರೋನಾ ವೈರಸ್ ಪೀಡಿತ ವ್ಯಕ್ತಿಯೊಬ್ಬ ನಿಶ್ಚಿತಾರ್ಥ ಕಾರ್ಯಕ್ರಮ, ಚಿತ್ರಮಂದಿರ ಹಾಗೂ ಮಾಲ್ ಸುತ್ತಿರುವ ಘಟನೆ ಕೇರಳದಲ್ಲಿ ನಡೆದಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ತ್ರಿಸೂರು: ಕೊರೋನಾ ವೈರಸ್ ಪೀಡಿತ ವ್ಯಕ್ತಿಯೊಬ್ಬ ನಿಶ್ಚಿತಾರ್ಥ ಕಾರ್ಯಕ್ರಮ, ಚಿತ್ರಮಂದಿರ ಹಾಗೂ ಮಾಲ್ ಸುತ್ತಿರುವ ಘಟನೆ ಕೇರಳದಲ್ಲಿ ನಡೆದಿದೆ. 

21 ವರ್ಷದ ವ್ಯಕ್ತಿಯೊಬ್ಬರಲ್ಲಿ ವೈರಸ್ ದೃಢಪಟ್ಟಿದ್ದು, ವೈರಸ್ ಪೀಡಿತ ವ್ಯಕ್ತಿ ಚಿತ್ರಮಂದಿರ, ಮಾಲ್ ಹಾಗೂ ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ಭೇಟಿ ನೀಡಿದ್ದ ಎಂಬ ವಿಚಾರ ಇದೀಗ ಬೆಳಕಿಗೆ ಬಂದಿದೆ. 

ಸೋಂಕು ಪೀಡಿತನ ಸಂಬಂಧಿಕನ 8 ತಿಂಗಳ ಮಗುವಿನಲ್ಲಿ ವೈರಸ್ ಇರುವ ಲಕ್ಷಣಗಳು ಕಾಣಿಸಿಕೊಂಡಿದ್ದು, ಮಗುವನ್ನು ನಿರ್ದಿಷ್ಟ ಕೊಠಡಿಯಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತ್ರಿಸೂರು ಜಿಲ್ಲಾಧಿಕಾರಿ ಎಸ್.ಶನವಾಸ್ ಹೇಳಿದ್ದಾರೆ. 

ಕೊರೋನಾ ವೈರಸ್ ಲಕ್ಷಣಗಳು ಕಂಡು ಬಂದಿದ್ದೇ ಆದರೆ, ಮನೆಗಳಲ್ಲಿಯೇ ಉಳಿಯುವಂತೆ, ಮಾಹಿತಿ ನೀಡಿ ಚಿಕಿತ್ಸೆ ಪಡೆದುಕೊಳ್ಳುವಂತೆ ನಾನಾ ರೀತಿಯ ಜಾಗೃತಿ ಮೂಡಿಸುತ್ತಿದ್ದರೂ, ಯುವಕರು ಯಾವುದೇ ಸಲಹೆಗಳನ್ನು ಕೇಳದೆ, ಮನಬಂದಂತೆ ನಡೆದುಕೊಂಡು ಇತರರಿಗೆ ಪ್ರಾಣಕ್ಕೆ ಹಾನಿಯುಂಟು ಮಾಡುತ್ತಿರುವುದು ನಿಜಕ್ಕೂ ವಿಪರ್ಯಾಸದ ಸಂಗತಿಯಾಗಿದೆ. 

ಇದೀಗ ಸೋಂಕು ಪೀಡಿತ ವ್ಯಕ್ತಿಯ ತಂದೆ, ತಾಯಿ ಹಾಗೂ ಸಹೋದರಿಯ ಮೇಲೆ ಆರೋಗ್ಯ ಇಲಾಖೆ ನಿಗಾ ಇರಿಸಿದ್ದು, ಎಲ್ಲರನ್ನೂ ಪ್ರತ್ಯೇಕ ಕೊಠಡಿಯಲ್ಲಿರಿಸಿದೆ. ಈ ವರೆಗೂ 355 ಮಂದಿಯಲ್ಲಿ ವೈರಸ್ ಪತ್ತೆಯಾಗಿದೆ ಎಂದು ಕೇರಳ ಸರ್ಕಾರ ಮಾಹಿತಿ ನೀಡಿದೆ,. ಕೊಡುಂಗಲ್ಲೂರ್ ಮೂಲದ ನಿವಾಸಿಯಾಗಿರುವ ಸೋಂಕು ಪೀಡಿತ ವ್ಯಕ್ತಿ, ಕೊರೋನಾ ಪೀಡಿತ ಕತಾರ್ ನಿಂದ ಕೊಚ್ಚಿಗೆ ಫೆ.29 ರಂದು ಆಗಮಿಸಿದ್ದ ಎಂದು ಹೇಳಲಾಗುತ್ತಿದೆ. ಮಾರ್ಚ್ 5ರಿಂದ ವ್ಯಕ್ತಿಯಲ್ಲಿ ವೈರಸ್ ಇರುವ ಲಕ್ಷಣಗಳು ಪತ್ತೆಯಾಗಿತ್ತು. ಇದರಂತೆ ಸ್ಥಳೀಯ ಕ್ಲಿನಿಕ್'ಗೆ ತೆರಳಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಇದೀಗ ವ್ಯಕ್ತಿಗೆ ಚಿಕಿತ್ಸೆ ನೀಡಿದ್ದ ವೈದ್ಯನನ್ನೂ ಪ್ರತ್ಯೇಕ ಕೊಠಡಿಯಲ್ಲಿರಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com