ಕೊರೋನಾ ನಿಯಂತ್ರಣದಲ್ಲಿ ಮಲೇರಿಯಾ ನಿರೋಧಕ ಔಷಧ ಪರಿಣಾಮಕಾರಿ ಎಂಬ ಸಲಹೆ, ಹೈಡ್ರಾಕ್ಸಿಕ್ಲೋರೋಕ್ವಿನ್ ರಫ್ತಿಗೆ ಸರ್ಕಾರ ನಿಷೇಧ

ಕೊರೋನಾ ವೈರಸ್ ಹರಡುವಿಕೆಯ ನಡುವೆ ಜಾಗತಿಕ ಬೇಡಿಕೆ ಹೆಚ್ಚಾಗಿದ್ದರಿಂದ ತಕ್ಷಣದಿಂದಲೇ ಜಾರಿಗೆ ಬರುವಂತೆ ಮಲೇರಿಯಾ ನಿರೋಧಕ ಔಷಧ ಹೈಡ್ರಾಕ್ಸಿಕ್ಲೋರೊಕ್ವಿನ್ ರಫ್ತಿಗೆ ಸರ್ಕಾರ ನಿಷೇಧಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಕೊರೋನಾ ವೈರಸ್ ಹರಡುವಿಕೆಯ ನಡುವೆ ಜಾಗತಿಕ ಬೇಡಿಕೆ ಹೆಚ್ಚಾಗಿದ್ದರಿಂದ ತಕ್ಷಣದಿಂದಲೇ ಜಾರಿಗೆ ಬರುವಂತೆ ಮಲೇರಿಯಾ ನಿರೋಧಕ ಔಷಧ ಹೈಡ್ರಾಕ್ಸಿಕ್ಲೋರೊಕ್ವಿನ್ ರಫ್ತಿಗೆ ಸರ್ಕಾರ ನಿಷೇಧಿಸಿದೆ.

ರಫ್ತುಗಳು ಈಗಾಗಲೇ ಅಸ್ತಿತ್ವದಲ್ಲಿರುವ ಒಪ್ಪಂದಗಳನ್ನು ಪೂರೈಸಲು ಸೀಮಿತವಾಗಿರುತ್ತದೆ. ಆದರೆ ಮಾನವೀಯ ಆಧಾರದ ಮೇಲೆ ಕೆಲ ಸಾಗಣೆಯನ್ನು ‘ಒಂದೊಂದರಂತೆ ಆಧಾರದ’ ಮೇಲೆ ಅನುಮತಿಸಬಹುದಾಗಿದೆ ಎಂದು ವಿದೇಶ ವಾಣಿಜ್ಯ ಮಹಾ ನಿರ್ದೇಶನಾಲಯ ಹೊರಡಿಸಿರುವ  ಹೇಳಿಕೆಯಲ್ಲಿ ತಿಳಿಸಲಾಗಿದೆ.

ಈ ಔಷಧವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕರೋನವೈರಸ್ ಚಿಕಿತ್ಸೆಯ ಸಂಭಾವ್ಯ ಸಂಭಾವ್ಯ ಔಷಧವೆಂದು ಹೆಸರಿಸಿದ್ದಾರೆ. ಇನ್ನು ಮಲೇರಿಯಾ ಮತ್ತು ಲುಪಸ್ ಸೋಂಕಿಗೆ ನೀಡಲಾಗುವ ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧಿಯು ರೋಗ ನಿರೋಧಕವಾಗಿ ಕಾರ್ಯ  ನಿರ್ವಹಿಸಲಿದ್ದು, ಇದೇಕಾರಣಕ್ಕೆ ಇದು ಕೊರೋನಾ ಸೋಂಕು ನಿಯಂತ್ರಣದಲ್ಲಿ ಪರಿಣಾಮಕಾರಿಯಾಗಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಆದರೆ ಈ ಕುರಿತು ಯಾವುದೇ ವೈಜ್ಞಾನಿಕ ಸಂಶೋಧನೆ ಇದನ್ನು ಸಾಬೀತು ಮಾಡಿಲ್ಲ. ಆದರೆ ಫ್ರಾನ್ಲ್ ನಲ್ಲಿ ಕೊರೋನಾ ಸೋಂಕಿಗೆ  ತುತ್ತಾಗಿರುವ ರೋಗಿಗಳಿಗೆ ಇದೇ ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧಿಯನ್ನು ಆ್ಯಂಟಿ ಬಯಾಟಿಕ್ ಮಾದರಿಯಲ್ಲಿ ನೀಡಲಾಗಿದ್ದು, ಇದು ರೋಗಿಗಳಲ್ಲಿ ಗಮನಾರ್ಹ ಸಕಾರಾತ್ಮಕ ಬದಲಾವಣೆ ತಂದಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಇನ್ನು ಹೈಡ್ರಾಕ್ಸಿಕ್ಲೋರೋಕ್ವಿನ್ ತಯಾರಿಕೆಯಲ್ಲಿ ಭಾರತ ಮುಂಚೂಣಿಯಲ್ಲಿದ್ದು, ಈ ಔಷಧಿ ರಫ್ತು ಮಾಡುವ ದೇಶಗಳ ಪಟ್ಟಿಯಲ್ಲಿ ಭಾರತ ಪ್ರಮುಖಸ್ಥಾನದಲ್ಲಿದೆ. ಈ ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧಿಯು ನೊವೆಲ್ ಪಥಗಾನ್ ನಂತಹ ರೋಗಾಣುಗಳ ಮೇಲೆ ಪರಿಣಾಕಾರಿಯಾಗಿ  ಕಾರ್ಯನಿರ್ವಹಿಸುತ್ತದೆ. ಅಮೆರಿಕ ಮಾತ್ರವಲ್ಲದೇ ದಕ್ಷಿಣ ಕೊರಿಯಾ ಕೂಡ ಇದೇ ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧಿಯನ್ನು ಕೊರೋನಾ ವೈರಸ್ ಗೆ ಬದಲಿ ಔಷಧಿಯಾಗಿ ನೀಡುತ್ತಿದೆ ಎನ್ನಲಾಗಿದೆ. ಇದೇ ಕಾರಣಕ್ಕೆ ಪ್ರಪಂಚದಾದ್ಯಂತ ಈ ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧಿಗೆ ವ್ಯಾಪಕ  ಬೇಡಿಕೆ ಸೃಷ್ಟಿಯಾಗಿದ್ದು, ಭಾರತ ಕೂಡ ಇದೇ ಕಾರಣಕ್ಕೆ ಈ ಔಷಧಿಯ ರಫ್ತು ನಿಷೇಧ ಮಾಡಿದೆ.

ಭಾರತದಲ್ಲಿಯೂ 550ಕ್ಕೂ ಅಧಿಕ ಮಂದಿ ಸೋಂಕಿಗೆ ತುತ್ತಾಗಿದ್ದು ಇದೀಗ ಮುಂಜಾಗ್ರತಾ ಕ್ರಮವಾಗಿ ಭಾರತ ಸರ್ಕಾರ ಈ ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧಿಯ ರಫ್ತು ನಿಷೇಧಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com