ಕೃಷಿ ಮಸೂದೆ ವಿರುದ್ಧ ಮುಂದುವರೆದ ಪ್ರತಿಭಟನೆ: ಅಮಿತ್ ಶಾ ಮನವಿ ಸ್ವೀಕರಿಸಿ ಎಂದ ಸಿಎಂ ಅಮರೀಂದರ್ ಸಿಂಗ್, ನಾವೇಕೆ ಪ್ರತಿಭಟನೆ ಸ್ಥಳಾಂತರಿಸಬೇಕು- ರೈತರ ಪ್ರಶ್ನೆ

ಕೇಂದ್ರ ಸರ್ಕಾರ ಕೃಷಿ ಕಾಯ್ದೆ ವಿರೋಧಿಸಿ ದೆಹಲಿ ಚಲೋ ಕೈಗೊಂಡಿರುವ ಪಂಜಾಬ್ ಹಾಗೂ ಹರಿಯಾಣ ರೈತರು ದೆಹಲಿ ಗಡಿಯಲ್ಲೇ ತಮ್ಮ ಹೋರಾಟವನ್ನು ಮುಂದುವರೆಸಿದ್ದು, ಈ ಪ್ರತಿಭಟನೆ ಭಾನುವಾರ ಮೂರನೇ ದಿನಕ್ಕೆ...
ಪ್ರತಿಭಟನಾನಿರತ ರೈತರು
ಪ್ರತಿಭಟನಾನಿರತ ರೈತರು

ನವದೆಹಲಿ: ಕೇಂದ್ರ ಸರ್ಕಾರ ಕೃಷಿ ಕಾಯ್ದೆ ವಿರೋಧಿಸಿ ದೆಹಲಿ ಚಲೋ ಕೈಗೊಂಡಿರುವ ಪಂಜಾಬ್ ಹಾಗೂ ಹರಿಯಾಣ ರೈತರು ದೆಹಲಿ ಗಡಿಯಲ್ಲೇ ತಮ್ಮ ಹೋರಾಟವನ್ನು ಮುಂದುವರೆಸಿದ್ದು, ಈ ಪ್ರತಿಭಟನೆ ಭಾನುವಾರ ಮೂರನೇ ದಿನಕ್ಕೆ ಕಾಲಿಟ್ಟಿದೆ. 

ಈ ನಡುವೆ ನಿನ್ನೆಯಷ್ಟೇ ಅಮಿತ್ ಶಾ ಅವರು, ನಿಗದಿತ ಸ್ಥಳದಲ್ಲಿ ಪ್ರತಿಭಟನೆ ನಡೆಸುವಂತೆ ಮನವಿ ಮಾಡಿಕೊಂಡಿದ್ದು, ಈ ಮನವಿಯನ್ನು ಸ್ವೀಕರಿಸುವಂತೆ ಪಂಜಾಬ್ ರಾಜ್ಯ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಅವರು ಆಗ್ರಹಿಸಿದ್ದಾರೆ. ಆದರೆ, ಈ ಆಗ್ರಹವನ್ನು ತಿರಸ್ಕರಿಸಿರುವ ರೈತ ಸಂಘಟನೆಗಳು, ನಾವೇಕೆ ಪ್ರತಿಭಟನೆಯನ್ನು ಸ್ಥಳಾಂತರಿಸಬೇಕೆಂದು ಪ್ರಶ್ನಿಸುತ್ತಿವೆ. 

ರೈತರು ಪೊಲೀಸರು ನಿಗದಿಪಡಿಸಿದ ಸ್ಥಳದಲ್ಲಿಯೇ ಪ್ರತಿಭಟನೆ ನಡೆಸಬೇಕು ಮತ್ತು ಶಾಂತಿಯುತ ಹೋರಾಟ ನಡೆಸಬೇಕು. ಪ್ರತಿಭಟನೆ ನಡೆಸುವ ಸ್ಥಳದಲ್ಲಿ ಸೂಕ್ತ ವೈದ್ಯಕೀಯ ಸೌಲಭ್ಯಗಳು, ಶೌಚಾಲಯ, ಆಂಬ್ಯುಲೆನ್ಸ್‌ ಮತ್ತು ನೀರಿನ ಪೂರೈಕೆಯಂತಹ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗಿದೆ. ಪ್ರತಿಭಟನೆಯನ್ನು ನಿಗದಿತ ಸ್ಥಳಕ್ಕೆ ಸ್ಥಳಾಂತರಿಸಿದರೆ ಅದು ರೈತರು ಮತ್ತು ಸಾರ್ವಜನಿಕರಿಗೆ ಅನುಕೂಲಕರವಾಗಲಿದೆ. ಸರ್ಕಾರ ರೈತರೊಂದಿಗೆ ಮಾತುಕತೆಗೆ ಡಿ.3ಕ್ಕೂ ಮುನ್ನ ಮಾತುಕತೆ ನಡೆಸಬೇಕಾದಲ್ಲಿ ಅವರು ನಿಗದಿತ ಸ್ಥಳಕ್ಕೆ ತೆರಳುವುದು ಅನಿವಾರ್ಯ ಎಂದು ಅಮಿತ್ ಶಾ ಅವರು ಹೇಳಿದ್ದರು. 

ಈ ಹೇಳಿಕೆ ಪ್ರತಿಕ್ರಿಯೆ ನೀಡಿರುವ ಅಮರೀಂದರ್ ಸಿಂಗ್ ಅವರು, ರೈತರ ಪ್ರತೀ ಆಗ್ರಹಗಳನ್ನು, ಸಮಸ್ಯೆಗಳನ್ನು ಈಡೇರಿಸಲು ಕೇಂದ್ರ ಸರ್ಕಾರ ಸಿದ್ಧವಿದೆ. ರೈತರು ದೆಹಲಿಯಲ್ಲಿ ನಿಗದಿಪಡಿಸಿರುವ ಸ್ಥಳಕ್ಕೆ ತಮ್ಮ ಪ್ರತಿಭಟನೆಯನ್ನು ಸ್ಥಳಾಂತರಿಸಿದ್ದೇ ಆದರೆ, ಸಮಸ್ಯೆ ಬಗೆಹರಿಸುತ್ತೇವೆಂದು ಹೇಳಿದ್ದಾರೆ. ಹೀಗಾಗಿ ರೈತ ಸಂಘಟನೆಗಳು ಮನವಿಗೆ ಸ್ಪಂದನೆ ನೀಡಬೇಕಿದೆ ಎಂದು ಹೇಳಿದ್ದಾರೆ. 

ಎರಡೂ ಕಡೆಗಳಿಂದಲೂ ಕುಳಿತು ಮಾತುಕತೆ ನಡೆಸಿದಾಗ ಮಾತ್ರ ಸಮಸ್ಯೆ ಬಗೆಹರಿಯುತ್ತದೆ. ಹೆದ್ದಾರಿಗಳನ್ನು ಬಂದ್ ಮಾಡುವುದು, ಜನರಿಗೆ ಸಮಸ್ಯೆ ತಂದೊಡ್ಡುವುದು ರೈತರ ಉದ್ದೇಶವಲ್ಲ. ತಮ್ಮ ಧ್ವನಿ ಕೇಳುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವುದು ಉದ್ದೇಶವಾಗಿದೆ. ಕೇಂದ್ರ ಸರ್ಕಾರ ಗಮನ ಸೆಳೆಯುವ ಉದ್ದೇಶವಾಗಿದೆ ಎಂದು ತಿಳಿಸಿದ್ದಾರೆ. 

ಅಮರೀಂದರ್ ಸಿಂಗ್ ಅವರ ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ರೈತ ಸಂಘಟನೆಗಳು, ರಾಮ್'ಲೀಲಾ ಮೈದಾನದ್ಲಿ ಪ್ರತಿಭಟನೆಗಳು ನಡೆಯುತ್ತವೆ. ಆದರೆ, ನಾವೇಕೆ ಖಾಸಗಿ ಸೌಲಭ್ಯಗಳನ್ನು ಹೊಂದಿರುವ ನಿರಂಕಾರಿ ಭವನಕ್ಕೆ ತೆರಳಬೇಕು? ನಾವಿಂದು ಇಲ್ಲಿಯೇ ಇರುತ್ತೇವೆಂದು ಭಾರತೀಯ ಕಿಸಾನ್ ಯೂನಿಯನ್ ವಕ್ತಾರ ರಾಕೇಶ್ ಟಿಕೈಟ್ ಅವರು ಹೇಳಿದ್ದಾರೆ. 

ಅಮಿತ್ ಅವರು ಷರತ್ತುಗಳನ್ನು ನೀಡಿ ಮಾತುಕತೆಗೆ ಕರೆಯುತ್ತಿದ್ದಾರೆ. ಇದು ಸರಿಯಲ್ಲ. ಯಾವುದೇ ಷರತ್ತುಗಳನ್ನೂ ಹಾಕದೆ ಚರ್ಚೆಗೆ, ಮಾತುಕತೆಗೆ ಹೃದಯದಿಂದ ಕರೆಯಬೇಕು. ನಾಳೆ ಬೆಳಿಗ್ಗೆ ಮತ್ತೆ ನಾವು ಸಭೆ ನಡೆಸಿ ನಮ್ಮ ನಿಲುವು ಕುರಿತು ನಿರ್ಧಾರ ಕೈಗೊಳ್ಳಲಿದ್ದೇವೆಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com