ಚೀನಾ ಬೆದರಿಕೆಗೆ ಭಾರತ-ಅಮೆರಿಕ ಸಡ್ಡು, ಬಿಇಸಿಎ ಒಪ್ಪಂದಕ್ಕೆ ಸಹಿ: ಉಭಯ ದೇಶಗಳ ನಾಯಕರ ಜಂಟಿ ಸುದ್ದಿಗೋಷ್ಠಿ

ಅತ್ಯುನ್ನತ ಮಿಲಿಟರಿ ತಂತ್ರಜ್ಞಾನ, ವರ್ಗೀಕೃತ ಉಪಗ್ರಹ ದತ್ತಾಂಶ ಮತ್ತು ಸೂಕ್ಷ್ಮ ಮಾಹಿತಿಗಳ ವಿನಿಮಯ ಇಂದಿನ ಭಾರತ-ಅಮೆರಿಕ 2+2 ಮಾತುಕತೆ ನಂತರ ಮಾಡಿಕೊಂಡ ರಕ್ಷಣಾ ಒಪ್ಪಂದಗಳಾಗಿವೆ.
ದೆಹಲಿಯಲ್ಲಿ ಅಮೆರಿಕ ರಕ್ಷಣಾ ಇಲಾಖೆ ಕಾರ್ಯದರ್ಶಿ ಮಾರ್ಕ್ ಎಸ್ಪರ್ ಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಾಂಪ್ರದಾಯಿಕ ಸ್ವಾಗತ
ದೆಹಲಿಯಲ್ಲಿ ಅಮೆರಿಕ ರಕ್ಷಣಾ ಇಲಾಖೆ ಕಾರ್ಯದರ್ಶಿ ಮಾರ್ಕ್ ಎಸ್ಪರ್ ಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಾಂಪ್ರದಾಯಿಕ ಸ್ವಾಗತ
Updated on

ನವದೆಹಲಿ: ಅತ್ಯುನ್ನತ ಮಿಲಿಟರಿ ತಂತ್ರಜ್ಞಾನ, ವರ್ಗೀಕೃತ ಉಪಗ್ರಹ ದತ್ತಾಂಶ ಮತ್ತು ಸೂಕ್ಷ್ಮ ಮಾಹಿತಿಗಳ ವಿನಿಮಯ ಇಂದಿನ ಭಾರತ-ಅಮೆರಿಕ 2+2 ಮಾತುಕತೆ ನಂತರ ಮಾಡಿಕೊಂಡ ರಕ್ಷಣಾ ಒಪ್ಪಂದಗಳಾಗಿವೆ.

ದೀರ್ಘ ಕಾಲದ ಒಪ್ಪಂದದಲ್ಲಿ ಮೂಲ ವಿನಿಮಯ ಮತ್ತು ಸಹಕಾರ ಒಪ್ಪಂದ(ಬಿಇಸಿಎ) ಮಾಡಿಕೊಳ್ಳಲಾಗಿದ್ದು, ದ್ವಿಪಕ್ಷೀಯ ರಕ್ಷಣಾ ಮತ್ತು ಮಿಲಿಟರಿ ಸಂಬಂಧಗಳನ್ನು ವೃದ್ಧಿಸಿಕೊಳ್ಳಲು ಇಂದಿನ ಮಾತುಕತೆ ವೇಳೆ ಒಪ್ಪಂದಕ್ಕೆ ಬರಲಾಯಿತು. ಪೂರ್ವ ಲಡಾಕ್ ನಲ್ಲಿ ಚೀನಾ ಜೊತೆಗೆ ಸೇನೆ ನಿಯೋಜನೆ ಸಂಘರ್ಷದ ನಡುವೆ ಅಮೆರಿಕ ಜೊತೆಗೆ ಭಾರತದ ರಕ್ಷಣಾ ಮತ್ತು ಮಿಲಿಟರಿ ಮಾತುಕತೆ ಮಹತ್ವದ್ದಾಗಿದ್ದು ಚೀನಾಕ್ಕೆ ಪರೋಕ್ಷವಾಗಿ ಎಚ್ಚರಿಕೆಯ ಗಂಟೆಯಾಗಿದೆ ಎನ್ನಬಹುದು.

ಇಂದು ಬೆಳಗ್ಗೆಯಿಂದ ನಡೆದ ಮಾತುಕತೆಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್, ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅಮೆರಿಕಾದ ರಾಜ್ಯ ಕಾರ್ಯದರ್ಶಿ ಮೈಕ್ ಪೊಂಪಿಯೊ ಮತ್ತು ರಕ್ಷಣಾ ಕಾರ್ಯದರ್ಶಿ ಮಾರ್ಕ್ ಟಿ ಎಸ್ಪರ್ ಜೊತೆಗೆ ಮಾತುಕತೆ ನಡೆಸಿ ಜಂಟಿ ಸುದ್ದಿಗೋಷ್ಠಿ ನಡೆಸಿ ವಿವರಣೆ ನೀಡಿದರು.ಎರಡೂ ದೇಶಗಳ ಮಿಲಿಟರಿ ಮತ್ತು ರಕ್ಷಣಾ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

ರಕ್ಷಣಾ ಸಚಿವ ರಾಜನಾಥ್ ಸಿಂಗ್: ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಎರಡೂ ದೇಶಗಳ ನಡುವಣ ಮಿಲಿಟರಿ ಸಂಬಂಧ, ಸಹಕಾರ ವೃದ್ಧಿಯಾಗುತ್ತಿದೆ. ಎರಡು ದಿನಗಳ ಸಭೆಯಲ್ಲಿ, ಮೂರನೇ ನೆರೆ ರಾಷ್ಟ್ರಗಳೊಂದಿಗೆ ಅಥವಾ ಬೇರೆ ದೇಶಗಳ ಮುಂದೆ ನಮ್ಮ ಜಂಟಿ ಸಹಕಾರ ಚಟುವಟಿಕೆಗಳು ಮತ್ತು ಇತರ ಸಾಮರ್ಥ್ಯಗಳ ಹೆಚ್ಚಿಸುವಿಕೆಗೆ ಇರುವ ಸಾಧ್ಯತೆಗಳ ಕುರಿತು ಚರ್ಚಿಸಿದೆವು.

ಕಾನೂನುಗಳನ್ನು ಗೌರವಿಸಿ ಮತ್ತು ಅಂತಾರಾಷ್ಟ್ರೀಯ ಸಾಗರಗಳಲ್ಲಿ ನೌಕಾ ಚಟುವಟಿಕೆಗಳಿಗೆ ಸ್ವಾತಂತ್ರ್ಯವನ್ನು ವಿಸ್ತರಿಸಲು, ಪ್ರಾಂತೀಯ ಸಮಗ್ರತೆ ಮತ್ತು ಎಲ್ಲಾ ದೇಶಗಳ ಸಾರ್ವಭೌಮತೆಗಳನ್ನು ಎತ್ತಿಹಿಡಿಯುವುದು ಅಗತ್ಯವಾಗಿದ್ದು, ಅದಕ್ಕೆ ಉಭಯ ದೇಶಗಳು ಪರಸ್ಪರ ಒಪ್ಪಿಗೆ ಸೂಚಿಸಿವೆ ಎಂದರು.

ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಮಾತನಾಡಿ, ನಮ್ಮ ನೆರೆಯ ದೇಶಗಳಲ್ಲಿ ಆಗುತ್ತಿರುವ ಬೆಳವಣಿಗೆಗಳ ಬಗ್ಗೆ ಸಹ ಚರ್ಚೆ ನಡೆಸಲಾಯಿತು. ಗಡಿ ಉಲ್ಲಂಘನೆ ಭಯೋತ್ಪಾದನೆಯನ್ನು ಸಾರಾಸಗಟಾಗಿ ಒಪ್ಪದಿರಲು ತೀರ್ಮಾನಿಸಲಾಯಿತು ಎಂದರು.

ಅಮೆರಿಕ ರಕ್ಷಣಾ ಕಾರ್ಯದರ್ಶಿ ಮಾರ್ಕ್ ಎಸ್ಪರ್, ಜಗತ್ತಿನಲ್ಲಿ ಕೊರೋನಾ ವೈರಸ್ ಸೋಂಕು ಮತ್ತು ಹಲವು ಭದ್ರತಾ ಸವಾಲುಗಳು ಎದುರಾಗಿರುವ ಸಮಯದಲ್ಲಿ, ಭಾರತ-ಅಮೆರಿಕ ನಡುವಣ ಸಹಭಾಗಿತ್ವ ಭದ್ರತೆ, ಸ್ಥಿರತೆ ಮತ್ತು ಸಮೃದ್ಧತೆ ದೃಷ್ಟಿಯಿಂದ ಅಗತ್ಯವಾಗಿದೆ. ನಮ್ಮ ಹಂಚಿಕೆಯ ಮೌಲ್ಯಗಳು ಮತ್ತು ಸಾಮಾನ್ಯ ಹಿತಾಸಕ್ತಿಗಳ ಮಧ್ಯೆ ಮುಕ್ತ ಮತ್ತು ನಿರ್ಭೀತ ಇಂಡೊ-ಫೆಸಿಫಿಕ್ ಸಹಕಾರಕ್ಕೆ ಹೆಗಲು ಕೊಟ್ಟು ನಿಲ್ಲಲಿದ್ದೇವೆ, ಚೀನಾದ ಕಡೆಯಿಂದ ಗಡಿಭಾಗದಲ್ಲಿ ಮಿಲಿಟರಿ ಚಟುವಟಿಕೆ, ನಮ್ಮನ್ನು ಅಸ್ಥಿರ ಮಾಡುವ ಪ್ರಯತ್ನಗಳು ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಇದು ಅನಿವಾರ್ಯವಾಗಿದೆ ಎಂದರು.

ಅಮೆರಿಕ ರಾಜ್ಯ ಕಾರ್ಯದರ್ಶಿ ಮೈಕ್ ಪೊಂಪಿಯೊ ಮಾತನಾಡಿ, ಚೀನಾ ಸರ್ಕಾರ ಸೇರಿದಂತೆ ಎಲ್ಲಾ ರೀತಿಯ ಬೆದರಿಕೆಗಳ ವಿರುದ್ಧ ನಮ್ಮ ಸಹಕಾರವನ್ನು ವೃದ್ಧಿಸಲು ಭಾರತ ಮತ್ತು ಅಮೆರಿಕ ಕ್ರಮಕ್ಕೆ ಮುಂದಾಗಿವೆ. ಕಳೆದ ವರ್ಷದ ಮಾತುಕತೆಯಲ್ಲಿ ನಾವು ಸೈಬರ್ ವಿಷಯಗಳಲ್ಲಿ ನಮ್ಮ ಸಹಕಾರವನ್ನು ವೃದ್ಧಿಸಿಕೊಂಡಿದ್ದೇವೆ. ನಮ್ಮ ನೌಕೆಗಳು ಭಾರತೀಯ ಸಮುದ್ರದಲ್ಲಿ ಜಂಟಿ ಅಭ್ಯಾಸ ನಡೆಸಿದವು.

2+2 ಸಂವಾದದಲ್ಲಿ, ಉಭಯ ದೇಶಗಳ ನಡುವೆ ಈಗಾಗಲೇ ನಿಕಟ ಸಂಬಂಧವನ್ನು ಮತ್ತಷ್ಟು ವಿಸ್ತರಿಸುವ ಮಾರ್ಗಗಳು ಮತ್ತು ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಪರಸ್ಪರ ಆಸಕ್ತಿಯ ವಿಶಾಲವಾದ ಸಮಸ್ಯೆಗಳು ಸೇರಿದಂತೆ ಹಲವಾರು ನಿರ್ಣಾಯಕ ವಿಷಯಗಳ ಕುರಿತು ಎರಡೂ ಕಡೆಯವರು ಚರ್ಚಿಸಿದರು.

ಕಾರ್ಯತಂತ್ರದ ಸಂಬಂಧಗಳನ್ನು ಗಮನಾರ್ಹವಾಗಿ ವಿಸ್ತರಿಸಲು ಉಭಯ ದೇಶಗಳ ನಡುವೆ ನಾಲ್ಕು ಪ್ರಮುಖ ಒಪ್ಪಂದಗಳನ್ನು ಮಾಡಲಾಯಿತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com