ಚೀನಾ ಗಡಿ ತಂಟೆ ಮಧ್ಯೆ ಭಾರತಕ್ಕೆ ನವಂಬರ್ 5ರಂದು ಮತ್ತೆ ಮೂರು 'ರಫೇಲ್' ಯುದ್ಧ ವಿಮಾನಗಳ ಆಗಮನ
ನವದೆಹಲಿ: ಕಳೆದ ಮೇ ತಿಂಗಳಿಂದ ಪೂರ್ವ ಲಡಾಕ್ ಪ್ರದೇಶದ ಚೀನಾ ಗಡಿಯಲ್ಲಿ ಉದ್ಭವವಾಗಿರುವ ಸಂಘರ್ಷದ ನಡುವೆಯೇ ನವಂಬರ್ 5ರಂದು ಭಾರತ ಇನ್ನೂ ಮೂರು ರಫೇಲ್ ಯುದ್ಧ ವಿಮಾನಗಳನ್ನು ಪಡೆದುಕೊಳ್ಳುವ ನಿರೀಕ್ಷೆಯಿದೆ.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹಾಗೂ ಫ್ರಾನ್ಸ್ ರಕ್ಷಣಾ ಸಚಿವ ಫ್ಲೋರೆನ್ಸ್ ಪಾರ್ಲೆ ಅವರ ಉಪ ಸ್ಥಿತಿಯಲ್ಲಿ ಕಳೆದ ಸೆಪ್ಟಂಬರ್ 10ರಂದು ಹರಿಯಾಣದದ ಅಂಬಾಲ ವಾಯುನೆಲೆಯಲ್ಲಿ ಮೊದಲ ತಂಡದ ಐದು ಯುದ್ದ ವಿಮಾನಗಳನ್ನು ವಾಯುಪಡೆಗೆ ಸೇರ್ಪಡೆಗೊಳಿಸಿಕೊಳ್ಳಲಾಯಿತು.
2016ರ ಒಪ್ಪಂದದ ಪ್ರಕಾರ 59 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ 36 ರಫೇಲ್ ಯುದ್ದ ವಿಮಾನಗಳನ್ನು ಭಾರತ ಫ್ರಾನ್ಸ್ ನಿಂದ ಖರೀದಿಸುತ್ತಿದೆ. ಈ ನಡುವೆ ವಿದೇಶಾಂಗ ಕಾರ್ಯದರ್ಶಿ ಹರ್ಷ್ ವರ್ಧನ್ ಶ್ರಿಂಗ್ಲಾ ಈ ವಾರ ತಮ್ಮ ಐರೋಪ್ಯ ದೇಶಗಳ ಪ್ರವಾಸದ ವೇಳೆ ಫ್ರಾನ್ಸ್ ಗೂ ಭೇಟಿ ನೀಡಲಿದ್ದಾರೆ.
ತಮ್ಮ ಭೇಟಿಯ ವೇಳೆ ಅವರು ಫ್ರಾನ್ಸ್ ವಿದೇಶಾಂಗ ವ್ಯವಹಾರಗಳ ಸಚಿವಾಲಯದಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ(ಯುಎನ್ ಎಸ್ ಸಿ) ಸಮರ್ಪಿತ ಸಮಾಲೋಚನೆಗಳೊಂದಿಗೆ ಉನ್ನತ ಮಟ್ಟದ ಸಭೆಗಳನ್ನು ನಡೆಸಲಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ