

ನವದೆಹಲಿ: ದೇಶದ ಕೋವಿಡ್ ಸನ್ನಿವೇಶದ ಕುರಿತು ಕಾಳಜಿ ವ್ಯಕ್ತಪಡಿಸಿರುವ ಕಾಂಗ್ರೆಸ್, ಪ್ರಧಾನಿ ನರೇಂದ್ರ ಮೋದಿ ಸಾಂಕ್ರಾಮಿಕವನ್ನು ತಡೆಯುವಲ್ಲಿ ವಿಫಲವಾಗಿದ್ದು, ದೇಶ ವಿಶ್ವದ ಕೊರೋನಾ ರಾಜಧಾನಿಯಾಗಿ ಪರಿಣಮಿಸಿದೆ ಎಂದು ಆರೋಪಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ವಕ್ತಾರ ರಣದೀಪ್ ಸಿಂಗ್ ಸುರ್ಜೇವಾಲ, ಕೋವಿಡ್ ತಡೆಯಲು ಮೋದಿ ತೆಗೆದುಕೊಂಡಿರುವ ಕ್ರಮಗಳ ಕುರಿತು ಜನರಿಗೆ ವಿವರಿಸಲು ಇದು ಸೂಕ್ತ ಸಮಯ. ಮಾ.24 ರಂದು ಮೋದಿ, "ಮಹಾಭಾರತ 18 ದಿನಗಳ ಕಾಲ ನಡೆಯಿತು.
ಆದರೆ, ಕೋವಿಡ್ ವಿರುದ್ಧ ಹೋರಾಡಲು 21 ದಿನಗಳು ಬೇಕಾಗುತ್ತದೆ" ಎಂದಿದ್ದರು. ಆದರೆ, ಈಗ 166 ದಿನಗಳು ಕಳೆದಿದ್ದರೂ, ಮಹಾಭಾರತ ಇನ್ನೂ ಮುಂದುವರಿಯುತ್ತಿದೆ. ಜನರು ಸಾಯುತ್ತಿದ್ದರೂ, ಮೋದಿ ಯಾವುದೇ ಮಹತ್ವದ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.
ಭಾರತದ ವಿಶ್ವದ ಕೊರೋನಾ ರಾಜಧಾನಿಯಾಗಿದೆ. ಪ್ರತಿನಿತ್ಯ ಹೊಸ ಪ್ರಕರಣಗಳು ದಾಖಲೆ ಪ್ರಮಾಣದಲ್ಲಿ ವರದಿಯಾಗುತ್ತಿವೆ. ಸಾಂಕ್ರಾಮಿಕದ ವಿರುದ್ಧ ಹೋರಾಡುವಲ್ಲಿ ಮೋದಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಬಿಜೆಪಿ ಜನರನ್ನು ಸಾಂಕ್ರಾಮಿಕದ ಮಧ್ಯೆ ಕೈಬಿಟ್ಟಿದೆ ಎಂದು ಆರೋಪಿಸಿದರು.