ಭಾರತ-ಚೀನಾ ಗಡಿ ಸಂಘರ್ಷ ನಿವಾರಣೆಗೆ 5 ಅಂಶಗಳ ಕಾರ್ಯತಂತ್ರ ಮೊದಲ ದಿಟ್ಟ ಕ್ರಮ: ತಜ್ಞರ ಅಭಿಪ್ರಾಯ
ನವದೆಹಲಿ: ಭಾರತ-ಚೀನಾ ಗಡಿಯ ಪೂರ್ವ ಲಡಾಕ್ ನಲ್ಲಿ ಮುಂದುವರಿದಿರುವ ಗಡಿ ಸಂಘರ್ಷವನ್ನು ಬಗೆಹರಿಸಲು ಐದು ಅಂಶಗಳ ಕಾರ್ಯತಂತ್ರದ ಬಗ್ಗೆ ಸದ್ಯ ಚರ್ಚೆ ನಡೆಯುತ್ತಿದೆ. ನಿನ್ನೆ ಭಾರತ ಮತ್ತು ಚೀನಾ ವಿದೇಶಾಂಗ ಸಚಿವರು ಈ ಐದು ಅಂಶಗಳ ಕಾರ್ಯತಂತ್ರಕ್ಕೆ ಒಪ್ಪಿಗೆ ಸೂಚಿಸಿದ್ದು, ಇದು ರಾಜಕೀಯ ಮಾರ್ಗಸೂಚಿಯನ್ನು ಸಂಪೂರ್ಣವಾಗಿ ಸೇನೆಯನ್ನು ಹಿಂತೆಗೆದುಕೊಳ್ಳಲು ನೀಡುವುದರಿಂದ ಇದು ಸರಿಯಾದ ದಿಕ್ಕಿನ ಕಡೆಗೆ ಮೊದಲ ಪ್ರಮುಖ ಹೆಜ್ಜೆಯಾಗಿದೆ ಎಂದು ತಜ್ಞರು ವಿಶ್ಲೇಷಿಸುತ್ತಾರೆ.
ಮೊನ್ನೆ ಗುರುವಾರ ರಷ್ಯಾದ ಮಾಸ್ಕೊದಲ್ಲಿ, ವಿದೇಶಾಂಗ ಸಚಿವರ ಶಾಂಘೈ ಸಹಕಾರ ಶೃಂಗಸಭೆಯ ವೇಳೆ ಭಾರತ ಮತ್ತು ಚೀನಾ ವಿದೇಶಾಂಗ ಸಚಿವರು ಮಾತುಕತೆ ನಡೆಸಿದ್ದರು. ಇದಾದ ಬಳಿಕ ನಿನ್ನೆ ಜಂಟಿ ಹೇಳಿಕೆ ಬಿಡುಗಡೆ ಮಾಡಲಾಯಿತು. ಅದರಲ್ಲಿ ಇಬ್ಬರು ವಿದೇಶಾಂಗ ಸಚಿವರು ಗಡಿಯಲ್ಲಿ ಸದ್ಯ ನಡೆಯುತ್ತಿರುವ ಪರಿಸ್ಥಿತಿ ಎರಡೂ ದೇಶಗಳ ಹಿತಾಸಕ್ತಿಗೆ ಒಳಿತಲ್ಲ. ಗಡಿ ಭದ್ರತಾ ಪಡೆ ತಮ್ಮ ಮಾತುಕತೆಯನ್ನು ಮುಂದುವರಿಸಿ ಗಡಿಯಿಂದ ಸೇನಾಪಡೆಯನ್ನು ಹಿಂತೆಗೆದುಕೊಂಡು ಉದ್ವಿಗ್ನ ಪರಿಸ್ಥಿತಿಯನ್ನು ಶಾಂತಗೊಳಿಸಬೇಕೆಂದು ಒಪ್ಪಿಗೆಗೆ ಬಂದಿದ್ದಾರೆ.
ಭಾರತ, ಪೂರ್ವ ಲಡಾಕ್ ಗಡಿಯಲ್ಲಿ ಉದ್ವಿಗ್ನತೆಯನ್ನು ಕಡಿಮೆ ಮಾಡಲು ಸಹಕಾರ ಮತ್ತು ಸಂವಾದಕ್ಕೆ ಬದ್ಧತೆಯನ್ನು ತೋರಿಸುವುದಾಗಿ ಹೇಳಿದೆ. ಗಡಿಯಲ್ಲಿನ ಕಟ್ಟುಪಾಡುಗಳ ಹೊಸ ಉಲ್ಲಂಘನೆಯನ್ನು ತಪ್ಪಿಸುವುದು ಅತ್ಯಂತ ಮುಖ್ಯವಾದ ವಿಷಯ. ಸೈನಿಕರು ಮತ್ತು ಶಸ್ತ್ರಾಸ್ತ್ರ, ಸಲಕರಣೆಗಳನ್ನು ಎಲ್‌ಎಸಿಯಿಂದ ಸಂಪೂರ್ಣವಾಗಿ ಹಿಂತೆಗೆದುಕೊಳ್ಳಬೇಕು ಎಂಬುದು ಭಾರತದ ಬೇಡಿಕೆಯಾಗಿದೆ ಎಂದು ಜೈಶಂಕರ್ ಅವರ ಭೇಟಿಯ ಒಂದು ದಿನದ ನಂತರ ರಷ್ಯಾದ ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವ್ ಅವರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ವಾಂಗ್ ಯಿ ಹೇಳಿದ್ದಾರೆ.
ಮೊನ್ನೆ ಸಭೆಯಲ್ಲಿ ಗಡಿ ವಾಸ್ತವ ರೇಖೆಯಲ್ಲಿ ಚೀನಾದ ಸೇನಾಪಡೆ ಸಂಪೂರ್ಣ ಶಸ್ತ್ರಾಸ್ತ್ರಗಳೊಂದಿಗೆ ನಿಯೋಜನೆಗೊಂಡಿರುವ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಜಂಟಿ ಹೇಳಿಕೆಯಲ್ಲಿ ತಿಳಿಸಿರುವ ಪ್ರಕಾರ, ಭಾರತ-ಚೀನಾ ಗಡಿ ವ್ಯವಹಾರಗಳ ಕುರಿತಾದ ಎಲ್ಲಾ ಒಪ್ಪಂದಗಳು ಮತ್ತು ನಿಯಮಾವಳಿಗಳಿಗೆ ಬದ್ಧವಾಗಿರಲು ಮತ್ತು ವಿಷಯಗಳನ್ನು ಉಲ್ಬಣಗೊಳಿಸುವ ಯಾವುದೇ ಕ್ರಮವನ್ನು ತಪ್ಪಿಸಲು ಎರಡೂ ದೇಶಗಳು ಒಪ್ಪಿಕೊಂಡಿವೆ ಎಂದು ತಿಳಿದುಬಂದಿದೆ.
"ಪರಿಸ್ಥಿತಿ ಸರಾಗವಾಗುತ್ತಿದ್ದಂತೆ, ಗಡಿ ಪ್ರದೇಶಗಳಲ್ಲಿ ಶಾಂತಿಯನ್ನು ಕಾಪಾಡಿಕೊಳ್ಳಲು ಮತ್ತು ಹೆಚ್ಚಿಸಲು ಹೊಸ ವಿಶ್ವಾಸಾರ್ಹ ಕ್ರಮಗಳನ್ನು ಉಭಯ ದೇಶಗಳು ಚುರುಕುಗೊಳಿಸಬೇಕು ಎಂದು ಉಭಯ ದೇಶಗಳ ಸಚಿವರು ಒಪ್ಪಿಕೊಂಡಿದ್ದಾರೆ ಎಂದು ಹೇಳಿಕೆ ತಿಳಿಸಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ