ಮೋದಿ, ರಾಷ್ಟ್ರಪತಿ, ಬಿಪಿನ್ ರಾವತ್, ಎಚ್ ಡಿಡಿ ಸೇರಿದಂತೆ 1,350 ರಾಜಕಾರಣಿಗಳ ಮೇಲೆ ಚೀನಾ ಕಳ್ಳಗಣ್ಣು!
ನವದೆಹಲಿ: ಪೂರ್ವ ಲಡಾಖ್ ಗಡಿಯಲ್ಲಿ ಉಪಟಳ ನೀಡುತ್ತಿರುವ ಚೀನಾ ಇದೀಗ ದೇಶದ ಪ್ರತಿಷ್ಠಿತ ವ್ಯಕ್ತಿಗಳ ಮೇಲೆ ಕಳ್ಳಗಣ್ಣು ನೆಟ್ಟಿದೆ. ಹೌದು ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮನಾಥ ಕೋವಿಂದ್, ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಸೇರಿದಂತೆ ಬರೋಬ್ಬರಿ 1,350ಕ್ಕೂ ಹೆಚ್ಚು ರಾಜಕಾರಣಿಗಳ ಡೇಟಾ ಸಂಗ್ರಹಿಸುತ್ತಿದೆ.
ಭಾರತೀಯ ಯೋಧರು ಮತ್ತು ಚೀನಾ ಸೈನಿಕರ ನಡುವಿನ ಸಂಘರ್ಷದ ಬಳಿಕ ಚರ್ಚೆಗಳು ನಡೆಯುತ್ತಿದ್ದರೂ ಯಾವುದೇ ಫಲಪ್ರದ ನೀಡಿಲ್ಲ. ಆದರೆ ಚೀನಾ ಮಾತ್ರ ನಾಯಕರ ಡೇಟಾ ಸಂಗ್ರಹಿಸುವುದಲ್ಲಿ ಸಕ್ರಿಯವಾಗಿರುವುದು ಆತಂಕಕ್ಕೆ ಕಾರಣವಾಗಿದೆ.
ಪ್ರಧಾನಿ, ಮುಖ್ಯಮಂತ್ರಿಗಳು, ಮಿಲಿಟರಿ, ಉದ್ಯಮಿಗಳು, ರಕ್ಷಣಾ ಸಚಿವಾಲಯ ಸಿಬ್ಬಂದಿ, ಸಂಸದರು ಕೆಲವು ರೌಡಿಶೀಟರ್ ಗಳು ಸೇರಿದಂತೆ ಪ್ರತಿದಿನ ಭಾರತದ 150 ದಶಲಕ್ಷಗಳ ಆನ್ ಲೈನ್ ಡೇಟಾವನ್ನು ಚೀನಾ ಮೂಲದ ಸಂಸ್ಥೆ ತಲೆಹಾಕಿರುವ ಆಘಾತಕಾರಿ ಮಾಹಿತಿ ಬಹಿರಂಗವಾಗಿದೆ.
ಚೀನಾದ ಕಮ್ಯೂನಿಸ್ಟ್ ಪಾರ್ಟಿ ಮತ್ತು ಚೀನಾ ಸರ್ಕಾರ ಜೊತೆ ಸಂಪರ್ಕವಿರುವ ಶೆನ್ ಜೆನ್ ಹುವಾ ಎಂಬ ಸಂಸ್ಥೆ ಭಾರತದ ಗಣ್ಯರ ಮಾಹಿತಿಗಳನ್ನು ಕಲೆ ಹಾಕುತ್ತಿದೆ ಎಂದು ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದೆ.
ಇದೇ ವೇಳೆ ಭಾರತದ ರಕ್ಷಣಾ ಮುಖ್ಯಸ್ಥ ಬಿಪಿನ್ ರಾವತ್ ಸೇರಿದಂತೆ ಸೇನೆಯ 60ಕ್ಕೂ ಹೆಚ್ಚು ಹಿರಿಯ ಅಧಿಕಾರಿಗಳು, ನಿವೃತ್ತಿ ಅಧಿಕಾರಿಗಳು, ವಾಯುಪಡೆ, ನೌಕದಳ, ಭೂಸೇನೆಯ 14 ಹೆಚ್ಚು ನಿವೃತ್ತ ಮುಖ್ಯಸ್ಥರು, ಇಸ್ರೋ ಅಣುವಿಜ್ಞಾನಿಗಳ ಆನ್ ಲೈನ್ ಡೇಟಾ ಸಂಗ್ರಹಿಸಿದೆ.
ಚೀನಾದಿಂದ ಕಳ್ಳಗಣ್ಣು; ನಾವು ಇದನ್ನು ನಿಸ್ಸಂದಿಗ್ಧವಾಗಿ ಖಂಡಿಸುತ್ತೇವೆ: ಕಾಂಗ್ರೆಸ್
ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೇವಾಲ ಅವರು ಭಾರತದ ನಾಯಕರು ಮತ್ತು ಇತರರ ಚೀನಾದ ಡಿಜಿಟಲ್ ಕಣ್ಗಾವಲು ಸುದ್ದಿ "ಚಿಂತಾಜನಕ" ಎಂದು ಟ್ವೀಟ್ ಮಾಡಿದ್ದಾರೆ.
"ನಾವು ಇದನ್ನು ನಿಸ್ಸಂದಿಗ್ಧವಾಗಿ ಖಂಡಿಸುತ್ತೇವೆ. ಸರ್ಕಾರದ ನೀತಿಗಳ ಮೇಲೆ ಯಾವುದೇ ರೀತಿಯಲ್ಲಿ ಪ್ರಭಾವ ಬೀರಲು ಚೀನಿಯರು ಈ 2 ವರ್ಷ ಹಳೆಯ ಕಂಪನಿಯನ್ನು ಬಳಸಿದ್ದಾರೆಯೇ? ಸರ್ಕಾರ ತನಿಖೆ ನಡೆಸಿ ರಾಷ್ಟ್ರಕ್ಕೆ ಭರವಸೆ ನೀಡುತ್ತದೆಯೇ?" ಅವರು ಪ್ರಶ್ನಿಸಿದ್ದಾರೆ.
ಮತ್ತೊಂದು ಟ್ವೀಟ್‌ನಲ್ಲಿ ಸುರ್ಜೆವಾಲಾ ಅವರು, ವರದಿ ಸರಿಯಾಗಿದ್ದರೆ, ಈ ಗಂಭೀರ ವಿಷಯದ ಬಗ್ಗೆ ಮೋದಿ ಸರ್ಕಾರಕ್ಕೆ ತಿಳಿದಿದೆಯೇ. "ಅಥವಾ ನಾವು ಬೇಹುಗಾರಿಕೆ ನಡೆಸುತ್ತಿದ್ದೇವೆ ಎಂದು ಅವರಿಗೆ ತಿಳಿದಿರಲಿಲ್ಲವೇ? ನಮ್ಮ ಕಾರ್ಯತಂತ್ರದ ಹಿತಾಸಕ್ತಿಗಳನ್ನು ಮತ್ತೆ ಮತ್ತೆ ರಕ್ಷಿಸುವಲ್ಲಿ ಸರ್ಕಾರ ಏಕೆ ವಿಫಲವಾಗಿದೆ?" ಅವರು ಪ್ರಶ್ನಿಸಿದ್ದಾರೆ.
ಇಂತಹ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದನ್ನು ತಡೆಯಲು ಚೀನಾಕ್ಕೆ ಸ್ಪಷ್ಟ ಸಂದೇಶವನ್ನು ರವಾನಿಸಬೇಕಾಗಿದೆ ಎಂದು ಅವರು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ