ಕರ್ನಾಟಕ - ಕೇರಳ ಗಡಿ ಬಂದ್ ವಿವಾದ ಇತ್ಯರ್ಥವಾಗಿದೆ: ಸುಪ್ರೀಂಗೆ ಕೇಂದ್ರ ಸ್ಪಷ್ಟನೆ

ಕರ್ನಾಟಕ ಮತ್ತು ಕೇರಳ ನಡುವಿನ ಗಡಿ ಬಂದ್ ವಿವಾದ ಇತ್ಯರ್ಥವಾಗಿದೆ ಎಂದು ಕೇಂದ್ರ ಸರ್ಕಾರ ಮಂಗಳವಾರ ಸುಪ್ರೀಂ ಕೋರ್ಟ್ ಗೆ ಮಾಹಿತಿ ನೀಡಿದೆ.
ಸುಪ್ರೀಂಕೋರ್ಟ್
ಸುಪ್ರೀಂಕೋರ್ಟ್

ನವದೆಹಲಿ: ಕರ್ನಾಟಕ ಮತ್ತು ಕೇರಳ ನಡುವಿನ ಗಡಿ ಬಂದ್ ವಿವಾದ ಇತ್ಯರ್ಥವಾಗಿದೆ ಎಂದು ಕೇಂದ್ರ ಸರ್ಕಾರ ಮಂಗಳವಾರ ಸುಪ್ರೀಂ ಕೋರ್ಟ್ ಗೆ ಮಾಹಿತಿ ನೀಡಿದೆ.

ಕೇರಳದ ಕಾಸರಗೋಡಿನ ಕೊರೆೋನಾ ಸೋಂಕಿತರಲ್ಲದ ಇತರೆ ರೋಗಿಗಳಿಗೆ ಮಂಗಳೂರಿನ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲು ಕರ್ನಾಟಕ ಸರ್ಕಾರ ಒಪ್ಪಿಗೆ ಸೂಚಿಸಿದೆ ಇದರೊಂದಿಗೆ ಉಭಯ ರಾಜ್ಯಗಳ ನಡುವಿನ ಗಡಿ ಬಂದ್ ವಿವಾದ ಅಂತ್ಯವಾಗಿದೆ ಸೊಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಇಂದು ಸುಪ್ರೀಂ ಕೋರ್ಟ್ ಗೆ ತಿಳಿಸಿದ್ದಾರೆ.

ಏಪ್ರಿಲ್ 3ರಂದು ಸುಪ್ರೀಂ ಕೋರ್ಟ್ ಆದೇಶದ ನಂತರ ಗಡಿ ಬಂದ್ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಕಾರ್ಯದರ್ಶಿಗಳು ಕರ್ನಾಟಕ ಮತ್ತು ಕೇರಳ ಸರ್ಕಾರಗಳ ಮುಖ್ಯ ಕಾರ್ಯದರ್ಶಿಯವರೊಂದಿಗೆ ಮಾತುಕತೆ ನಡೆಸಿದ್ದಾರೆ. ವೈದ್ಯಕೀಯ ಪ್ರಮಾಣಪತ್ರವನ್ನು ಹಾರಜುಪಡಿಸಿ ಆಂಬುಲೆನ್ಸ್ ಮೂಲಕ ರೋಗಿಗಳನ್ನು ಕೇರಳದಿಂದ ಕರ್ನಾಟಕದ ಆಸ್ಪತ್ರೆಗೆ ದಾಖಲಿಸಲು ಒಪ್ಪಿಗೆ ನೀಡಲಾಗಿದೆ ಎಂದು ಮೆಹ್ತಾ ತಿಳಿಸಿದರು.

ಗಡಿ ಬಂದ್ ವಿವಾದ ಇತ್ಯರ್ಥವಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದ ನಂತರ ಕರ್ನಾಟಕ ಮತ್ತು ಕೇರಳ ಸರ್ಕಾರಗಳು ಸಲ್ಲಿಸಿದ್ದ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ವಿಲೇವಾರಿ ಮಾಡಿದೆ.

ಲಾಕ್ ಡೌನ್ ನಂತರ ಕರ್ನಾಟಕ ಸರ್ಕಾರ ಕೇರಳ ಗಡಿ ಬಂದ್ ಮಾಡಿತ್ತು. ಗಡಿ ತೆರೆಯಬೇಕು ಎಂಬ ವಿಚಾರದಲ್ಲಿ ಕರ್ನಾಟಕ ಮತ್ತು ಕೇರಳದ ನಡುವೆ ಪತ್ರ ವ್ಯವಹಾರಗಳು, ರಾಜೀ ಸಂಧಾನಗಳು, ನ್ಯಾಯಾಂಗ ಹೋರಾಟಗಳೂ ನಡೆದಿದ್ದವು. ಇದ್ಯಾವುದಕ್ಕೂ ಸೊಪ್ಪು ಹಾಕದ ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ ಗಡಿ ತೆರೆಯುವ ಪ್ರಶ್ನೆಯೇ ಇಲ್ಲ ಎಂದಿದ್ದರು. ಆದರೆ ಅಂತಿಮವಾಗಿ ಕೊರೆೋನಾ ಸೋಂಕಿತರಲ್ಲದ ಇತರೆ ರೋಗಿಗಳಿಗೆ ಮಂಗಳೂರಿನ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಅನುಮತಿ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com