ಕೊರೋನಾ ವೈರಸ್ ಭಾರತಲ್ಲಿ ಸಮುದಾಯಿಕ ಪ್ರಸರಣ ಹಂತ ತಲುಪಿಲ್ಲ: ಕೇಂದ್ರ

ಜಗತ್ತಿನಾದ್ಯಂತ ವ್ಯಾಪಕವಾಗಿ ಹರಡುತ್ತಿರುವ ಮಹಾಮಾರಿ ಕೊರೋನಾ ವೈರಸ್ ಭಾರತದಲ್ಲಿ ಇನ್ನೂ ಸಮುದಾಯಿಕ ಪ್ರಸರಣ ಹಂತ ತಲುಪಿಲ್ಲ ಎಂದು ಕೇಂದ್ರ ಸರ್ಕಾರ ಶುಕ್ರವಾರ ಸ್ಪಷ್ಟಪಡಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಜಗತ್ತಿನಾದ್ಯಂತ ವ್ಯಾಪಕವಾಗಿ ಹರಡುತ್ತಿರುವ ಮಹಾಮಾರಿ ಕೊರೋನಾ ವೈರಸ್ ಭಾರತದಲ್ಲಿ ಇನ್ನೂ ಸಮುದಾಯಿಕ ಪ್ರಸರಣ ಹಂತ ತಲುಪಿಲ್ಲ ಎಂದು ಕೇಂದ್ರ ಸರ್ಕಾರ ಶುಕ್ರವಾರ ಸ್ಪಷ್ಟಪಡಿಸಿದೆ.

ಇಂದು ಸುದ್ದಿಗೋಷ್ಠಿಯಲ್ಲಿ ದೇಶದ ಕೊರೋನಾ ವೈರಸ್ ಪ್ರಕರಣಗಳ ಬಗ್ಗೆ ಮಾಹಿತಿ ನೀಡಿದ ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ್ ಅಗರ್ವಾಲ್ ಅವರು, ಕಳೆದ ೨೪ ಗಂಟೆಗಳಲ್ಲಿ ದೇಶದಲ್ಲಿ ಹೊಸದಾಗಿ ೬೭೮ ಕೊವಿಡ್-19 ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ ಎಂದು ತಿಳಿಸಿದ್ದಾರೆ.

ಇದರೊಂದಿಗೆ ದೇಶದಲ್ಲಿ ಕೊರೋನಾ ದೃಢ ಪಟ್ಟ ಪ್ರಕರಣಗಳ ಸಂಖ್ಯೆ ೬,೪೧೨ ಕ್ಕೆ ತಲುಪಿದ್ದು, ಒಟ್ಟು ೫೦೩ ಮಂದಿ ಕೊರೋನಾ ರೋಗದಿಂದ ಚೇತರಿಸಿಕೊಂಡಿದ್ದಾರೆ. 

ಕಳೆದ ೨೪ ಗಂಟೆಗಳಲ್ಲಿ ಕೊರೋನಾ ಸೋಂಕಿನಿಂದ ದೇಶಾದ್ಯಂತ ೩೩ ಮಂದಿ ಮೃತಪಟ್ಟಿದ್ದು, ಈವರೆಗೆ ೧೯೯ ಜನರು ಸಾವನ್ನಪ್ಪಿದ್ದಾರೆ ಎಂದು ಲವ್ ಅಗರ್ ವಾಲ್ ವಿವರಿಸಿದರು.

೬೭ ಖಾಸಗಿ ಲ್ಯಾಬ್‌ಗಳಲ್ಲಿ ಕೊವಿಡ್ -೧೯ ನಿರ್ಧರಣ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ದೇಶದಲ್ಲಿ ೩.೨೮ ಕೋಟಿ ಹೈಡ್ರೋಕ್ಲೋರೋಕ್ವಿನ್ ಮಾತ್ರೆಗಳು ಲಭ್ಯವಿದೆ ಎಂದು ಪ್ರಶ್ನೆಯೊಂದಕ್ಕೆ ಅಗರ್ವಾಲ್ ಉತ್ತರಿಸಿದರು.

ಇದೇ ವೇಳೆ ಕೊರೋನಾ ಸಮುದಾಯಿಕ ಹಂತ ತಲುಪಿದೆ ಎಂಬ ಪಂಜಾಬ್ ಮುಖ್ಯಮಂತ್ರಿ ಅಮರಿಂದ್ ಸಿಂಗ್ ಅವರ ಹೇಳಿಕೆಯನ್ನು ಸ್ಪಷ್ಟವಾಗಿ ತಳ್ಳಿಹಾಕಿದ ಲಾವ್ ಅಗರ್ ವಾಲ್ ಅವರು, ದೇಶದಲ್ಲಿ ಕೊರೋನಾ ಇನ್ನೂ ಸಮುದಾಯಿಕ ಹಂತ ತಲುಪಿಲ್ಲ. ಈ ಬಗ್ಗೆ ಯಾರೂ ಆತಂಕ ಪಡುವ ಅಗತ್ಯ ಇಲ್ಲ. ಆದರೆ ಎಚ್ಚರಿಕೆ ವಹಿಸಬೇಕು ಎಂದು ಹೇಳಿದ್ದಾರೆ.

ಈಗ ಕೊರೋನಾ ಸಮುದಾಯಿಕ ಹಂತ ತಲುಪಿದೆಯೇ ಅಥವಾ ಇಲ್ಲ ಎಂಬುದು ಮುಖ್ಯವಲ್ಲ. ಆದರೆ ನಾವು ಎಲ್ಲಾ ಮುನ್ನೆಚ್ಚರಿಕೆ ಮತ್ತು ನಿಯಂತ್ರಣ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com