ಚೀನಾದಿಂದ ಭಾರತಕ್ಕೆ 6.5 ಲಕ್ಷ ಕೊರೋನಾ ಮೆಡಿಕಲ್ ಕಿಟ್ ರವಾನೆ: ಭಾರತದ ರಾಯಭಾರಿ

ಮಾರಕ ಕೊರೋನಾ ವೈರಸ್ ವಿರುದ್ಧ ಹೋರಾಡುತ್ತಿರುವ ಭಾರತಕ್ಕೆ ಚೀನಾದಿಂದ 6.5 ಲಕ್ಷ ರ್ಯಾಪಿಡ್ ಮೆಡಿಕಲ್ ಟೆಸ್ಟ್ ಕಿಟ್ ರವಾನೆ ಮಾಡಲಾಗಿದೆ ಎಂದು ಚೀನಾದಲ್ಲಿರುವ ಭಾರತದ ರಾಯಭಾರಿ ವಿಕ್ರಮ್ ಮಿಸ್ರಿ ಹೇಳಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಮಾರಕ ಕೊರೋನಾ ವೈರಸ್ ವಿರುದ್ಧ ಹೋರಾಡುತ್ತಿರುವ ಭಾರತಕ್ಕೆ ಚೀನಾದಿಂದ 6.5 ಲಕ್ಷ ರ್ಯಾಪಿಡ್ ಮೆಡಿಕಲ್ ಟೆಸ್ಟ್ ಕಿಟ್ ರವಾನೆ ಮಾಡಲಾಗಿದೆ ಎಂದು ಚೀನಾದಲ್ಲಿರುವ ಭಾರತದ ರಾಯಭಾರಿ ವಿಕ್ರಮ್ ಮಿಸ್ರಿ ಹೇಳಿದ್ದಾರೆ.

ಭಾರತದಲ್ಲಿ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ವೈರಸ್ ನಿಯಂತ್ರಣಕ್ಕೆ ಭಾರತ ಸಕಲ ರೀತಿಯಲ್ಲೂ ಸಜ್ಜಾಗುತ್ತಿದೆ. ಅಂತೆಯೇ ಭಾರತದ ಹೋರಾಟಕ್ಕೆ ಚೀನಾ ಸಾಥ್ ನೀಡಿದ್ದು, ಭಾರತಕ್ಕೆ ರ್ಯಾಪಿಡ್ ಮೆಡಿಕಲ್ ಟೆಸ್ಟ್ ಕಿಟ್ ರವಾನೆ ಮಾಡಿದೆ.  ಈ ಬಗ್ಗೆ ಬೀಜಿಂಗ್ ನಲ್ಲಿ ಭಾರತದ ರಾಯಭಾರಿ ವಿಕ್ರಮ್ ಮಿಸ್ರಿ ಅವರು ಮಾಹಿತಿ ನೀಡಿದ್ದು, ಚೀನಾ ಭಾರತಕ್ಕೆ ಸುಮಾರು 6.5 ಲಕ್ಷ ರ್ಯಾಪಿಡ್ ಮೆಡಿಕಲ್ ಕಿಟ್ ರವಾನೆ ಮಾಡಿದೆ. ಚೀನಾದ ಒಟ್ಟು ಮೂರು ಕಂಪನಿಗಳಿಂದ ಭಾರತ ಈ ಕಿಟ್ ಗಳನ್ನು ಆಮದು ಮಾಡಿಕೊಳ್ಳುತ್ತಿದ್ದು, ಚೀನಾದ  ಗುವಾಂಗ್ಜ್ ನಲ್ಲಿ ಕಸ್ಟಮ್ಸ್ ನಿಂದ ಒಪ್ಪಿಗೆ ಸಿಕ್ಕಿದೆ. ಇಂದು ಸಂಜೆ ಈ ಕಿಟ್ ಗಳು ಭಾರತದ ರಾಜಧಾನಿ ದೆಹಲಿಗೆ ಬಂದಿಳಿಯಲಿದೆ. ಅಂತೆಯೇ ಮುಂದಿನ 15 ದಿನಗಳ ಅಂತರದಲ್ಲಿ ಭಾರತ ಇನ್ನೂ 20 ಲಕ್ಷ ಕಿಟ್ ಗಳನ್ನು ಚೀನಾದಿಂದ ಆಮದು ಮಾಡಿಕೊಳ್ಳಲಿದೆ ಎಂದು ಹೇಳಿದರು.

ಈ ಹಿಂದೆ ಜರ್ಮನಿ, ಫ್ರಾನ್ಸ್, ದಕ್ಷಿಣ ಕೊರಿಯಾ, ಇಸ್ರೇಲ್ ದೇಶಗಳಿಗೆ ಚೀನಾದಿಂದ ಪರೀಕ್ಷೆ ನಡೆಸುವ ಕಿಟ್ ಗಳು ರಫ್ತಾಗಿತ್ತು. ಈ ದೇಶಗಳ ಆರೋಗ್ಯ ಸಚಿವಾಲಯಗಳು ಈ ಕಿಟ್ ಗಳಲ್ಲಿ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ತಿರಸ್ಕರಿಸಿತ್ತು. ಅಂತರಾಷ್ಟ್ರೀಯ ಮಟ್ಟದಲ್ಲಿ ಮುಜುಗರವಾದ  ಬಳಿಕ ಚೀನಾ ಸರ್ಕಾರ ಗುಣಮಟ್ಟದ ಟೆಸ್ಟ್ ಕಿಟ್ ತಯಾರಿಸುವ ಕಂಪನಿಯನ್ನು ಪಟ್ಟಿ ಮಾಡಿ ವಿವಿಧ ರಾಷ್ಟ್ರಗಳಿಗೆ ನೀಡಿತ್ತು. ಅಷ್ಟೇ ಅಲ್ಲದೇ ಚೀನಾದ ಕಸ್ಟಮ್ಸ್ ವಿಭಾಗವೂ ಈ ಕಿಟ್ ಗಳನ್ನು ಪರೀಕ್ಷೆ ಮಾಡಿ ನಂತರ ಒಪ್ಪಿಗೆ ನೀಡುತ್ತಿದೆ.

ಭಾರತ ಸರ್ಕಾರ ಆರ್ಡರ್ ಮಾಡಿದ ಪ್ರಕಾರ ಏ.6 ಕ್ಕೆ 7 ಲಕ್ಷ ಕಿಟ್ ಗಳು ಬರಬೇಕಿತ್ತು. ಆದರೆ ಲಾಜಿಸ್ಟಿಕ್ಸ್ ಸಮಸ್ಯೆ ಮತ್ತು ಪರೀಕ್ಷಾ ಕಾರಣದಿಂದ ತಡವಾಗಿ ರವಾನೆಯಾಗುತ್ತಿದೆ. ಅತಿ ಹೆಚ್ಚು ಕೊರೊನಾ ಪ್ರಕರಣಗಳು ಬಂದಿರುವ ಹಾಟ್ ಸ್ಪಾಟ್ ಗಳಲ್ಲಿನ ವ್ಯಕ್ತಿಗಳನ್ನು ಪರೀಕ್ಷೆ ನಡೆಸಲು  ಈ ಕಿಟ್ ಬಳಕೆ ಮಾಡಲಾಗುತ್ತದೆ. ಮುಂದಿನ ದಿನಗಳಲ್ಲಿ ಭಾರತಕ್ಕೆ 30 ಲಕ್ಷ ಕೊರೊನಾ ಕಿಟ್ ಗಳು ಆಮದು ಆಗಲಿದೆ. ಅಂತೆಯೇ ಭಾರತ ಸರ್ಕಾರ ಒಟ್ಟು 15 ಮಿಲಿಯನ್ ಕಿಟ್ ಗಳ ಖರೀದಿಗೆ ಆರ್ಡರ್ ಮಾಡಿದ್ದು, ಇದಲ್ಲದೆ ವೈದ್ಯರು ಬಳಸುವ ಪಿಪಿಇ ಕಿಟ್ ಗಳಿಗೂ ಆರ್ಡರ್ ಮಾಡಿದೆ. ಇದಲ್ಲದೆ ಭಾರತ ಒಟ್ಟು 3 ಮಿಲಿಯನ್ ಟೆಸ್ಟ್ ಕಿಟ್ ಗಳ ಖರೀದಿಗೆ ಆರ್ಡರ್ ಮಾಡಿದೆ ಭಾರತದ ಬೇಡಿಕೆಗೆ ಚೀನಾ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ನಿಗದಿತ ಅವಧಿಯಲ್ಲೇ ಎಲ್ಲ ಕಿಟ್ ಗಳನ್ನೂ ರವಾನೆ ಮಾಡುವ ಭರವಸೆ ನೀಡಿದೆ ಎಂದು ಮಿಸ್ರಿ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com