ಏರ್ಸೆಲ್ ಮ್ಯಾಕ್ಸಿಸ್ ಪ್ರಕರಣ: ಚಿದಂಬರಂ, ಕಾರ್ತಿ ವಿರುದ್ಧದ ತನಿಖೆ ಪೂರ್ಣಗೊಳಿಸಲು ಸಿಬಿಐ, ಇಡಿಗೆ 3 ತಿಂಗಳ ಗಡುವು

ಮಾಜಿ ಕೇಂದ್ರ ಸಚಿವ ಚಿದಂಬರಂ, ಕಾರ್ತಿ ಚಿದಂಬರಂ ವಿರುದ್ಧದ ಏರ್ಸೆಲ್ ಮ್ಯಾಕ್ಸಿಸ್ ಪ್ರಕರಣದ ತನಿಖೆಯನ್ನು ಪೂರ್ಣಗೊಳಿಸಲು ದೆಹಲಿ ಕೋರ್ಟ್ ಸಿಬಿಐ, ಇಡಿಗೆ 3 ತಿಂಗಳ ಕಾಲಾವಕಾಶ ನೀಡಿದೆ. 
ಚಿದಂಬರಂ
ಚಿದಂಬರಂ

ನವದೆಹಲಿ: ಮಾಜಿ ಕೇಂದ್ರ ಸಚಿವ ಚಿದಂಬರಂ, ಕಾರ್ತಿ ಚಿದಂಬರಂ ವಿರುದ್ಧದ ಏರ್ಸೆಲ್ ಮ್ಯಾಕ್ಸಿಸ್ ಪ್ರಕರಣದ ತನಿಖೆಯನ್ನು ಪೂರ್ಣಗೊಳಿಸಲು ದೆಹಲಿ ಕೋರ್ಟ್ ಸಿಬಿಐ, ಇಡಿಗೆ 3 ತಿಂಗಳ ಕಾಲಾವಕಾಶ ನೀಡಿದೆ. 

ಪ್ರಗತಿಯಲ್ಲಿರುವ ತನಿಖೆಗೆ ಸಂಬಂಧಿಸಿದಂತೆ ಬ್ರಿಟನ್ ಹಾಗೂ ಸಿಂಗಪೂರ್ ನಿಂದ ಮಾಹಿತಿ ಪಡೆಯುವುದಕ್ಕಾಗಿ ಲೆಟರ್ಸ್ ರೊಗೇಟರಿ ಸಲ್ಲಿಕೆ ಮಾಡಲಾಗಿತ್ತು. ಆದರೆ ಈ ವರೆಗೂ ಮಾಹಿತಿ ಲಭ್ಯವಾಗದ ಕಾರಣ ಸಿಬಿಐ, ಇಡಿ 3 ತಿಂಗಳ ಕಾಲಾವಕಾಶ ಕೋರಿದ್ದು ಕೋರ್ಟ್ ಅನುಮತಿ ನೀಡಿದೆ. 

ಆ.04 ರಂದು ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಧೀಶ ಅಜಯ್ ಕುಮಾರ್ ಕೌಹರ್, ಮುಂದಿನ ವಿಚಾರಣೆಯನ್ನು ನವೆಂಬರ್ 3 ಕ್ಕೆ ನಿಗದಿಪಡಿಸಿದ್ದಾರೆ. 

ಹೆಚ್ಚುವರಿ ಸಾಲಿಸಿಟರ್ ಜನರಲ್ ಸಂಜಯ್ ಜೈನ್ ಸಿಬಿಐ ಹಾಗೂ ಇಡಿ ಪರ ವಾದ ಮಂಡಿಸಿ ಎಲ್ ಆರ್ ಗಳ ಬಗ್ಗೆ ವರದಿ ನೀಡಿದ್ದು, ಶೀಘ್ರವೇ ಲೆಟರ್ಸ್ ರೊಗೇಟರಿಯನ್ನು ಶೀಘ್ರವೇ ನೀಡುವಂತೆ ಮತ್ತೊಮ್ಮೆ ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿದ್ದಾರೆ. 

ಹಿರಿಯ ಅಡ್ವೊಕೇಟ್ ಸೋನಿಯಾ ಮಾಥುರ್ ಸಹ ವಾದ ಮಂಡಿಸಿ ಈ ಪ್ರಕ್ರಿಯೆ ಪೂರ್ಣಗೊಳ್ಳುವುದಕ್ಕೆ 3 ತಿಂಗಳ ಕಾಲಾವಕಾಶ ಬೇಕೆಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಪಿ.ಚಿದಂಬರಂ ಅವರು 2006 ರಲ್ಲಿ ಕೇಂದ್ರ ಹಣಕಾಸು ಸಚಿವರಾಗಿದ್ದಾಗ ಅಧಿಕಾರ ದುರ್ಬಳಕೆ ಮಾಡಿಕೊಂಡು ಏರ್ಸೆಲ್ ಮ್ಯಾಕ್ಸಿಸ್ ಡೀಲ್ ನಲ್ಲಿ ನಿರ್ದಿಷ್ಟ ವ್ಯಕ್ತಿಗಳಿಗೆ ಲಾಭ ಮಾಡಿಕೊಟ್ಟಿದ್ದಾರೆ ಇದರಲ್ಲಿ ಚಿದಂಬರಂ ಅವರ ಪುತ್ರ ಕಾರ್ತಿ ಚಿದಂಬರಂ ಅವರೂ ಶಾಮೀಲಾಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com