ರೈತರು ಮತ್ತು ಸರ್ಕಾರ ಮಧ್ಯೆ ಸೌಹಾರ್ದಯುತ ಪರಿಹಾರ ಕಂಡುಕೊಳ್ಳಿ: ಗೃಹ ಸಚಿವ ಅಮಿತ್ ಶಾಗೆ ಪಂಜಾಬ್ ಸಿಎಂ ಮನವಿ

ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಗುರುವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ಸರ್ಕಾರ ಮತ್ತು ರೈತರ ನಡುವೆ ಇರುವ ಬಿಕ್ಕಟ್ಟನ್ನು ಸಂಧಾನ ಸೂತ್ರ ಮೂಲಕ ಬಗೆಹರಿಸುವಂತೆ ಮನವಿ ಮಾಡಿಕೊಂಡಿದ್ದಾರೆ.
ರೈತರ ಪ್ರತಿಭಟನೆ
ರೈತರ ಪ್ರತಿಭಟನೆ

ನವದೆಹಲಿ: ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಗುರುವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ಸರ್ಕಾರ ಮತ್ತು ರೈತರ ನಡುವೆ ಇರುವ ಬಿಕ್ಕಟ್ಟನ್ನು ಸಂಧಾನ ಸೂತ್ರ ಮೂಲಕ ಬಗೆಹರಿಸುವಂತೆ ಮನವಿ ಮಾಡಿಕೊಂಡಿದ್ದಾರೆ.

ಇಂದು ಬೆಳಗ್ಗೆ ಅಮಿತ್ ಶಾ ಅವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿದ ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್, ರೈತ ಪ್ರತಿನಿಧಿಗಳ ಜೊತೆ ಮಾತುಕತೆ ನಡೆಸಿ ಒಂದು ಪರಿಹಾರ ಸೂತ್ರ ಕಂಡುಕೊಂಡು ರೈತರನ್ನು ಅವರ ಊರುಗಳಿಗೆ ವಾಪಸ್ ಕಳುಹಿಸಿಕೊಡುವಂತೆ ಕೋರಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಇತ್ತ ದೆಹಲಿಯ ವಿಜ್ಞಾನ ಭವನದಲ್ಲಿ ಇಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೊಮರ್ ಮತ್ತು ರೈತ ಸಂಘಟನೆಗಳ ಪ್ರತಿನಿಧಿಗಳ ಮಧ್ಯೆ ಸಭೆ ನಡೆಯುತ್ತಿದ್ದಂತೆ ಅತ್ತ ಪಂಜಾಬ್ ಸಿಎಂ ಗೃಹ ಸಚಿವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.

ಪಂಜಾಬ್ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ಪಕ್ಷ ರೈತರ ಪರವಾಗಿದೆ. ಕೇಂದ್ರದ ನೂತನ ಕೃಷಿ ಮಸೂದೆಯನ್ನು ಜಾರಿಗೆ ತರುವುದಿಲ್ಲ ಎಂದು ಹೇಳಿ ಇತ್ತೀಚೆಗೆ ವಿಧಾನಸಭೆಯಲ್ಲಿ ಮಸೂದೆಗಳನ್ನು ಸಹ ಅನುಮೋದಿಸಿದೆ.

ಕೇಂದ್ರ ಸರ್ಕಾರದ ನೂತನ ಕೃಷಿ ಮಸೂದೆ ವಿರುದ್ಧ ರೈತರು ನಡೆಸುತ್ತಿರುವ ದೆಹಲಿ ಚಲೋ ಪ್ರತಿಭಟನೆ 8ನೇ ದಿನಕ್ಕೆ ಕಾಲಿಟ್ಟಿದ್ದು ರೈತರು ದಿನದಿಂದ ದಿನಕ್ಕೆ ಪ್ರತಿಭಟನೆಯನ್ನು ತೀವ್ರಗೊಳಿಸಿದ್ದಾರೆ.

ಇಂದು ದೆಹಲಿ ಪೊಲೀಸರು ಭದ್ರತೆ ವ್ಯವಸ್ಥೆಯನ್ನು ತೀವ್ರಗೊಳಿಸಿದ್ದು ನಗರಕ್ಕೆ ಬಂದು ಹೋಗುವ ಪ್ರಯಾಣಿಕರಿಗೆ ಬದಲಿ ಮಾರ್ಗಗಳನ್ನು ಸೂಚಿಸಿದ್ದಾರೆ. ರಾಜಧಾನಿಯಲ್ಲಿ ತೀವ್ರ ಸಂಚಾರ ದಟ್ಟಣೆ ಉಂಟಾಗಿರುವುದರಿಂದ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ.

ನಿನ್ನೆ ಪ್ರತಿಭಟನಾನಿರತ ರೈತರು ಕೇಂದ್ರ ಸರ್ಕಾರ ಸಂಸತ್ತಿನ ವಿಶೇಷ ಅಧಿವೇಶನ ಕರೆಯುವಂತೆ ಮತ್ತು ನೂತನ ಕೃಷಿ ಮಸೂದೆಯನ್ನು ಹಿಂಪಡೆಯುವಂತೆ ಒತ್ತಾಯಿಸಿದ್ದರು. ಇಲ್ಲದಿದ್ದರೆ ದೆಹಲಿಯಲ್ಲಿ ಬೇರೆ ರಸ್ತೆಗಳನ್ನು ತಡೆಮಾಡಿ ಕೇಂದ್ರ ಸರ್ಕಾರ ತಮ್ಮ ಒತ್ತಾಯಕ್ಕೆ ಮಣಿಯದಿದ್ದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದರು.

ಇಂದು ರೈತ ಸಂಘಟನೆಗಳ ಪ್ರತಿನಿಧಿಗಳು ಮತ್ತು ಕೇಂದ್ರ ಸರ್ಕಾರ ಮಧ್ಯೆ ಮಹತ್ವದ ಮಾತುಕತೆ ನಡೆದಿದೆ. 
ದೆಹಲಿ ಸಂಚಾರ ಪೊಲೀಸರು ಸರಣಿ ಟ್ವೀಟ್ ಮಾಡಿ, ಸಿಂಘು, ಲಂಪುರ್, ಔಚಂಡಿ, ಚಿಲ್ಲ ಮತ್ತು ಇತರ ಗಡಿಭಾಗಗಳನ್ನು ಮುಚ್ಚುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಹರ್ಯಾಣಕ್ಕೆ ಪ್ರಯಾಣಿಸುವವರು ಧನ್ಸ, ದೌರಾಲಾ, ಕಪಶೆರಾ, ರಜೊಕ್ರಿ ರಾಷ್ಟ್ರೀಯ ಹೆದ್ದಾರಿ 8, ಬಿಜ್ವಾಸನ್/ಬಜ್ಗೆರ, ಪಲಮ್ ವಿಹಾರ್ ಮತ್ತು ದುಂಡಹೆರ ಗಡಿಗಳ ಮೂಲಕ ಪ್ರಯಾಣಿಸಬಹುದೆಂದು ಪೊಲೀಸರು ಪ್ರಯಾಣಿಕರಿಗೆ ತಿಳಿಸಿದ್ದಾರೆ.
ಎರಡೂ ಕಡೆಗಳಿಂದ ಸಿಂಘು ಗಡಿಯನ್ನು ಇನ್ನೂ ಮುಚ್ಚಲಾಗಿದೆ. ಲಂಪುರ್, ಔಚಂಡಿ ಮತ್ತು ಇತರ ಗಡಿಗಳು ಸಹ ಮುಚ್ಚಿವೆ. ಬದಲಿ ಮಾರ್ಗಗಳನ್ನು ಬಳಸಿ. ಮುಕರ್ಬ ಚೌಕ್ ಮತ್ತು ಜಿಕೆಟಿ ರಸ್ತೆ ಮೂಲಕ ಬದಲಿ ಸಂಚಾರ ಮಾಡಲಾಗಿದೆ ಎಂದು ದೆಹಲಿ ನಗರ ಸಂಚಾರ ಪೊಲೀಸರು ಟ್ವೀಟ್ ಮಾಡಿದ್ದಾರೆ.

ಅಲ್ಲದೆ ಪ್ರಯಾಣಿಕರು ನೊಯ್ಡಾ ಸಂಪರ್ಕ ರಸ್ತೆಯ ಮೂಲಕ ಹೋಗದೆ ರಾಷ್ಟ್ರೀಯ ಹೆದ್ದಾರಿ 24ನ್ನು ಬಳಸುವಂತೆ ಸೂಚಿಸಲಾಗಿದೆ. ಟಿಕ್ರಿ,  ಜರೋಡಾ ಗಡಿಗಳನ್ನು ಮುಚ್ಚಲಾಗಿದೆ. ಬದುಸರಾಯ್ ಗಡಿ ಕಾರು ಮತ್ತು ದ್ವಿಚಕ್ರ ವಾಹನಗಳಂತಹ ಲಘು ಮೋಟಾರು ವಾಹನಗಳಿಗೆ ಮಾತ್ರ ತೆರೆದಿರುತ್ತದೆ. ಜಾಟಿಕರಾ  ಗಡಿ ದ್ವಿಚಕ್ರ ವಾಹನ ಸಂಚಾರಕ್ಕೆ ಮಾತ್ರ ತೆರೆದಿರುತ್ತದೆ ”ಎಂದು ಅದು ಮತ್ತೊಂದು ಟ್ವೀಟ್‌ನಲ್ಲಿ ತಿಳಿಸಿದೆ.

ದೆಹಲಿ ಚಲೋ ಪ್ರತಿಭಟನೆ ಭಾಗವಾಗಿ ರೈತರು ರಾಜಧಾನಿಯ ಸಿಂಘು, ನೊಯ್ಡಾ, ಗಜಿಪುರ್ ಮತ್ತು ಟಿಕ್ರಿಯ ಗಡಿಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಭಟನಾಕಾರರಿಗೆ ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಬೆಂಬಲ ನೀಡಿ ಪ್ರತಿಭಟನಾಕಾರರ ಜೊತೆ ಸೇರಿದ್ದಾರೆ. 

ಈ ಮಧ್ಯೆ ಪಂಜಾಬ್ ಮಾಜಿ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್, ರೈತರಿಗೆ ಸರ್ಕಾರ ದ್ರೋಹ ಮಾಡುತ್ತಿದೆ ಎಂದು ಆರೋಪಿಸಿ ರೈತರ ಪರವಾಗಿ ನಿಂತು ಸರ್ಕಾರ ನೀಡಿರುವ ಪದ್ಮಭೂಷಣ ಪ್ರಶಸ್ತಿಯನ್ನು ಹಿಂತಿರುಗಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com