13 ತಿಂಗಳಲ್ಲಿ 25 ಶಾಲೆಗಳಲ್ಲಿ ಕೆಲಸ; ಒಂದೇ ವರ್ಷದಲ್ಲಿ 1 ಕೋಟಿ ರೂ ವೇತನ ಪಡೆದ ಶಿಕ್ಷಕಿ ವೊಲೀಸ್ ವಶಕ್ಕೆ

ಉತ್ತರ ಪ್ರದೇಶದ ಸರ್ಕಾರಿ ಶಾಲೆಯ ಶಿಕ್ಷಕಿಯೊಬ್ಬರು ಒಂದೇ ವರ್ಷದಲ್ಲಿ ಬರೊಬ್ಬರಿ 1 ಕೋಟಿ ರೂ ವೇತನ ಪಡೆಯುವ ಮೂಲಕ ಪೊಲೀಸರ ಅತಿಥಿಯಾಗಿದ್ದಾರೆ.
ಬಂಧನ (ಸಾಂದರ್ಭಿಕ ಚಿತ್ರ)
ಬಂಧನ (ಸಾಂದರ್ಭಿಕ ಚಿತ್ರ)

ಲಖನೌ: ಉತ್ತರ ಪ್ರದೇಶದ ಸರ್ಕಾರಿ ಶಾಲೆಯ ಶಿಕ್ಷಕಿಯೊಬ್ಬರು ಒಂದೇ ವರ್ಷದಲ್ಲಿ ಬರೊಬ್ಬರಿ 1 ಕೋಟಿ ರೂ ವೇತನ ಪಡೆಯುವ ಮೂಲಕ ಪೊಲೀಸರ ಅತಿಥಿಯಾಗಿದ್ದಾರೆ.

ಹೌದು.. ದುರ್ಬಲ ವರ್ಗದ ಬಾಲಕಿಯರಿಗಾಗಿ ಉತ್ತರ ಪ್ರದೇಶ ಸರ್ಕಾರ ಸ್ಥಾಪಿಸಿರುವ ಕಸ್ತೂರ್‌ ಬಾ ಬಾಲಿಕಾ ವಿದ್ಯಾಲಯದಲ್ಲಿ (ಕೆಜಿಬಿವಿ) ಕೆಲಸ ಮಾಡುತ್ತಿದ್ದ ಶಿಕ್ಷಕಿ ಒಂದೇ ವರ್ಷದಲ್ಲಿ ಕೋಟ್ಯಧಿಪತಿಯಾಗಿ ಇದೀಗ ಪೊಲೀಸರ ಅತಿಥಿಯಾಗಿದ್ದಾರೆ. 25 ಕಸ್ತೂರ್ಬಾ ಗಾಂಧಿ ಬಾಲಿಕಾ ವಿದ್ಯಾಲಯದಲ್ಲಿ (ಕೆಜಿಬಿವಿ) ಕೆಲಸ ಮಾಡಿ 13 ತಿಂಗಳ ಅವಧಿಯಲ್ಲಿ 1 ಕೋಟಿ ರೂ. ಸಂಬಳ ಸಂಗ್ರಹಿಸಿದ ಶಿಕ್ಷಕಿ ಅನಾಮಿಕಾ ಶುಕ್ಲಾ ಎನ್ನುವರನ್ನು ಉತ್ತರ ಪ್ರದೇಶದ ಕಾಸ್ಗಂಜ್ ಜಿಲ್ಲೆಯಲ್ಲಿ ಪೊಲೀಸರು ಬಂಧಿಸಿದ್ದಾರೆ. 

ಉತ್ತರ ಪ್ರದೇಶದಲ್ಲಿ ಶಿಕ್ಷಕರ ದತ್ತಾಂಶ ಸಂಗ್ರಹದ ವೇಳೆ ಈ ಸ್ಫೋಟಕ ವಿಷಯ ಬೆಳಕಿಗೆ ಬಂದಿದ್ದು, 2020ರ ಫೆಬ್ರವರಿವರೆಗೆ 13 ತಿಂಗಳಿನಿಂದ ಅನಾಮಿಕಾ ಶುಕ್ಲಾ 25 ಕಡೆಗಳಲ್ಲಿ ಏಕಕಾಲಕ್ಕೆ ಕರ್ತವ್ಯ ನಿರ್ವಹಿಸಿದ ಅಂಶ ಬಹಿರಂಗವಾಗಿದೆ. ಪ್ರಾಥಮಿಕ ಶಾಲಾ ಶಿಕ್ಷಕರ ಹಾಜರಾತಿಯ ರಿಯಲ್‌ ಟೈಮ್‌ ಮಾನಿಟರಿಂಗ್‌ ನಡೆಯುತ್ತಿದ್ದರೂ ಶುಕ್ಲಾ ಈ ರೀತಿ ವಂಚನೆ ಮಾಡಿರುವುದು ಅಚ್ಚರಿ ಮೂಡಿಸಿದೆ. 

ಏಕಕಾಲದಲ್ಲಿ 25 ಶಾಲೆಗಳಲ್ಲಿ ಕೆಲಸ
ಮೈನ್‌ಪುರಿ ಮೂಲದ ಶುಕ್ಲಾ ದಾಖಲೆಗಳ ಪ್ರಕಾರ ಎಲ್ಲ ಶಾಲೆಗಳಲ್ಲೂ ಏಕಕಾಲದಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. ಹಲವು ವರ್ಷಗಳಿಂದ ಈ ಶಾಲೆಗಳ ಶಿಕ್ಷಕರ ಹಾಜರಾತಿ ಪುಸ್ತಕದಲ್ಲಿ ಈಕೆಯ ಹೆಸರಿದೆ. ಶಿಕ್ಷಕಿಯ ವಿರುದ್ಧ ಕಳೆದ ಮಾರ್ಚ್‌ನಲ್ಲಿ ಬಂದ ದೂರಿನ ಅನ್ವಯ ತನಿಖೆ ನಡೆಸಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ.  ಈ ವಿಷಯ ಬೆಳಕಿಗೆ  ಬಂದ ನಂತರ ಯುಪಿ ಶಿಕ್ಷಣ ಸಚಿವ ಡಾ.ಸತೀಶ್ ದ್ವಿವೇದಿ ಅವರು ಅನಾಮಿಕಾ ಶುಕ್ಲಾ ವಿರುದ್ಧ ತನಿಖೆ ಮತ್ತು ಎಫ್‌ಐಆರ್‌ಗೆ ಆದೇಶಿಸಿದ್ದರು. ಈ ವಿಚಾರ ಸುದ್ದಿಯಾಗುತ್ತಿದ್ದಂತೆಯೇ ಶಿಕ್ಷಕಿ ಅಧಿಕಾರಿಗಳ ಸಂಪರ್ಕಕ್ಕೆ ಸಿಗದೆ ತಲೆಮರೆಸಿಕೊಂಡಿದ್ದರು. ಇದೀಗ ವಂಚತಿ ಶಿಕ್ಷಕಿ ಪೊಲೀಸರ ಅತಿಥಿಯಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com