ಕರ್ನೂಲು ಕಾರ್ಖಾನೆಯಲ್ಲಿ ವಿಷಾನಿಲ ಸೋರಿಕೆ, ಒಂದು ಸಾವು, ಹಲವರು ಆಸ್ಪತ್ರೆಗೆ ದಾಖಲು

ಆಂಧ್ರ ಪ್ರದೇಶದ ವಿಶಾಖಪಟ್ಟಣಂನ ಎಲ್ ಜಿ ಪಾಲಿಮರ್ಸ್ ಪ್ಲಾಸ್ಟಿಕ್ ಕಾರ್ಖಾನೆಯಲ್ಲಿ ವಿಷಾನಿಲ ಸೋರಿಕೆ ಪ್ರಕರಣ ಇನ್ನೂ ಹಸಿರಾಗಿರುವಂತೆಯೇ ಇತ್ತ ಅದೇ ರಾಜ್ಯದ ಕರ್ನೂಲು ಜಿಲ್ಲೆಯಲ್ಲೂ ಕಾರ್ಖಾನೆಯೊಂದರಲ್ಲಿ ವಿಷಾನಿಲ ಸೋರಿಕೆಯಾಗಿ ಒಂದು ಸಾವು ಸಂಭವಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಕರ್ನೂಲು: ಆಂಧ್ರ ಪ್ರದೇಶದ ವಿಶಾಖಪಟ್ಟಣಂನ ಎಲ್ ಜಿ ಪಾಲಿಮರ್ಸ್ ಪ್ಲಾಸ್ಟಿಕ್ ಕಾರ್ಖಾನೆಯಲ್ಲಿ ವಿಷಾನಿಲ ಸೋರಿಕೆ ಪ್ರಕರಣ ಇನ್ನೂ ಹಸಿರಾಗಿರುವಂತೆಯೇ ಇತ್ತ ಅದೇ ಆಂಧ್ರ ಪ್ರದೇಶದ ಕರ್ನೂಲು ಜಿಲ್ಲೆಯಲ್ಲೂ ಕಾರ್ಖಾನೆಯೊಂದರಲ್ಲಿ ವಿಷಾನಿಲ ಸೋರಿಕೆಯಾಗಿ ಒಂದು ಸಾವು ಸಂಭವಿಸಿದೆ.

ಕರ್ನೂಲು ಜಿಲ್ಲೆಯ ನಂದ್ಯಾಲ್ ಟೌನ್ ನಲ್ಲಿರುವ ಎಸ್ ಪಿವೈ ರೆಡ್ಡಿ ಆಗ್ರೋ ಕೆಮಿಕಲ್ ಕಾರ್ಖಾನೆಯಲ್ಲಿ ಇಂದು ಮುಂಜಾನಿ ವಿಷಾನಿಲ ಸೋರಿಕೆಯಾಗಿದ್ದು, ಘಟನೆಯಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾರೆ. ಅತ್ತ ಕಾರ್ಖಾನೆಯಲ್ಲಿ ವಿಷಾನಿಲ ಸೋರಿಕೆಯಾದ ವಿಚಾರ ಕಾಡ್ಗಿಚ್ಚಿನಂತೆ ಜಿಲ್ಲೆಯಾದ್ಯಂತ ಹಬ್ಬಿದ್ದು, ವಿಚಾರ ತಿಳಿದ ತಕ್ಷಣವೇ ಜನ ದೂರ ಪ್ರದೇಶಗಳಿಗೆ ಓಡಿ ಹೋಗುವ ಪ್ರಯತ್ನ ಮಾಡಿದ್ದಾರೆ. 

ಮೂಲಗಳ ಪ್ರಕಾರ ಕಾರ್ಖಾನೆಯಿಂದ ಅಮೋನಿಯಾ ಗ್ಯಾಸ್ ಲೀಕ್ ಆಗಿದ್ದು, ಘಟನೆಯಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾರೆ. ಅಂತೆಯೇ ಹಲವರಲ್ಲಿ ಉಸಿರಾಟದ ತೊಂದರೆಯಾಗಿ ಆಸ್ಪತ್ರೆ ಸೇರಿದ್ದಾರೆ. ಈ ಪೈಕಿ ಮೂವರ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದೆ. 

ಈ ಬಗ್ಗೆ ಮಾಹಿತಿ ನೀಡಿದ ಕರ್ನೂಲು ಜಿಲ್ಲಾಧಿಕಾರಿ ವೀರ ಪಾಂಡಿಯನ್ ಅವರು, ಘಟನಾ ಸಂದರ್ಭದಲ್ಲಿ ಕಾರ್ಖಾನೆಯಲ್ಲಿ 60 ಮಂದಿ ಕಾರ್ಮಿಕರಿದ್ದರು. ಈ ಪೈಕಿ ಒಬ್ಬರು ಸಾವನ್ನಪ್ಪಿದ್ದಾರೆ. ಮೂವರ ಆರೋಗ್ಯ ಗಂಭೀರವಾಗಿದ್ದು, ಎಲ್ಲರನ್ನೂ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಹೇಳಿದರು.

ಗ್ಯಾಸ್ ಲೀಕ್ ಬಗ್ಗೆ ಮಾತನಾಡಿದ ಆಂಧ್ರ ಪ್ರದೇಶದ ಮಾಲಿನ್ಯ ನಿಯಂತ್ರಣ ಇಲಾಖೆಯ ಅಧಿಕಾರಿ ಮುನಿ ಪ್ರಸಾದ್ ಅವರು, ಕಾರ್ಖಾನೆಯಲ್ಲಿ ಬಾಟ್ಲಿಂಗ್ ಪ್ರಕ್ರಿಯೆಗಾಗಿ ದ್ರವೀಕೃತ CO2 (ಇಂಗಾಲದ ಡೈಆಕ್ಸೈಡ್) ಅನಿಲ ಮತ್ತು ಕೂಲಿಂಗ್ ಗಾಗಿ ಅಮ್ಮೋನಿಯಾವನ್ನು ಬಳಕೆ ಮಾಡಲಾಗುತ್ತಿತ್ತು. ಕಾರ್ಖಾನೆಯಲ್ಲಿ ನಿರ್ವಹಣಾ ದೋಷ ಕಂಡುಬಂದಿದ್ದು, ಇದರಿಂದ ಸ್ಟೋರೇಜ್ ಟ್ಯಾಂಕ್ ನಿಂದ ಅಮ್ಮೋನಿಯಾ ಗ್ಯಾಸ್ ಲೀಕ್ ಆಗಿದೆ. ಪ್ರಸ್ತುತ ದೋಷ ಸರಿಪಡಿಸಲಾಗಿದ್ದು, ಗ್ಯಾಸ್ ಲೀಕ್ ಆಗುತ್ತಿದ್ದ ಪೈಪ್ ಲೈನ್ ದುರಸ್ತಿ ಮಾಡಲಾಗಿದೆ ಎಂದು ಹೇಳಿದರು.

ಇನ್ನು ಕೆಲ ತಿಂಗಳಗಳ ಹಿಂದಷ್ಟೇ ಇದೇ ಆಂಧ್ರ ಪ್ರದೇಶದ ವಾಣಿಜ್ಯ ರಾಜಧಾನಿ ವಿಶಾಖಪಟ್ಟಣಂ ಎಲ್ ಜಿ ಪಾಲಿಮರ್ಸ್ ಪ್ಲಾಸ್ಟಿಕ್ ಕಾರ್ಖಾನೆಯಲ್ಲಿ ಸಂಭವಿಸಿದ್ದ ವಿಷಾನಿಲ ದುರಂತದಲ್ಲಿ 12 ಮಂದಿ ಸಾವನ್ನಪ್ಪಿದ್ದರು. ವಿಷಾನಿಲ ಸೋರಿಕೆ ಪ್ರಕರಣ ದೇಶಾದ್ಯಂತ ಭಾರಿ ಸುದ್ದಿಗೆ ಗ್ರಾಸವಾಗಿತ್ತು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com