ಮಹಾರಾಷ್ಟ್ರ: ಸರಕು ಸಾಗಣೆಯಲ್ಲ, ಮಾನವ 'ಕಳ್ಳ'ಸಾಗಣೆ; ಟ್ರಕ್ ನಲ್ಲಿ 300ಕ್ಕೂ ಅಧಿಕ ಜನರ ನೋಡಿ ಬೆಚ್ಚಿ ಬಿದ್ದ ಪೊಲೀಸರು

ಮಹಾರಾಷ್ಟ್ರದಲ್ಲಿ ಟ್ರಕ್ ಗಳಲ್ಲಿ ಅಕ್ರಮವಾಗಿ 300ಕ್ಕೂ ಜನರನ್ನು ಸಾಗಾಟ ಮಾಡುತ್ತಿದ್ದ ಘಟನೆ ವರದಿಯಾಗಿದೆ.

Published: 27th March 2020 03:18 PM  |   Last Updated: 27th March 2020 03:18 PM   |  A+A-


migrant workers inside container trucks

ಟ್ರಕ್ ನಲ್ಲಿ ಕಾರ್ಮಿಕರ ಸಾಗಾಟ

Posted By : Srinivasamurthy VN
Source : The New Indian Express

ಮುಂಬೈ: ಮಹಾರಾಷ್ಟ್ರದಲ್ಲಿ ಟ್ರಕ್ ಗಳಲ್ಲಿ ಅಕ್ರಮವಾಗಿ 300ಕ್ಕೂ ಜನರನ್ನು ಸಾಗಾಟ ಮಾಡುತ್ತಿದ್ದ ಘಟನೆ ವರದಿಯಾಗಿದೆ.

ಕೊರೋನಾ ವೈರಸ್ ಹಿನ್ನಲೆಯಲ್ಲಿ ದೇಶಾದ್ಯಂತ 21 ದಿನಗಳ ಲಾಕ್ ಡೌನ್ ಹೇರಲಾಗಿದ್ದು, ಯಾರೂ ಕೂಡ ಮನೆಯಿಂದ ಹೊರಬರದಂತೆ ಹಾಗೂ ಎಲ್ಲಿಯೂ ಪ್ರಯಾಣ ಮಾಡದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಲಾಕ್‌ಡೌನ್ ಆದೇಶವನ್ನು ಅತ್ಯಂತ ಕಟ್ಟುನಿಟ್ಟಾಗಿ ಜಾರಿಗೆ ತರುವುದು ಆಯಾ ರಾಜ್ಯ ಸರ್ಕಾರಗಳ ಕರ್ತವ್ಯವಾಗಿದ್ದು, ಈ ಹಿನ್ನೆಲೆಯಲ್ಲಿ ಎಲ್ಲ ರಾಜ್ಯಗಳೂ ಬಿಗಿ ಬಂದೋಬಸ್ತ್ ಏರ್ಪಡಿಸಿವೆ.

ಆದರೆ ಸರ್ಕಾರದ ಸೂಚನೆಯೇ ತಿಳಿಯದಂತೆ ಜನರು ವರ್ತಿಸುತ್ತಿದ್ದು, ಬಸ್ ಸೇವೆ ಬಂದ್ ಆಗಿದ್ದರೂ ಅಕ್ರಮವಾಗಿ ಟ್ರಕ್ ಗಳ ಮೂಲಕ ಕಳ್ಳ ಮಾರ್ಗದಲ್ಲಿ ಸಂಚರಿಸುತ್ತಿದ್ದಾರೆ. ಏಕಾಏಕಿ ಲಾಕ್‌ಡೌನ್ ಆಗಿರುವುದರಿಂದ ತಮ್ಮ ಮಾತೃ ರಾಜ್ಯಗಳಿಗೆ ತೆರಳದೇ ಕಾರ್ಮಿಕರು ಪರದಾಡುತ್ತಿದ್ದು,  ಸಾರಿಗೆ ಸೇವೆ ಇಲ್ಲದೇ ಕಳ್ಳ ಮಾರ್ಗದಲ್ಲಿ ತವರು ಸೇರಿಕೊಳ್ಳಲು ಯತ್ನಿಸುತ್ತಿದ್ದಾರೆ, ದೆಹಲಿಯಲ್ಲಿ ಈಗಾಗಲೇ ಕೆಲವು ವಲಸೆ ಕಾರ್ಮಿಕರು ತಮ್ಮ ಕುಟುಂಬ ಸಮೇತರಾಗಿ ನಡೆದುಕೊಂಡೇ ತಮ್ಮ ತಮ್ಮ ಮನೆಗಳನ್ನು ಸೇರುತ್ತಿರುವ ಕುರಿತು ವರದಿಯಾಗಿತ್ತು. 

ಆದರೆ ಮಹಾರಾಷ್ಟ್ರದಲ್ಲಿ ಟ್ರಕ್ ನಲ್ಲಿ ಕಾರ್ಮಿಕರನ್ನು ಸಾಗಿಸುತ್ತಿರುವುದನ್ನು ನೋಡಿ ಪೊಲೀಸರನ್ನೇ ಬೆಚ್ಚಿ ಬಿದ್ದಿದ್ದಾರೆ. ತೆಲಂಗಾಣದಿಂದ ರಾಜಸ್ಥಾನಕ್ಕೆ ಸರ್ಕಾರದ ಆದೇಶದಂತೆ ಅಗತ್ಯ ವಸ್ತುಗಳನ್ನು ಹೊತ್ತು ತೆರಳುತ್ತಿದ್ದ ಟ್ರಕ್‌ ಗಳಲ್ಲಿ ಸುಮಾರು 300 ಅಧಿಕ ವಲಸೆ ಕಾರ್ಮಿಕರು ಪ್ರಯಾಣಿಸುತ್ತಿದ್ದ ಘಟನೆ ಬೆಳಕಿಗೆ ಬಂದಿದೆ. ತೆಲಂಗಾಣದ ರಾಜಧಾನಿ ಹೈದರಾಬಾದ್‌ನಲ್ಲಿ ಕೆಲಸ ಮಾಡುತ್ತಿದ್ದ ರಾಜಸ್ಥಾನ ಮೂಲದವಲಸೆ ಕಾರ್ಮಿಕರು, ತಮ್ಮ ತಮ್ಮ ಮನೆಗಳಿಗೆ ತೆರಳಲು ಅನ್ಯ ಮಾರ್ಗವಿಲ್ಲದೇ ಅಗತ್ಯ ವಸ್ತುಗಳನ್ನು ಹೊತ್ತೊಯ್ಯುತ್ತಿದ್ದ ಟ್ರಕ್‌ನಲ್ಲೇ ಪ್ರಯಾಣ ಬೆಳೆಸಿದ್ದರು. ತೆಲಂಗಾಣದಿಂದ ರಾಜಸ್ಥಾನಕ್ಕೆ ತರಳುತ್ತಿದ್ದ ಈ ಎರಡು ಟ್ರಕ್‌ಗಳನ್ನು ತಡೆದ ಮುಂಬೈ ಪೊಲೀಸರು, ವಿಚಾರಣೆ ವೇಳೆ ಅನುಮಾನಗೊಂಡು ಕಂಟೇನರ್ ಬಾಗಿಲು ತೆರೆದಾಗ ಒಳಗಡೆ 300 ಕ್ಕೂ ಅಧಿಕ ವಲಸೆ ಕಾರ್ಮಿಕರು ಇರುವುದನ್ನು ಕಂಡು ದಂಗಾಗಿದ್ದಾರೆ. 

ಪ್ರಸ್ತುತ ಟ್ರಕ್ ನ ಚಾಲಕ ಮತ್ತು ಮಾಲೀಕರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಟ್ರಕ್ ಅನ್ನು ವಶಕ್ಕೆ ಪಡೆದಿದ್ದಾರೆ. ಕೊರೋನಾ ವೈರಸ್ ಹಿನ್ನಲೆಯಲ್ಲಿ ಲಾಕ್ ಡೌನ್ ಹೇರಲಾಗಿದ್ದು, ಜನ ಸಮೂಹ ಸೇರಿದಂತೆ ಸರ್ಕಾರ ಆದೇಶ ನೀಡಿದೆ. ಆದರೆ ಟ್ರಕ್ ನಲ್ಲಿ ಕುರಿಗಳನ್ನು ತುಂಬಿದಂತೆ ಕಾರ್ಮಿಕರನ್ನು ತುಂಬಿ ಸಾಗಿಸುತ್ತಿರುವ ವಿಚಾರ ಸುರಕ್ಷತೆ ಮೇಲೆ ಗಂಭೀರ ಪ್ರಶ್ನೆ ಎತ್ತಿದೆ.

Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp