ಅಪಾಯಕಾರಿ ಮಟ್ಟದಲ್ಲಿ ಅಂಫಾನ್ ಚಂಡಮಾರುತ: ಬಂಗಾಳ, ಒಡಿಶಾದಲ್ಲಿ ತೀವ್ರ ಕಟ್ಟೆಚ್ಚರ

ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಅಂಫಾನ್ ಚಂಡಮಾರುತ ಅಪಾಯಕಾರಿ ಮಟ್ಟ ತಲುಪಿದ್ದು, ಸಂಜೆ ವೇಳೆಗೆ ತನ್ನ ವೇಗವನ್ನು ಹೆಚ್ಚಿಸಿಕೊಂಡು ಸೂಪರ್ ಸೈಕ್ಲೋನ್ ಆಗಿ ಮಾರ್ಪಾಡಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಅಂಫಾನ್ ಚಂಡಮಾರುತ
ಅಂಫಾನ್ ಚಂಡಮಾರುತ

ನವದೆಹಲಿ: ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಅಂಫಾನ್ ಚಂಡಮಾರುತ ಅಪಾಯಕಾರಿ ಮಟ್ಟ ತಲುಪಿದ್ದು, ಸಂಜೆ ವೇಳೆಗೆ ತನ್ನ ವೇಗವನ್ನು ಹೆಚ್ಚಿಸಿಕೊಂಡು ಸೂಪರ್ ಸೈಕ್ಲೋನ್ ಆಗಿ ಮಾರ್ಪಾಡಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಬಂಗಾಳ ಕೊಲ್ಲಿಯಲ್ಲಿ ಉದ್ಭವಿಸಿರುವ ಅಂಫಾನ್ ಚಂಡಮಾರುತ ತೀವ್ರ ಗತಿ ಪಡೆದುಕೊಂಡಿದ್ದು, ಕಳೆದ ಕೆಲ ಗಂಟೆಗಳಲ್ಲಿ ಈಶಾನ್ಯ ದಿಕ್ಕಿನತ್ತ 13 ಕಿಮೀ ವೇಗದಲ್ಲಿ ದಾಂಗುಡಿ ಇಡುತ್ತಿದೆ. ಇಂದು ಸಂಜೆ ಹೊತ್ತಿಗೆ ಚಂಡಮಾರುತ ತನ್ನ ವೇಗವನ್ನು ಹೆಚ್ಚಿಸಿಕೊಂಡು ಸೂಪರ್ ಸೈಕ್ಲೋನ್ ಆಗಿ  ಮಾರ್ಪಡಲಿದ್ದು, ಚಂಡಮಾರುತ ಬುಧವಾರದೊಳಗೆ ಇನ್ನಷ್ಟು ವೇಗ ಮತ್ತು ಅಬ್ಬರ ಪಡೆದುಕೊಂಡು ಪಶ್ಚಿಮ ಬಂಗಾಳ ಹಾಗೂ ಬಾಂಗ್ಲಾದೇಶದ ಕರಾವಳಿ ಪ್ರದೇಶಗಳ ಮೇಲೆ ಅಪ್ಪಳಿಸುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ.

ಬಂಗಾಳ, ಒಡಿಶಾದಲ್ಲಿ ತೀವ್ರ ಕಟ್ಟೆಚ್ಚರ
ಬುಧವಾರದ ಹೊತ್ತಿಗೆ ಚಂಡಮಾರುತ ತೀವ್ರ ಮಟ್ಟದಲ್ಲಿ ಅಪ್ಪಳಿಸುವ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳ ಮತ್ತು ಒಡಿಶಾದಲ್ಲಿ ಅಲರ್ಟ್ ಘೋಷಣೆ ಮಾಡಲಾಗಿದೆ. ಕಳೆದ ವರ್ಷ ಫನಿ ಚಂಡಮಾರುತದಿಂದ ತತ್ತರಿಸಿಹೋಗಿದ್ದ ಒಡಿಶಾದಲ್ಲಿ ಇದೀಗ ಅಂಫಾನ್ ಚಂಡಮಾರುತದಿಂದಾಗಿ ಮತ್ತೆ  ಬಿಗಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಎನ್​ಡಿಆರ್​ಎಫ್​ನ 17 ತಂಡಗಳು ಮೊಕ್ಕಾಂ ಹೂಡಿದ್ದು ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಪಶ್ಚಿಮ ಬಂಗಾಳ ಮತ್ತು ಒಡಿಶಾ ಮಾತ್ರವಲ್ಲದೇ ನೆರೆ ಬಾಂಗ್ಲಾದೇಶಕ್ಕೂ ಚಂಡಮಾರುತದ ಅಪಾಯಗಳಿದ್ದು, ಅಲ್ಲಿಯೂ ಭಾರಿ  ಬಿರುಗಾಳಿ ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. 

180 ಕಿಲೋಮೀಟರ್ ವೇಗದಲ್ಲಿ ಚಂಡಮಾರುತ: ಭಾರೀ ಬಿರುಗಾಳಿ ಮಳೆ ಸಾಧ್ಯತೆ
ಅಂಫಾನ್ ಚಂಡಮಾರುತ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಮೇ 20, 21 ರಂದು ಪಶ್ಚಿಮ ಬಂಗಾಳ ಮತ್ತು ಒಡಿಶಾ ಕರಾವಳಿ ಪ್ರದೇಶದಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಈ ಬಗ್ಗೆ ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದ ಬೆನ್ನಲ್ಲೇ ರಾಷ್ಟ್ರೀಯ ವಿಪತ್ತು ನಿರ್ವಹಣಾ  ದಳ 17 ತಂಡಗಳನ್ನು ರಕ್ಷಣಾ ಕಾರ್ಯಾಚರಣೆಗಾಗಿ ಪಶ್ಚಿಮಬಂಗಾಳ ಮತ್ತು ಒಡಿಶಾ ರಾಜ್ಯಗಳಿಗೆ ಕಳುಹಿಸಿದೆ. ಮೇ 20 ರಂದು ಪಶ್ಚಿಮ ಬಂಗಾಳ ಮತ್ತು ಒಡಿಶಾ ಕರಾವಳಿಗೆ ಅಂಫಾನ್ ಚಂಡಮಾರುತ ಅಪ್ಪಳಿಸಲಿದೆ. ಗಂಟೆಗೆ 180 ಕಿಲೋಮೀಟರ್ ವೇಗದ ಗಾಳಿ ಬೀಸುವ ಸಾಧ್ಯತೆ ಇದೆ.  ಎರಡೂ ರಾಜ್ಯಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದ್ದು, ಮೇ 21 ರವರೆಗೆ ಮಳೆ ಮುಂದುವರಿಯಲಿದೆ. ಮೇ 18 ರಂದು ಅಂದರೆ ಇಂದಿನಿಂದಲೇ ಚಂಡಮಾರುತದ ಪ್ರಭಾವದಿಂದ ಭಾರೀ ಮಳೆಯಾಗಲಿದೆ ಎನ್ನಲಾಗಿದ್ದು, ಗೃಹ ಇಲಾಖೆ ಕೂಡ ಎಚ್ಚರಿಕೆ ವಹಿಸುವಂತೆ ಸೂಚನೆ ನೀಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com