ಕೇಂದ್ರದಿಂದ ವಿಮಾನ,ರೈಲು,ಅಂತರ ರಾಜ್ಯ ಸಂಚಾರಕ್ಕೆ ಹೊಸ ಮಾರ್ಗಸೂಚಿ 

ನಾಳೆಯಿಂದ ದೇಶೀಯ ವಿಮಾನ ಹಾರಾಟ ಆರಂಭವಾಗಲಿದ್ದು, ವಿಮಾನ, ರೈಲು ಮತ್ತು  ಅಂತರರಾಜ್ಯ ಬಸ್ ಪ್ರಯಾಣಕ್ಕೆ ಆರೋಗ್ಯ ಸಚಿವಾಲಯ ಮಾರ್ಗಸೂಚಿಗಳನ್ನು ಹೊರಡಿಸಿದೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ನಾಳೆಯಿಂದ ದೇಶೀಯ ವಿಮಾನ ಹಾರಾಟ ಆರಂಭವಾಗಲಿದ್ದು, ವಿಮಾನ, ರೈಲು ಮತ್ತು  ಅಂತರರಾಜ್ಯ ಬಸ್ ಪ್ರಯಾಣಕ್ಕೆ ಆರೋಗ್ಯ ಸಚಿವಾಲಯ ಮಾರ್ಗಸೂಚಿಗಳನ್ನು ಹೊರಡಿಸಿದೆ. 

ವಿಮಾನ ಪ್ರಯಾಣಕ್ಕೆ ಪ್ರಯಾಣಿಕರು ವಿಮಾನ ನಿಲ್ದಾಣವನ್ನು ಎರಡು ತಾಸು ಮುಂಚೆ ತಲುಪಿ, ತಾಪಾಸಣೆಗೆ ಒಳಪಡಬೇಕು. ಮುಖಗವಸು ಕಡ್ಡಾಯವಾಗಿ ಧರಿಸಬೇಕು. ಕೈಚೀಲಗಳಲ್ಲಿ ಕಡಿಮೆ ತೂಕದ ಲಗ್ಗೇಜ್ ಕೊಂಡೊಯ್ಯಬೇಕು. ಆರೋಗ್ಯ ಸೇತು ಆಪ್ ಅನ್ನು ಡೌನ್ ಲೋಡ್ ಮಾಡಿಕೊಂಡು ಬಳಸಬೇಕು ಎಂದು ಸಚಿವಾಲಯ ಸೂಚಿಸಿದೆ. 

ಪ್ರಯಾಣಿಕರನ್ನು ತಪಾಸಣೆಗೊಳಪಡಿಸಿ ಸೋಂಕು ಲಕ್ಷಣ ಇಲ್ಲದ ಪ್ರಯಾಣಿಕರನ್ನು ಮಾತ್ರ ಪ್ರಯಾಣಕ್ಕೆ ಅನುಮತಿಸಬೇಕು. ಸೋಂಕು ಲಕ್ಷಣ ಇರುವವರನ್ನು ಆರೋಗ್ಯ  ಕೇಂದ್ರಗಳಿಗೆ, ಸೋಂಕು ತೀವ್ರತೆ ಹೆಚ್ಚಿರುವವವರನ್ನು ಕೋವಿಡ್ 
19 ಆಸ್ಪತ್ರೆಗಳಿಗೆ ದಾಖಲಿಸಬೇಕು ವಿಮಾನ ನಿಲ್ದಾಣದಿಂದ ಹೊರಬರುವಾಗಲೂ ಥರ್ಮಲ್ ಸ್ಕ್ರೀನಿಂಗ್ ಮಾಡಬೇಕು ಎಂದು ರಾಜ್ಯ ಸರ್ಕಾರಗಳಿಗೆ ಸಚಿವಾಲಯ ಸೂಚಿಸಿದೆ.

ಈ ಮಧ್ಯೆ, ಮಹಾರಾಷ್ಟ್ರ ಮತ್ತು ತಮಿಳುನಾಡು ಸರ್ಕಾರಗಳು ವಿಮಾನ ಹಾರಾಟಕ್ಕೆ ಅನುಮತಿ ನೀಡಿಲ್ಲ. 
ಅಂತರರಾಜ್ಯ ಬಸ್ ಪ್ರಯಾಣ ಮತ್ತು ರೈಲು ಪ್ರಯಾಣಕ್ಕೂ ಇದೇ ಮಾರ್ಗಸೂಚಿಗಳು ಅನ್ವಯಿಸುತ್ತವೆ ಎಂದು ಸಚಿವಾಲಯ ಹೇಳಿದೆ.

ವಿದೇಶಗಳಿಂದ ಆಗಮಿಸುವ ಪ್ರಯಾಣಿಕರಿಗೂ ಸಚಿವಾಲಯ ಮಾರ್ಗಸೂಚಿಗಳನ್ನು ಹೊರಡಿಸಿದೆ. ವಿದೇಶಗಳಿಂದ ಆಗಮಿಸುವವರು 14 ದಿನಗಳ ಕಡ್ಡಾಯ  ಕ್ವಾರಂಟೈನ್ ಗೆ ಒಳಪಡಬೇಕು. ಇದರಲ್ಲಿ ಏಳು ದಿನಗಳ ಸಾಂಸ್ಥಿಕ ಕ್ವಾರಂಟೈನ್ ,  ಏಳುದಿನಗಳ ಗೃಹ ಕ್ವಾರಂಟೈನ್  ಸೇರಿದ್ದು, ಕ್ವಾರಂಟೈನ್ ನ ವೆಚ್ಚವನ್ನು ಪ್ರಯಾಣಿಕರೇ ಭರಿಸಬೇಕಾಗುತ್ತದೆ. 

ಸೋಂಕು ಲಕ್ಷಣ ಕಂಡುಬಂದರೆ ಅಂತವರನ್ನು ವಿಮಾನ ನಿಲ್ದಾಣಗಳಿಂದ ತಕ್ಷಣವೇ ಆಸ್ಪತ್ರೆಗಳಿಗೆ ದಾಖಲಿಸಲಾಗುತ್ತದೆ. ವಿಮಾನಗಳ ಮೂಲಕ ದೇಶಕ್ಕೆ ವಾಪಸ್ಸಾಗುವವರು ವ್ಯಕ್ತಿಗತ ಅಂತರ, ಮುಖಗವಸು ಧರಿಸುವುದು ಸೇರಿದಂತೆ ಎಲ್ಲ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಪ್ರಯಾಣಿಕರು ಆರೋಗ್ಯ ಸೇತು ಆಪ್  ಮೂಲಕ ಅರ್ಜಿ ಪಡೆದು ಆರೋಗ್ಯದ ಬಗ್ಗೆ ಸ್ವಯಂ ಧೃಡೀಕರಣ ಘೋಷಿಸಬೇಕು ಎಂದು ಸಚಿವಾಲಯ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com