ಎಲ್ಒಸಿಯಲ್ಲಿ ಪರಿಸ್ಥಿತಿ ಉದ್ವಿಗ್ನ: ಪಾಕ್ ಗುಂಡಿನ ದಾಳಿಗೆ 5 ಭಾರತೀಯ ಯೋಧರು ಹುತಾತ್ಮ, ಮೂವರು ನಾಗರೀಕರ ಸಾವು

ದೀಪಾವಳಿ ಹಬ್ಬಕ್ಕೂ ಮುನ್ನಾ ದಿನವೇ ಗಡಿಯಲ್ಲಿ ಪಾಕಿಸ್ತಾನ ಸೇನೆ ರಕ್ತದೋಕುಳಿ ಹರಿಸಿದೆ. ಜಮ್ಮು ಮತ್ತು ಕಾಶ್ಮೀರದ ಗುರೇಜ್'ನಿಂದ ಉರಿ ವಲಯದವರೆಗೆ ಗಡಿಯಲ್ಲಿ ಪಾಕಿಸ್ತಾನ ಸೇನಾಪಡೆಯು ಕದನ ವಿರಾಮ ಉಲ್ಲಂಘಿಸಿದ್ದು, ಪಾಕಿಸ್ತಾನ ಸೇನೆ ನಡೆಸಿದ ಭಾರೀ ಗುಂಡಿನ ದಾಳಿಯಲ್ಲಿ ಐವರು ಯೋಧರು ಸೇರಿದಂತೆ 8 ಮಂದಿ ಬಲಿಯಾಗಿದ್ದಾರೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಶ್ರೀನಗರ: ದೀಪಾವಳಿ ಹಬ್ಬಕ್ಕೂ ಮುನ್ನಾ ದಿನವೇ ಗಡಿಯಲ್ಲಿ ಪಾಕಿಸ್ತಾನ ಸೇನೆ ರಕ್ತದೋಕುಳಿ ಹರಿಸಿದೆ. ಜಮ್ಮು ಮತ್ತು ಕಾಶ್ಮೀರದ ಗುರೇಜ್'ನಿಂದ ಉರಿ ವಲಯದವರೆಗೆ ಗಡಿಯಲ್ಲಿ ಪಾಕಿಸ್ತಾನ ಸೇನಾಪಡೆಯು ಕದನ ವಿರಾಮ ಉಲ್ಲಂಘಿಸಿದ್ದು, ಪಾಕಿಸ್ತಾನ ಸೇನೆ ನಡೆಸಿದ ಭಾರೀ ಗುಂಡಿನ ದಾಳಿಯಲ್ಲಿ ಐವರು ಯೋಧರು ಸೇರಿದಂತೆ 8 ಮಂದಿ ಬಲಿಯಾಗಿದ್ದಾರೆ. 

ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣ ರೇಖೆಯ ಗುರೇಜ್ ವಲಯದಿಂದ ಉರಿ ವಲಯದವರೆಗೂ ಪಾಕಿಸ್ತಾನ ಪಡೆಗಳು ಹವಾರು ಬಾರಿ ಕದನ ವಿರಾಮ ಉಲ್ಲಂಘಿಸಿದ್ದು, ಮಾರ್ಟರ್ ಶೆಲ್'ಗಳು ಹಾಗೂ ಗುಂಡಿನ ದಾಳಿ ನಡೆಸಿವೆ. 

ಉರಿ ವಲಯದ ನಂಬಾ ಎಂಬಲ್ಲಿ ನಿನ್ನೆ ಇಬ್ಬರು ಯೋಧರು ಹುತಾತ್ಮರಾಗಿದ್ದರು. ಬಳಿಕ ಗುರೇಜ್ ಸೆಕ್ಟರ್ ನಲ್ಲಿ ಇಬ್ಬರು ಯೋಧರು ನಿನ್ನೆ ಹುತಾತ್ಮರಾಗಿದ್ದರು. ಘಟನೆಯಲ್ಲಿ ಕೆಲ ಯೋಧರಿಗೂ ಗಂಭೀರವಾಗಿ ಗಾಯಗಳಾಗಿದ್ದು, ಗಾಯಗೊಂಡಿದ್ದ ಯೋಧರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಇದರಲ್ಲಿ ಇದೀಗ ಓರ್ವ ಯೋಧ ಚಿಕಿತ್ಸೆ ಫಲಕಾರಿಯಾಗದೆ ಹುತಾತ್ಮರಾಗಿದ್ದಾರೆಂದು ತಿಳಿದುಬಂದಿದೆ.

ಇನ್ನು ಕುಪ್ವಾರಾ ಜಿಲ್ಲೆಯ ಕೇರನ್ ವಲಯದಲ್ಲಿ ಉಗ್ರರು, ಪಾಕಿಸ್ತಾನದ ಭದ್ರತಾ ಪಡೆ ನಡೆಸಿದ ಕದನ ವಿರಾಮ ಉಲ್ಲಂಘಟನೆ ನೆರವು ಪಡೆದು ಒಳನುಸುಳಲು ಯತ್ನಿಸಿದ್ದರು. ಇದನ್ನು ಸೇನೆ ವಿಫಲಗೊಳಿಸಿದೆ. 

ದಾವರ್, ಕೆರನ್, ಉರಿ ಮತ್ತು ನೌಗಾಮ್ ಸೇರಿದಂತೆ ಹಲವು ಗಡಿ ಪ್ರದೇಶಗಳಲ್ಲಿ ಪಾಕಿಸ್ತಾನ ಸೇನೆ ಕದನ ಉಲ್ಲಂಘನೆ ಮಾಡಿದೆ. ಮಾರ್ಟಾರ್ ಶೆಲ್ ಮತ್ತು ಇತರ ಶಸ್ತ್ರಾಸ್ತ್ರಗಳನ್ನು ಬಳಸಿ ಪಾಕಿಸ್ತಾನ ಸೇನೆ ದಾಳಿ ನಡೆಸಿದೆ. ಉದ್ದೇಶಪೂರ್ವಕವಾಗಿ ಪಾಕಿಸ್ತಾನ ಪಡೆಗಳು ನಾಗರೀಕ ಪ್ರದೇಶಗಳನ್ನು ಗುರಿಯಾಗಿರಿಸಿಕೊಂಡು ದಾಳಿ ನಡೆಸಿದ್ದು, ದಾಳಿಯಲ್ಲಿ ಮೂವರು ನಾಗರೀಕರು ಸಾವನ್ನಪ್ಪಿದ್ದಾರೆಂದು ಸೇನಾಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಗಡಿಯಲ್ಲಿದ್ದ ಎಲ್ಲಾ ಬಿಎಸ್ಎಫ್ ಘಟಕಗಳ ಮೇಲೂ ಪಾಕಿಸ್ತಾನ ಪಡೆಗಳು ದಾಳಿ ನಡೆಸಿವೆ. ದಾಳಿಯಲ್ಲಿ ಸಬ್ ಇನ್ಸ್ ಪೆಕ್ಟರ್ ರಾಕೇಶ್ ದೋವಲ್ (39) ಹುತಾತ್ಮರಾಗಿದ್ದಾರೆ. ಬಾರಾಮುಲ್ಲಾದಲ್ಲಿ ಕರ್ತವ್ಯನಿರ್ವಹಿಸುತ್ತಿರುವ ಸಂದರ್ಭದಲ್ಲಿ ನಿನ್ನೆ ಮಧ್ಯಾಹ್ನ ಪಾಕಿಸ್ತಾನದ ಉದ್ದಟತನಕ್ಕೆ ರಾಕೇಶ್ ಅವರು ಬಲಿಯಾಗಿದ್ದಾರೆ. ಇಲ್ಲದದೆ ಬಿಎಸ್ಎಫ್ ಯೋಧ ವಾಸು ರಾಜ ಸೇರಿದಂತೆ ಮೂವರು ಯೋಧರೂ ಕೂಡ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಕಮಲ್ಕೋಟ್ ಸೆಕ್ಟರ್ ನಲ್ಲಿ ಇಬ್ಬರು ನಾಗರೀಕರು, ಬಾರಾಮುಲ್ಲಾ ಜಿಲ್ಲೆಯ ಉರಿಯಲ್ಲಿ ಓರ್ವ ಮಹಿಳೆ ಸಾವನ್ನಪ್ಪಿದ್ದಾರೆಂದು ಅಧಿಕಾರಿಗಳು ತಿಳಿಸಿದ್ದಾರೆ. 

ಗಡಿಯಲ್ಲಿ ಪಾಕಿಸ್ತಾನ ಸೇನೆಯು ಪ್ರಸಕ್ತ ಸಾಲಿನಲ್ಲಿ ಕಳೆದ ಬಾರಿಗಿಂತ ಹೆಚ್ಚು ಬಾರಿ ಕದನ ವಿರಾಮ ಉಲ್ಲಂಘನೆ ಮಾಡಿದೆ. ಈ ವರ್ಷ ಇಲ್ಲಿಯವರೆಗೆ 4052 ಬಾರಿ ಅಪ್ರಚೋದಿತ ದಾಳಿ ನಡೆಸಿದೆ. ಈ ಪೈಕಿ ನವೆಂಬರ್ ತಿಂಗಳಿನಲ್ಲಿಯೇ 128 ದಾಳಿಗಳಾಗಿವೆ. ದಾಳಿಯಲ್ಲಿ ಯೋಧರೂ ಕೂಡ ಹುತಾತ್ಮರಾಗಿದ್ದಾರೆ. ಕಳೆದ ವರ್ಷ 3233 ಬಾರಿ ಕದನ ವಿರಾಮ ಉಲ್ಲಂಘನೆ ಮಾಡಿತ್ತು ಎಂದು ಭಾರತೀಯ ಸೇನಾ ಮೂಲಗಳು ಮಾಹಿತಿ ನೀಡಿವೆ. 

ಈ ನಡುವೆ ಪಾಕಿಸ್ತಾನದ ದಾಳಿಗೆ ಭಾರತೀಯ ಸೇನಾಪಡೆಗಳು ಕೂಡ ದಿಟ್ಟ ಉತ್ತರ ನೀಡಿದ್ದು, ಮೂಲಗಳ ಪ್ರಕಾರ ಭಾರತದ ಪ್ರತಿದಾಳಿಯಲ್ಲಿ ಕನಿಷ್ಟ 8 ಮಂದಿ ಪಾಕಿಸ್ತಾನದ ಯೋಧರು ಹತರಾಗಿದ್ದಾರೆಂದು ತಿಳಿದುಬಂದಿದೆ. ಇವರಲ್ಲಿ 2 ಅಥವಾ 3 ಪಾಕಿಸ್ತಾನಿ ಎಸ್'ಪಿಜಿ ಪಡೆಯ ಕಮಾಂಡೋಗಳೂ ಇದ್ದಾರೆಂದು ಹೇಳಲಾಗುತ್ತಿದೆ. 

ಈ ನಡುವೆ ಭಾರತ ನಡೆಸಿದ ಶೆಲ್ ದಾಳಿಯಲ್ಲಿ ಪಾಕಿಸ್ತಾನದ ಕೆಲ ನಾಗರೀಕ ಪ್ರದೇಶಗಳೂ ಕೂಡ ಹಾನಿಗೊಳಗಾಗಿದ್ದು, ನಾಲ್ವರು ನಾಗರೀಕರೂ ಸಾವನ್ನಪ್ಪಿದ್ದಾರೆಂದು ಪಾಕ್ ಮಾಧ್ಯಮಗಳು ವರದಿ ಮಾಡಿವೆ. 

ಪಾಕಿಸ್ತಾನ ಮಾಧ್ಯಮಗಳಲ್ಲಿ ಹೊತ್ತಿ ಉರಿಯುತ್ತಿರುವ ಮನೆಗಳ ದೃಶ್ಯಗಳು ಪ್ರಸಾರಗೊಂಡಿವೆ. ನವೆಂಬರ್ 7-8 ರಂದೂ ಕೂಡ ಇಂತಹದ್ದೇ ಒಳನುಸುಳುವಿಕೆ ಯತ್ನ ನಡೆದಿತ್ತು. ಆಗ 3 ಉಗ್ರರು ಸಾವನ್ನಪ್ಪಿ, ಭಾರತದ ಮೂವರು ಯೋಧರು ಹುತಾತ್ಮರಾಗಿದ್ದರು. ಉಗ್ರರ ಒಳನುಸುಳುವಿಕೆ ಯತ್ನವನ್ನು ಯೋಧರು ವಿಫಲಗೊಳಿಸಲುವಲ್ಲಿ ಯಶಸ್ವಿಯಾಗಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com