ಉತ್ತರ ಪ್ರದೇಶದ 'ಸಂತ'ನ ಸರ್ಕಾರದಲ್ಲಿ ಸಾಧು ಸನ್ಯಾಸಿಗಳೂ ಸುರಕ್ಷಿತವಾಗಿಲ್ಲ: ಮಾಯಾವತಿ ಟೀಕೆ

ಗೊಂಡಾದಲ್ಲಿ ಆರ್ಚಕರೊಬ್ಬರ ಮೇಲೆ ನಡೆದ ಗುಂಡಿನ ದಾಳಿಗೆ ಸಂಬಂಧಿಸಿದಂತೆ ಯೋಗಿ ಅದಿತ್ಯ ನಾಥ್ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿರುವ ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತಿ, ಸನ್ಯಾಸಿ ಯೋಗಿ ಅದಿತ್ಯನಾಥ್ ಸರ್ಕಾರದಲ್ಲಿ ಸಾಧು ಸಂತರೂ ಸುರಕ್ಷಿತವಲ್ಲ ಎಂದು  ಹೇಳಿದ್ದಾರೆ.
ಮಾಯಾವತಿ
ಮಾಯಾವತಿ

ಲಕ್ನೋ: ಗೊಂಡಾದಲ್ಲಿ ಆರ್ಚಕರೊಬ್ಬರ ಮೇಲೆ ನಡೆದ ಗುಂಡಿನ ದಾಳಿಗೆ ಸಂಬಂಧಿಸಿದಂತೆ ಯೋಗಿ ಅದಿತ್ಯ ನಾಥ್ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿರುವ ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತಿ, ಸನ್ಯಾಸಿ ಯೋಗಿ ಅದಿತ್ಯನಾಥ್ ಸರ್ಕಾರದಲ್ಲಿ ಸಾಧು ಸಂತರೂ ಸುರಕ್ಷಿತವಲ್ಲ ಎಂದು  ಹೇಳಿದ್ದಾರೆ.

ಗೊಂಡಾದಲ್ಲಿ ಭೂ ವಿವಾದಕ್ಕೆ ಸಂಬಂಧಿಸಿದಂತೆ ಅರ್ಚಕರೊಬ್ಬರ ಮೇಲೆ ಕೆಲ ದುಷ್ಕರ್ಮಿಗಳ ನಡೆಸಿರುವ ಗುಂಡಿನ ದಾಳಿ ಘಟನೆಯನ್ನು ಖಂಡಿಸಿರುವ ಮಾಯಾವತಿ ಸಾಧು, ಸಂತರು ಹಾಗೂ ಮಠಾಧೀಶರಿಗೆ ಭದ್ರತೆ ಖಾತರಿಪಡಿಸುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ. ದೇಗುಲದ ಭೂಮಿಯನ್ನು  ಕಬಳಿಸುವ ಉದ್ದೇಶದಿಂದ ಭೂಮಾಫಿಯಾ ಉತ್ತರ ಪ್ರದೇಶದ ಗೊಂಡಾದ ದೇಗುಲ ಆರ್ಚಕರೊಬ್ಬರನ್ನು ಕೊಲೆ ಮಾಡಲು ನಡೆಸಿರುವ ಪ್ರಯತ್ನ ರಾಜಸ್ಥಾನದಲ್ಲಿ ನಡೆದ ಘಟನೆಯನ್ನು ಹೋಲುತ್ತಿದೆ. ಸನ್ಯಾಸಿಯ ಸರ್ಕಾರದಲ್ಲಿ ಸಾಧು ಸಂತರೂ ಸುರಕ್ಷಿತವಾಗಿಲ್ಲ ಎಂಬುದು ಅತ್ಯಂತ ನಾಚಿಗೇಡು, ರಾಜ್ಯದಲ್ಲಿ  ಕಾನೂನು ಮತ್ತು ಸುವ್ಯವಸ್ಥೆ ಕುಸಿದಿದೆಯೇ ಎಂದು ಮಾಯಾವತಿ ಟ್ವೀಟ್ ನಲ್ಲಿ ಪ್ರಶ್ನಿಸಿದ್ದಾರೆ.

ಪ್ರಕರಣ ಸಂಬಂಧ ತಪ್ಪಿತಸ್ಥರ ವಿರುದ್ದ ಎಲ್ಲ ರೀತಿಯಲ್ಲೂ ಸರ್ಕಾರ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಭೂ ಮಾಫಿಯಾಗಳಿಗೆ ಸಂಬಂಧಿಸಿದ ಎಲ್ಲ ಆಸ್ತಿಗಳನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳಬೇಕು. ಸಾಧುಗಳು ಸಂತರು ಹಾಗೂ ಮಠಾಧೀಶರಿಗೆ ಕಲ್ಪಿಸಿರುವ ಭದ್ರತೆಯನ್ನು ಹೆಚ್ಚಿಸಬೇಕು ಎಂದು ಅವರು  ಒತ್ತಾಯಿಸಿದ್ದಾರೆ. ಭೂ ಮಾಫಿಯಾದ ಗುಂಡಿನ ದಾಳಿಗೆ ಒಳಗಾಗಿರುವ ಎಥಿಯಾಟಿಕ್ ಕೊತ್ವಾಲಿ ಪ್ರದೇಶದ ರಾಮಜಾನಕಿ ದೇಗುಲದ ಆರ್ಚಕ ಸಮರ್ಥ ದಾಸ್ ಅವರಿಗೆ ಲಕ್ನೋದ ಟ್ರಾಮಾ ಕೇಂದ್ರದಲ್ಲಿ ಚಿಕಿತ್ಸೆ ಕಲ್ಪಿಸಲಾಗುತ್ತಿದೆ.

ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಇಬ್ಬರನ್ನು ಬಂಧಿಸಿದ್ದು, ಗುಂಡಿನ ದಾಳಿಯಲ್ಲಿ ಭಾಗಿಯಾಗಿದ್ದ ಮತ್ತಿಬ್ಬರಿಗಾಗಿ ಶೋಧನೆ ನಡೆಸುತ್ತಿದ್ದಾರೆ, ಆರ್ಚಕ ಸಮರ್ಥ ದಾಸ್ ಪ್ರಾಣಾಪಾಯದಿಂದ ಪಾರಾಗಿದ್ದು, ಲಕ್ನೋದಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಎಲ್ಲ ಆರೋಪಿಗಳನ್ನು ಶೀಘ್ರದಲ್ಲಿಯೇ ಬಂಧಿಸಲಾಗುವುದು.  ಭೂಮಿಗೆ ಸಂಬಂಧಿಸಿದ ವಿವಾದ ಘಟನೆಗೆ ಕಾರಣ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶೈಲೇಷ್ ಕುಮಾರ್ ಪಾಂಡೆ ಹೇಳಿದ್ದಾರೆ. ದುಷ್ಕರ್ಮಿಗಳು ಸಮರ್ಥದಾಸ್ ಅವರ ಮೇಲೆ ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದು, ಇದೇ ದೇಗುಲದ ಇನ್ನೊಬ್ಬ ಆರ್ಚಕನ ಮೇಲೆ ದುಷ್ಕರ್ಮಿಗಳು ಕಳೆದ ವರ್ಷ ದಾಳಿ  ನಡೆಸಿದ್ದರು. ಈ ಸಂಬಂಧ ಪೊಲೀಸ್ ತನಿಖೆ ಈಗಲೂ ಮುಂದುವರಿದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com