ಪ್ರವಾಹಕ್ಕೆ ನಲುಗಿದ ಮುತ್ತಿನ ನಗರಿ, ಅತಂತ್ರ ಸ್ಥಿತಿಯಲ್ಲಿ ಕೋವಿಡ್ ಸೋಂಕಿತರು, ಚಿಕಿತ್ಸೆ ಸಿಗದೆ ಪರದಾಟ!

ತೆಲಂಗಾಣ ಮತ್ತು ಆಂಧ್ರ ಪ್ರದೇಶದಲ್ಲಿ ಸುರಿಯುತ್ತಿರುವ ಭಾರಿ ಮತ್ತು ಪ್ರವಾಹ ಪರಿಸ್ಥಿತಿ ಮುಂದುವರೆದಿದ್ದು, ಪ್ರವಾಹದಿಂದಾಗಿ ಕೊರೋನಾ ವೈರಸ್ ಸೋಂಕಿನಿಂದ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರು ಪರದಾಡುವಂತಾಗಿದೆ.

Published: 15th October 2020 12:25 AM  |   Last Updated: 15th October 2020 12:25 AM   |  A+A-


Hyderabad reels under flood fury

ಹೈದರಾಬಾದ್ ಮಳೆ

Posted By : Srinivasamurthy VN
Source : The New Indian Express

ಹೈದರಾಬಾದ್: ತೆಲಂಗಾಣ ಮತ್ತು ಆಂಧ್ರ ಪ್ರದೇಶದಲ್ಲಿ ಸುರಿಯುತ್ತಿರುವ ಭಾರಿ ಮತ್ತು ಪ್ರವಾಹ ಪರಿಸ್ಥಿತಿ ಮುಂದುವರೆದಿದ್ದು, ಪ್ರವಾಹದಿಂದಾಗಿ ಕೊರೋನಾ ವೈರಸ್ ಸೋಂಕಿನಿಂದ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರು ಪರದಾಡುವಂತಾಗಿದೆ.

ಹೈದರಾಬಾದ್ ನಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಸಾಮಾನ್ಯ ಜನರಿಗೆ ಅಷ್ಟೇ ಅಲ್ಲದೇ ಕೊರೋನಾ ಸೋಂಕಿತರೂ ಕೂಡ ಭಾರಿ ಸಂಕಷ್ಟಕ್ಕೀಡಾಗಿದ್ದಾರೆ. ಒಂದೆಡೆ ವೈರಸ್ ಸೋಂಕು ಜನರ ಜೀವವನ್ನು ಹಿಂಡುತ್ತಿದ್ದರೆ ಮತ್ತೊಂದೆಡೆ ಪ್ರವಾಹ ಜನರ ಜೀವನವನ್ನು ಅಸ್ತವ್ಯಸ್ಥ ಮಾಡುತ್ತಿದೆ. ಪ್ರವಾಹದಿಂದಾಗಿ  ಕೊರೋನಾ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರು ಚಿಕಿತ್ಸೆಗಾಗಿ ಪರದಾಡುತ್ತಿದ್ದಾರೆ. ಹೈದರಾಬಾದ್ ನಲ್ಲಿ ಇಂತಹ 22 ಘಟನೆಗಳು ವರದಿಯಾಗಿದ್ದು, ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರು ಪ್ರವಾಹದಿಂದಾಗಿ ಚಿಕಿತ್ಸೆ ಪಡೆಯಲಾಗದೇ ಜೀವ ಭಯದಿಂದ ಪರದಾಡುತ್ತಿದ್ದಾರೆ. ಮನೆಗಳು  ಪ್ರವಾಹದಲ್ಲಿ ಮುಳುಗಿದ್ದು, ಕ್ವಾರಂಟೈನ್ ಗೆ ಒಳಗಾಗಿರುವ ಸೋಂಕಿತರಿಗೆ ನೆರವು ನೀಡಲು ವೈದ್ಯಕೀಯ ಸಿಬ್ಬಂದಿಗೆ ಸಾಧ್ಯವಾಗುತ್ತಿಲ್ಲ. ಸೋಂಕಿನ ಭಯದಿಂದಾಗಿ ನೆರೆ ಮನೆಯವರೂ ಕೂಡ ನೆರವಿಗೆ ಧಾವಿಸುತ್ತಿಲ್ಲ. 

ಇನ್ನು ರಕ್ಷಣಾ ಕಾರ್ಯಾಚರಣೆಯಲ್ಲಿ ಕೈ ಜೋಡಿಸಿರುವ ಸಕೀನಾ ಫೌಂಡೇಷನ್ ನ ಮಹಮದ್ ಆಸಿಫ್ ಹುಸೇನ್ ಸೊಹೈಲ್ ಅವರು, ಟೋಲಿಚೌಕಿ ಮತ್ತು ಶೈಕ್‌ಪೇಟೆ ಪ್ರದೇಶದಲ್ಲಿ ನಾವು ಸುಮಾರು 25 ಕುಟುಂಬಗಳನ್ನು ರಕ್ಷಿಸಿದ್ದೇವೆ. ಇಲ್ಲಿ 7 ಅಡಿಗಳಷ್ಟು ನೀರು ರಭಸವಾಗಿ ಹರಿಯುತ್ತಿದೆ. ಪ್ರವಾಹದಿಂದಾಗಿ  ಕೋವಿಡ್-19 ಸೋಂಕಿತರಿಗೆ ಹೆಚ್ಚು ಪ್ರಾಣಾಪಾಯವಿದೆ. ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೇ ಸೋಂಕಿತರು ಪರದಾಡುತ್ತಿದ್ದಾರೆ ಎಂದು ಅವರು ಹೇಳಿದರು.

ಸಿಬ್ಬಂದಿಗಳಿಲ್ಲದೇ ಆಸ್ಪತ್ರೆಗಳಲ್ಲಿ ಹಾಹಾಕಾರ, ಕೋವಿಡ್ ಟೆಸ್ಟ್ ಕ್ಯಾಂಪ್ ಗಳು ಸ್ಥಗಿತ
ಭಾರಿ ಮಳೆ ಪ್ರವಾಹದಿಂದಾಗಿ ಆಸ್ಪತ್ರೆಗಳಲ್ಲಿ ಸಿಬ್ಬಂದಿ ಕೊರತೆಯುಂಟಾಗಿದೆ. ಪ್ರಮುಖವಾಗಿ ಆಸ್ಪತ್ರೆಗಳ ಸಿಬ್ಬಂದಿ ಪ್ರವಾಹದಿಂದಾಗಿ ಕರ್ತವ್ಯಕ್ಕೆ ಹಾಜರಾಗಲು ಸಾಧ್ಯವಾಗುತ್ತಿಲ್ಲ. ಇದರಿಂದ ಕೋವಿಡ್ ಸೋಂಕಿತರು ಚಿಕಿತ್ಸೆ ಸಿಗದೇ ಪ್ರಣಾಪಾಯದಲ್ಲಿರುವಂತಾಗಿದೆ. ಸಹಾಯಕ್ಕಾಗಿ ಯಾಚನೆ ಮಾಡುತ್ತಾ  ಮುನ್ಸಿಪಲ್ ಕಚೇರಿಗಳಿಗೆ ಸಾವಿರಾರು ಕರೆಗಳು ಬರುತ್ತಿದ್ದು, ಪ್ರವಾಹದಿಂದಾಗಿ ಅವರ ರಕ್ಷಣಾ ಕಾರ್ಯಾಚರಣೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಅಧಿಕಾರಿಗಳು ಅಸಹಾಯಕತೆ ತೋರಿದ್ದಾರೆ.

ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ತೆಲಂಗಾಣದಲ್ಲಿ 11 ಮಂದಿ ಸಾವನ್ನಪ್ಪಿದ್ದಾರೆ ಎಂದು ಎಎನ್‌ಐ ವರದಿ ಮಾಡಿದೆ. ರಾಜ್ಯದ ಹಲವಾರು ಭಾಗಗಳಲ್ಲಿ ಸುರಿಯುತ್ತಿರುವ ಮಳೆಯಿಂದ ರಸ್ತೆಗಳಲ್ಲಿ ಪ್ರವಾಹದಂಹತ ಪರಿಸ್ಥಿತಿ ಉಂಟಾಗಿದೆ ಮತ್ತು ಕೆಲವು ತಗ್ಗು ಪ್ರದೇಶಗಳು ಮುಳುಗಡೆಯಾಗಿವೆ.  ವರುಣನ ಆರ್ಭಟಕ್ಕೆ ಬಂಡಲಗುಡದ ಮೊಹಮ್ಮದಿಯಾ ಬೆಟ್ಟದಲ್ಲಿ ಕಾಂಪೌಂಡ್ ಗೋಡೆಯೊಂದು ಕುಸಿದು 9 ಮಂದಿ ಸಾವನ್ನಪ್ಪಿದ್ದಾರೆ. ಮತ್ತೊಂದು ಘಟನೆಯಲ್ಲಿ ಭಾರಿ ಮಳೆಯಿಂದ ಇಬ್ರಾಹಿಂಪಟ್ಟಣಂ ಪ್ರದೇಶದಲ್ಲಿ ಹಳೆಯ ಮನೆಯ ಸೀಲಿಂಗ್ ಕುಸಿದು 40 ವರ್ಷದ ಮಹಿಳೆ ಮತ್ತು ಅವರ 15 ವರ್ಷದ ಪುತ್ರಿ  ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕೆಲ ಪ್ರದೇಶಗಳು ಜಲಾವೃತಗೊಂಡ ನಂತರ ರಾಜ್ಯ ವಿಪತ್ತು ದಳ ಮತ್ತು ಅಗ್ನಿಶಾಮಕ ಇಲಾಖೆ ಟೋಲಿ ಚೌಕಿ ಪ್ರದೇಶದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸಿತು.

ಭಾರೀ ಮಳೆಯಿಂದ ಎದುರಾಗಿರುವ ಅಪಾಯಗಳನ್ನು ಎದುರಿಸಲು ಹೈದರಾಬಾದ್ ಮಹಾನಗರ ಪಾಲಿಕೆ ಸಜ್ಜಾಗಿದ್ದು, ರಕ್ಷಣಾ ಕಾರ್ಯಾಚರಣೆಗಳಿಗೆ ಚಾಲನೆ ನೀಡಲಾಗಿದೆ. ಅಲ್ಲದೇ ಜನರು ಸುರಕ್ಷಿತ ಪ್ರದೇಶಗಳಿಗೆ ತೆರಳುವಂತೆ ಪಾಲಿಕೆ ಆಡಳಿತ ಸೂಚನೆಯನ್ನೂ ನೀಡಿದೆ. ತೆಲಂಗಾಣದಲ್ಲಿ ಮಳೆ ಹೆಚ್ಚಾಗಿರುವ  ಹಿನ್ನೆಲೆಯಲ್ಲಿ ಯಾರೂ ಅನಗತ್ಯವಾಗಿ ಮನೆಯಿಂದ ಹೊರಗೆ ಓಡಾಡಬಾರದು ಎಂದು ತೆಲಂಗಾಣ ಸಚಿವ ಕೆ.ಟಿ. ರಾಮರಾವ್ ಜನರಿಗೆ ಎಚ್ಚರಿಕೆ ನೀಡಿದ್ದಾರೆ. ಕಳೆದ 100 ವರ್ಷಗಳಲ್ಲಿ ಒಂದೇ ದಿನ ಸುರಿದ ಅತ್ಯಧಿಕ ಮಳೆಯಲ್ಲಿ ಹೈದರಾಬಾದ್​ನ ನಿನ್ನೆ ಮಳೆ ಎರಡನೇ ಸ್ಥಾನ ಪಡೆದಿದೆ.
 


Stay up to date on all the latest ರಾಷ್ಟ್ರೀಯ news
Poll
Yediyurappa

ಕರ್ನಾಟಕ ಸಿಎಂ ಆಗಿ ಬಿ.ಎಸ್. ಯಡಿಯೂರಪ್ಪ ನಿರ್ಗಮನವು ರಾಜ್ಯದಲ್ಲಿ ಬಿಜೆಪಿಯ ಚುನಾವಣಾ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆಯೇ?


Result
ಹೌದು
ಇಲ್ಲ
flipboard facebook twitter whatsapp