

ಶಿಮ್ಲಾ: ಕೊರೋನಾ ರೋಗಿಗಳಿಗೆ ಜೀವ ಉಳಿಸುವ ಆಮ್ಲಜನಕದ ತೀವ್ರ ಕೊರತೆ ಎದುರಿಸುತ್ತಿರುವ ರಾಷ್ಟ್ರ ರಾಜಧಾನಿ ದೆಹಲಿಗೆ ಹಿಮಾಚಲ ಪ್ರದೇಶ ಸರ್ಕಾರ ಆಕ್ಸಿಜನ್ ಸರಬರಾಜು ವ್ಯವಸ್ಥೆ ಮಾಡಲಿದೆ ಎಂದು ಅಧಿಕೃತ ವಕ್ತಾರರು ಸೋಮವಾರ ತಿಳಿಸಿದ್ದಾರೆ.
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಕೋರಿಕೆಯ ಮೇರೆಗೆ ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಜೈ ರಾಮ್ ಠಾಕೂರ್, ಕೋವಿಡ್-19 ಬಿಕ್ಕಟ್ಟಿನ ಮಧ್ಯೆ ದೆಹಲಿಗೆ ತುರ್ತು ಆಮ್ಲಜನಕವನ್ನು ಪೂರೈಸಲು ವ್ಯವಸ್ಥೆ ಮಾಡಲು ಒಪ್ಪಿಕೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ.
ಹಿಮಾಚಲ ಪ್ರದೇಶ ಸರ್ಕಾರವು ರಾಷ್ಟ್ರ ರಾಜಧಾನಿಯಲ್ಲಿ ಉಲ್ಬಣಗೊಂಡಿರುವ ಪರಿಸ್ಥಿತಿಯ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಿದೆ ಮತ್ತು ದೆಹಲಿ ಸರ್ಕಾರಕ್ಕೆ ಸಾಧ್ಯವಿರುವ ಎಲ್ಲ ಸಹಾಯ ನೀಡಲು ಹೆಚ್ಚು ಸಂತೋಷವಾಗುತ್ತದೆ ಎಂದು ದೆಹಲಿ ಸರ್ಕಾರಕ್ಕೆ ಬರೆದ ಪತ್ರದಲ್ಲಿ ಠಾಕೂರ್ ತಿಳಿಸಿದ್ದಾರೆ.
ದೆಹಲಿ ಸರ್ಕಾರದ ಅಧಿಕಾರಿಗಳು ನಮ್ಮ ರಾಜ್ಯದಿಂದ ಆಮ್ಲಜನಕವನ್ನು ಪೂರೈಸಲು ಹೆಚ್ಚುವರಿ ಕೈಗಾರಿಕಾ ನಿರ್ದೇಶಕರನ್ನು ಸಂಪರ್ಕಿಸಬಹುದು ಎಂದು ಠಾಕೂರ್ ಹೇಳಿದ್ದಾರೆ.