ಓಮಿಕ್ರಾನ್ ರೂಪಾಂತರಿ ಭೀತಿ: ಲಸಿಕೆ ಹಾಕಿಸಿಕೊಳ್ಳದ ಕೋವಿಡ್ ರೋಗಿಗಳಿಗಿಲ್ಲ ಉಚಿತ ಚಿಕಿತ್ಸೆ; ಕೇರಳ ಸರ್ಕಾರ ದಿಟ್ಟ ನಿರ್ಧಾರ!

ಲಸಿಕೆ (Covid-19 Vaccine) ಹಾಕಿಸಿಕೊಳ್ಳದ ಕೊವಿಡ್ ರೋಗಿ(Covid Patients)ಗಳಿಗೆ ಕೇರಳ ಸರ್ಕಾರ (Kerala Govt.) ಉಚಿತ ಚಿಕಿತ್ಸೆ (Free Treatment) ನೀಡುವುದಿಲ್ಲ ಎಂದು ಸಿಎಂ ಪಿಣರಾಯಿ ವಿಜಯನ್ (Pinarayi Vijayan) ಹೇಳಿದ್ದಾರೆ.
ಕೋವಿಡ್ ಲಸಿಕೆ ಮತ್ತು ಸಿಎಂ ಪಿಣರಾಯಿ ವಿಜಯನ್
ಕೋವಿಡ್ ಲಸಿಕೆ ಮತ್ತು ಸಿಎಂ ಪಿಣರಾಯಿ ವಿಜಯನ್
Updated on

ಕೊಚ್ಚಿನ್: ಲಸಿಕೆ (Covid-19 Vaccine) ಹಾಕಿಸಿಕೊಳ್ಳದ ಕೊವಿಡ್ ರೋಗಿ (Covid Patients)ಗಳಿಗೆ ಕೇರಳ ಸರ್ಕಾರ (Kerala Govt.) ಉಚಿತ ಚಿಕಿತ್ಸೆ (Free Treatment) ನೀಡುವುದಿಲ್ಲ ಎಂದು ಸಿಎಂ ಪಿಣರಾಯಿ ವಿಜಯನ್ (Pinarayi Vijayan) ಹೇಳಿದ್ದಾರೆ.

ಓಮಿಕ್ರಾನ್ ರೂಪಾಂತರ(Omicron variant) ಭೀತಿಯ ನಡುವೆಯೇ ದೇಶದಲ್ಲಿ ಲಸಿಕೆ ನೀಡಿಕೆ ಪ್ರಮಾಣದ ಕುರಿತು ಭಾರಿ ಚರ್ಚೆಗಳು ನಡೆಯುತ್ತಿರುವಾಗಲೇ ಇತ್ತ ಕೇರಳ ಸರ್ಕಾರ ಲಸಿಕೆ ಕುರಿತು ದಿಟ್ಟ ನಿರ್ಧಾರ ಕೈಗೊಂಡಿದ್ದು, ಲಸಿಕೆ ಹಾಕಿಸಿಕೊಳ್ಳದ ಕೊವಿಡ್ ರೋಗಿಗಳಿಗೆ ಕೇರಳ ಸರ್ಕಾರ ಉಚಿತ ಚಿಕಿತ್ಸೆ ನೀಡುವುದಿಲ್ಲ ಎಂದು ಘೋಷಣೆ ಮಾಡಿದೆ.

ಈ ಕುರಿತಂತೆ ಸಿಎಂ ಪಿಣರಾಯಿ ವಿಜಯನ್ (Pinarayi Vijayan) ಅವರು ಟ್ವೀಟ್ ಮೂಲಕ ಮಾಹಿತಿ ನೀಡಿದ್ದು, 'ಕೋವಿಡ್ ತಡೆಗಟ್ಟುವ ಕ್ರಮಗಳೊಂದಿಗೆ ಸಹಕರಿಸದವರಿಗೆ ಉಚಿತ ಚಿಕಿತ್ಸೆ ಇಲ್ಲ. ಲಸಿಕೆ ಪಡೆಯದ ಶಿಕ್ಷಕರು ಮತ್ತು ಕಚೇರಿಗಳಲ್ಲಿ ಕೆಲಸ ಮಾಡುವ ಅಥವಾ ಸಾರ್ವಜನಿಕರೊಂದಿಗೆ ಸಂವಹನ ನಡೆಸುವ ಉದ್ಯೋಗಿಗಳು, ಎಲ್ಲರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು RTPCR ಪರೀಕ್ಷೆಗಳಿಗೆ ತಾವೇ ಹಣ ಪಾವತಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.

ನಿನ್ನೆ ನಡೆದ ಕೋವಿಡ್-19 ಪರಿಶೀಲನಾ ಸಭೆಯ ಬಳಿಕ ಸಿಎಂ ಪಿಣರಾಯಿ ವಿಜಯನ್ ಇಂತಹುದೊಂದು ನಿರ್ಧಾರಕ್ಕೆ ಬಂದಿದ್ದು, 'ರಾಜ್ಯದ ಕೊವಿಡ್ ನಿಯಂತ್ರಣ ಕ್ರಮಗಳೊಂದಿಗೆ ಸಹಕರಿಸದ ರೋಗಿಗಳಿಗೆ ಉಚಿತ ಚಿಕಿತ್ಸೆಯನ್ನು ನೀಡಲಾಗುವುದಿಲ್ಲ. ಲಸಿಕೆಯನ್ನು ತೆಗೆದುಕೊಳ್ಳದವರಿಗೆ ಚಿಕಿತ್ಸಾ ವೆಚ್ಚವನ್ನೂ ಸರ್ಕಾರ ಭರಿಸುವುದಿಲ್ಲ. ಅಲರ್ಜಿ ಅಥವಾ ಯಾವುದೇ ಕಾಯಿಲೆಯ ಹಿನ್ನೆಲೆಯಲ್ಲಿ ಲಸಿಕೆ ತೆಗೆದುಕೊಳ್ಳಲು ಹಿಂದೇಟು ಹಾಕುವವರು ಸರ್ಕಾರಿ ಸೇವೆಯಲ್ಲಿರುವ ವೈದ್ಯರು ನೀಡಿರುವ ಪ್ರಮಾಣ ಪತ್ರವನ್ನು ಹಾಜರುಪಡಿಸಬೇಕು. ಇದು  ಲಸಿಕೆ ಹಾಕಿಸಿಕೊಳ್ಳದ ಸರ್ಕಾರಿ ನೌಕರರು ಮತ್ತು ಶಿಕ್ಷಕರಿಗೂ ಅನ್ವಯಿಸುತ್ತದೆ ಎಂದು ಹೇಳಿದ್ದಾರೆ. 

ಅಂತೆಯೇ ಲಸಿಕೆ ಹಾಕಿಸಿಕೊಳ್ಳದಿದ್ದರೆ ಅವರು ಪ್ರತಿ ವಾರ ಆರ್‌ಟಿ-ಪಿಸಿಆರ್ ಪರೀಕ್ಷೆಗೆ ಒಳಗಾಗಬೇಕಾಗುತ್ತದೆ, ಅದಕ್ಕಾಗಿ ಅವರೇ ವೆಚ್ಚವನ್ನು ಭರಿಸಬೇಕಾಗುತ್ತದೆ. ಪರೀಕ್ಷಾ ವರದಿಗಳನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ಸಲ್ಲಿಸಬೇಕು. ಕಚೇರಿಗೆ ತೆರಳುವವರಿಗೂ ಇದು ಕಡ್ಡಾಯವಾಗಿದೆ. ಹೀಗೆ ತೆಗೆದುಕೊಂಡ ಕ್ರಮಗಳು ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಸುರಕ್ಷತೆಯನ್ನು ಖಚಿತಪಡಿಸುತ್ತದೆ ಎಂದು ವಿಜಯನ್ ಹೇಳಿದ್ದಾರೆ.

ವಿಮಾನ ನಿಲ್ದಾಣಗಳಲ್ಲಿ ಕಟ್ಟೆಚ್ಚರ
ಅಂತೆಯೇ ಸಭೆಯಲ್ಲಿ ಓಮಿಕ್ರಾನ್ ರೂಪಾಂತರದಿಂದ ಉಂಟಾಗುವ ಅಪಾಯದ ಹಿನ್ನೆಲೆಯಲ್ಲಿ ಜಾಗರೂಕತೆಯನ್ನು ಹೆಚ್ಚಿಸಲು ಆರೋಗ್ಯ ಇಲಾಖೆಯನ್ನು ಸಿಎಂ ವಿಜಯನ್ ಕೇಳಿದ್ದು, ಅಂತಾರಾಷ್ಟ್ರೀಯ ಪ್ರಯಾಣಿಕರ ಪ್ರಯಾಣದ ಇತಿಹಾಸವನ್ನು ವಿಮಾನ ನಿಲ್ದಾಣಗಳಲ್ಲಿ ಸೂಕ್ಷ್ಮವಾಗಿ ಪರಿಶೀಲಿಸಬೇಕು ಮತ್ತು ಪ್ರೋಟೋಕಾಲ್ ಪ್ರಕಾರ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಸೂಚಿಸಿದ್ದಾರೆ. ಸ್ಥಳೀಯ ಸ್ವಯಂ ಆಡಳಿತ ಸಂಸ್ಥೆಗಳ ಪ್ರತಿನಿಧಿಗಳು ತಮ್ಮ ವ್ಯಾಪ್ತಿಯಲ್ಲಿರುವ ಅರ್ಹ ಜನಸಂಖ್ಯೆಗೆ ಸಂಪೂರ್ಣ ಲಸಿಕೆ ಹಾಕುವಂತೆ ನೋಡಿಕೊಳ್ಳಬೇಕು. ಡಿಸೆಂಬರ್ 1 ರಿಂದ 15 ದಿನಗಳ ಕಾಲ ಕೇರಳದಲ್ಲಿ ವಿಶೇಷ ಲಸಿಕೆ ಅಭಿಯಾನ ನಡೆಯಲಿದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com