ಅಶ್ಲೀಲ ಭಾಷೆ ಬಳಕೆ: ಯೂಟ್ಯೂಬರ್, ಪಬ್'ಜಿ ಗೇಮರ್ ಮದನ್ ಬಂಧನ

ಮಹಿಳೆಯರ ವಿರುದ್ಧ ಅಶ್ಲೀಲ ಭಾಷೆ ಬಳಕೆ ಮಾಡುತ್ತಿದ್ದ ಯೂಟ್ಯೂಬರ್, ಪಬ್'ಜಿ ಗೇಮರ್ ಮದನ್'ನನ್ನು ಚೆನ್ನೈನ ಕೇಂದ್ರ ಅಪರಾಧ ವಿಭಾಗದ ಪೊಲೀಸರು ಶುಕ್ರವಾರ ಬಂಧನಕ್ಕೊಳಪಡಿಸಿದ್ದಾರೆ.
ಯೂಟ್ಯೂಬರ್ ಮದನ್ ಹಾಗೂ ಪತ್ನಿ ಕೃತಿಕಾ
ಯೂಟ್ಯೂಬರ್ ಮದನ್ ಹಾಗೂ ಪತ್ನಿ ಕೃತಿಕಾ

ಚೆನ್ನೈ: ಮಹಿಳೆಯರ ವಿರುದ್ಧ ಅಶ್ಲೀಲ ಭಾಷೆ ಬಳಕೆ ಮಾಡುತ್ತಿದ್ದ ಯೂಟ್ಯೂಬರ್, ಪಬ್'ಜಿ ಗೇಮರ್ ಮದನ್'ನನ್ನು ಚೆನ್ನೈನ ಕೇಂದ್ರ ಅಪರಾಧ ವಿಭಾಗದ ಪೊಲೀಸರು ಶುಕ್ರವಾರ ಬಂಧನಕ್ಕೊಳಪಡಿಸಿದ್ದಾರೆ. 

ಧರಂಪುರಿಯಲ್ಲಿರುವ ಸಂಬಂಧಿಕರ ಮನೆಯಲ್ಲಿ ಮದನ್ ಮಣಿಕ್ಕಮ್'ನನ್ನು ಬಂಧನಕ್ಕೊಳಪಡಿಸಲಾಗಿದೆ ಎಂದು ವರದಿಗಳಿಂದ ತಿಳಿದುಬಂದಿದೆ. 

ಸಿಸಿಬಿ ಪೊಲೀಸರು ಮದನ್ ನನ್ನು ಬಂಧನಕ್ಕೊಳಪಡಿಸುವ ಕೆಲವೇ ನಿಮಿಷಗಳ ಹಿಂದೆ ಮದನ್ ಪರ ವಕೀಲರು ಜಾಮೀನು ಕೋರಿ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದ್ದರು ಎಂದು ವರದಿಗಳು ತಿಳಿಸಿವೆ. 

ಪೊಲೀಸರು ತನ್ನನ್ನು ಬಂಧಿಸುತ್ತಾರೆಂಬುದು ಖಚಿತವಾಗುತ್ತಿದ್ದಂತೆಯೇ ಜಾಮೀನು ಕೋರಿ ನ್ಯಾಯಾಲಯದ ಮೆಟ್ಟಿಲೇರಲು ಮದನ್ ಗುರುವಾರ ರಾತ್ರಿಯೆ ನಿರ್ಧರಿಸಿದ್ದ. ಆದರೆ, ಜಾಮೀನು ಅರ್ಜಿ ಸಲ್ಲಿಸುವುದಕ್ಕೂ ಮುನ್ನವೇ ಪೊಲೀಸರು ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಇದೀಗ ನ್ಯಾಯಾಧೀಶ ಎಂ.ದಂಡಪಣಿಯವರು ಜಾಮೀನು ಅರ್ಜಿಯನ್ನು ತಿರಸ್ಕರಿಸಿದ್ದಾರೆ. 

ಮದನ್ ನನ್ನು ಬಂಧನಕ್ಕೊಳಪಡಿಸಿರುವ ಪೊಲೀಸರು ಇಂದು ಸಂಜೆಯೊಳಗೆ ನ್ಯಾಯಾಲಯಕ್ಕೆ ಹಾಜರುಪಡಿಸುವ ಸಾಧ್ಯತೆಗಳಿವೆ. 

ಮಹಿಳೆಯರ ವಿರುದ್ಧ ಅಶ್ಲೀಲ ಭಾಷೆ ಬಳಕೆ ಮಾಡಿರುವುದು, ಮಾಹಿತಿ ತಂತ್ರಜ್ಞಾನ ಕಾಯ್ದೆ ಹಾಗೂ 1986ರ ಇನ್‌ಡೀಸೆಂಟ್ ಪ್ರಾತಿನಿದ್ಯ ಕಾಯ್ದೆ ಅಡಿಯಲ್ಲಿ ಮದನ್ ವಿರುದ್ಧ ವಿವಿಧ ಪ್ರಕರಣಗಳು ದಾಖಲಾಗಿವೆ. 

ಎರಡು ದಿನಗಳ ಹಿಂದಷ್ಟೇ ಮದನ್ ಪತ್ನಿ ಕೃತಿಕಾ ಅವರನ್ನು ಸಿಸಿಬಿ ಪೊಲೀಸರು ಬಂಧನಕ್ಕೊಳಪಡಿಸಿದ್ದರು. ವಿಚಾರಣೆ ವೇಳೆ ಯೂಟ್ಯೂಬ್ ವಿಡಿಯೋ ವೇಳೆ ಮದನ್ ಜೊತೆಗೆ ಅಶ್ಲೀಲ ಭಾಷೆ ಬಳಕೆ ಮಾಡುತ್ತಿರುವುದನ್ನು ಒಪ್ಪಿಕೊಂಡಿದ್ದರು. 

ಪಬ್ ಜಿ ಗೇಮರ್ ಆಗಿರುವ ಮದನ್ ಮಹಿಳೆಯರ ಕುರಿತು ಅಶ್ಲೀಲ ಭಾಷೆ ಬಳಕೆ ಮಾಡಿರುವ ವಿಡಿಯೋಗಳನ್ನು ಯೂಟ್ಯೂಬ್ ನಲ್ಲಿ ಅಪ್ಲೋಡ್ ಮಾಡುತ್ತಿದ್ದ. ಈ ಕುರಿತು ಹಲವು ಠಾಣೆಗಳಲ್ಲಿ ನೂರಾರು ದೂರುಗಳು ದಾಖಲಾಗಿವೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಇದೀಗ ಮದನ್ ಹಾಗೂ ಆತನ ಪತ್ನಿ ಕೃತಿಕಾ ಇಬ್ಬರನ್ನೂ ಬಂಧನಕ್ಕೊಳಪಡಿಸಿದ್ದಾರೆ.

ತಮ್ಮ ಯೂಟ್ಯೂಬ್ ಚಾನೆಲ್ ಜನಪ್ರಿಯಗೊಳ್ಳಬೇಕೆಂಬ ಉದ್ದೇಶದಿಂದ ಇಬ್ಬರೂ ಈ ರೀತಿ ಮಾಡುತ್ತಿದ್ದರು. ಕೃತಿಕಾ ಕೂಡ ಯೂಟ್ಯೂಬ್ ಚಾನೆಲ್'ನ ಅಡ್ಮಿನ್ ಆಗಿದ್ದಾರೆ. ಇಬ್ಬರೂ ಇಂಜಿನಿಯರಿಂಗ್ ವಿದ್ಯಾರ್ಥಿಗಳಾಗಿದ್ದು, ಸೇಲಂ ಮೂಲದವರಾಗಿದ್ದಾರೆ. ಇಬ್ಬರೂ ಟಾಕ್ಸಿಕ್ ಮದನ್ 18+ ಹೆಸರಿನಲ್ಲಿ ಯೂಟ್ಯೂಬ್ ಚಾನೆಲ್ ತೆರೆದು ವಿಡಿಯೋಗಳನ್ನು ಹಾಕುತ್ತಿದ್ದರು. ಇವರ ಚಾನೆಲ್'ಗೆ 8 ಲಕ್ಷ ಮಂದಿ ಚಂದಾದಾರಿದ್ದಾರೆ. ಇವರ ವಿರುದ್ಧ ಬಂದಿರುವ ಸಾಕಷ್ಟು ದೂರುಗಳು ಅಶ್ಲೀಲ ಭಾಷೆ ಕುರಿತಾಗಿಯೇ ಆಗಿದೆ. ಅಲ್ಲದೆ, ಇನ್ ಸ್ಟಾಗ್ರಾಮ್ ಮೂಲಕವೂ ಸಾಕಷ್ಟು ಜನರಿಗೆ ಮೋಸ ಮಾಡಿರುವ ಕುರಿತು ದೂರುಗಳು ದಾಖಳಾಗಿವೆ. ಇಬ್ಬರ ಬಳಿಯಿದ್ದ ಲ್ಯಾಪ್ ಟಾಪ್, ಡೆಸ್ಕ್ ಟಾಪ್, ಮೊಬೈಲ್ ಫೋನ್ ಗಳನ್ನು ವಶಕ್ಕೆ ಪಡೆಯಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com