ಟೌಕ್ಟೆ ಚಂಡಮಾರುತ: ಬಾರ್ಜ್ ಗಳಲ್ಲಿನ 89 ಸಿಬ್ಬಂದಿಗಳು ಇನ್ನೂ ಪತ್ತೆಯಾಗಿಲ್ಲ- ನೌಕಾಪಡೆ
ಮುಂಬೈ: ಟೌಕ್ಟೆ ಚಂಡಮಾರುತದಿಂದ ಮಹಾರಾಷ್ಟ್ರದಲ್ಲಿ ತೀವ್ರತರವಾದ ವಾತಾವರಣ ನಿರ್ಮಾಣವಾಗಿದ್ದು, ಪ್ರತಿಕೂಲ ಪರಿಸ್ಥಿತಿಯಲ್ಲಿ ನೌಕಾಪಡೆ ರಕ್ಷಣಾ, ಶೋಧ ಕಾರ್ಯಾಚರಣೆಯಲ್ಲಿ ತೊಡಗಿದೆ.
ಬಾರ್ಜ್ ಪಿ-305 ನಲ್ಲಿ ಸಿಲುಕಿದ್ದ 273 ಮಂದಿಯ ಪೈಕಿ 184 ಮಂದಿಯನ್ನು ಈ ವರೆಗೂ ರಕ್ಷಿಸಲಾಗಿದ್ದು ಇನ್ನೂ 89 ಮಂದಿಗಾಗಿ ಶೋಧ ಕಾರ್ಯಾಚರಣೆ ಮುಂದುವರೆದಿದೆ. ಉಳಿದ 2 ಬಾರ್ಜ್ ಗಳು, ಆಯಿಲ್ ರಿಗ್ ಗಳು ಸುರಕ್ಷಿತವಾಗಿದೆ ಎಂದು ನೌಕಾಪಡೆ ಮಾಹಿತಿ ನೀಡಿದೆ.
ಬುಧವಾರ ಬೆಳಿಗ್ಗೆ 184 ಸಿಬ್ಬಂದಿಗಳನ್ನು ಐಎನ್ ಎಸ್ ಕೊಚ್ಚಿ ಹಾಗೂ ಐಎನ್ಎಸ್ ಕೋಲ್ಕತ್ತಾಗಳ ನೆರವಿನಿಂದ ರಕ್ಷಣೆ ಮಾಡಲಾಗಿದ್ದು, ಮುಂಬೈ ಬಂದರಿಗೆ ವಾಪಸ್ಸಾಗುತ್ತಿವೆ. ಐಎನ್ಎಸ್ ತೇಗ್, ಐಎನ್ಎಸ್ ಬಿಯಾಸ್, ಐಎನ್ಎಸ್ ಬೆಟ್ವಾ ಶೋಧಕಾರ್ಯಾಚರಣೆಗಳನ್ನು ಮುಂದುವರೆಸಿವೆ.
ಮಂಗಳವಾರದಂದು ಜಿಎಎಲ್ ಕಾನ್ಸ್ಟಿಟ್ಯೂಟರ್ ಬಾರ್ಜ್ ನಲ್ಲಿದ್ದ ಎಲ್ಲಾ 137 ಸಿಬ್ಬಂದಿಗಳನ್ನೂ ರಕ್ಷಣೆ ಮಾಡಲಾಗಿತ್ತು. ಇನ್ನು 12 ಗಂಟೆಗಳಲ್ಲಿ ಟೌಕ್ಟೆ ಚಂಡಮಾರುತದ ಅಬ್ಬರ ಇನ್ನಷ್ಟು ಕಡಿಮೆಯಾಗಲಿದೆ ಎಂದು ಐಎಂಡಿ ತಿಳಿಸಿದೆ.