ನರೇಂದ್ರ ಮೋದಿ ನೇತೃತ್ವದ ಎನ್ ಡಿಎ 2.0 ಸರ್ಕಾರಕ್ಕೆ 2 ವರ್ಷ: ಸಂಭ್ರಮಾಚರಣೆಗೆ ಕೊರೋನಾ ಕರಿನೆರಳು 

ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ-2 ಸರ್ಕಾರ ಇಂದಿಗೆ ಅಂದರೆ ಮೇ 30ಕ್ಕೆ ಅಧಿಕಾರಕ್ಕೆ ಬಂದು ಎರಡು ವರ್ಷಗಳನ್ನು ಪೂರೈಸುತ್ತಿದೆ.
ಎರಡು ವರ್ಷಗಳ ಹಿಂದೆ 2019ರಲ್ಲಿ ನರೇಂದ್ರ ಮೋದಿಯವರು ಎರಡನೇ ಬಾರಿಗೆ ದೇಶದ ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಸಂದರ್ಭ
ಎರಡು ವರ್ಷಗಳ ಹಿಂದೆ 2019ರಲ್ಲಿ ನರೇಂದ್ರ ಮೋದಿಯವರು ಎರಡನೇ ಬಾರಿಗೆ ದೇಶದ ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಸಂದರ್ಭ
Updated on

ನವದೆಹಲಿ: ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ-2 ಸರ್ಕಾರ ಇಂದಿಗೆ ಅಂದರೆ ಮೇ 30ಕ್ಕೆ ಅಧಿಕಾರಕ್ಕೆ ಬಂದು ಎರಡು ವರ್ಷಗಳನ್ನು ಪೂರೈಸುತ್ತಿದೆ.

ಆದರೆ ಈ ಬಾರಿ ಮೋದಿ ಸರ್ಕಾರದ ಸಂಪುಟ ಸಚಿವರು ಆಚರಣೆಯ ಸಂಭ್ರಮದಲ್ಲಿಲ್ಲ. ಕೊರೋನಾ ಕರಿಛಾಯೆ ಆವರಿಸಿದೆ. ಕಳೆದ ಎರಡು ತಿಂಗಳಿನಿಂದ ದೇಶಾದ್ಯಂತ ಹಲವು ಜನರ ಸಾವು-ನೋವುಗಳಾಗಿವೆ. ಹೀಗಾಗಿ ಬಿಜೆಪಿ ಪಾಳಯದಲ್ಲಿ ಸಂಭ್ರಮದ ಕಳೆಯಿಲ್ಲ.

ದೇಶದ ನಾಗರಿಕರು ಇನ್ನಿಲ್ಲದ ಕಷ್ಟದ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಕೊರೋನಾ ನಿಯಂತ್ರಿಸುವಲ್ಲಿ ಕೇಂದ್ರದ ಮೋದಿ ಸರ್ಕಾರ ವಿಫಲವಾಗಿದೆ ಎಂಬುದು ಹಲವರ ಅಭಿಪ್ರಾಯವಾಗಿದೆ. ಹೀಗಾಗಿ ಬಿಜೆಪಿ ಈ ಬಾರಿ ಸರ್ಕಾರದ ವರ್ಷಾಚರಣೆಯನ್ನು ಇಂದು ಅಭಿವೃದ್ಧಿ ಕೆಲಸಕ್ಕೆ ಮೀಸಲಿಡಲು ತೀರ್ಮಾನಿಸಿದ್ದು, ದೇಶಾದ್ಯಂತ ಕನಿಷ್ಟ ಒಂದು ಲಕ್ಷ ಗ್ರಾಮಗಳಿಗೆ ಹೋಗಿ ಜನರನ್ನು ಸಂಪರ್ಕಿಸಿ ಅವರ ಕಷ್ಟ-ಕಾರ್ಪಣ್ಯಗಳನ್ನು ಆಲಿಸುವಂತೆ ನಾಯಕರು ಸೂಚಿಸಿದ್ದಾರೆ.

ಕಳೆದ ವರ್ಷ ಕೇಂದ್ರದ ನಾಯಕರು ಸೇರಿದಂತೆ ಬಿಜೆಪಿಯ ನಾಯಕರು ಎನ್ ಡಿಎ-2 ಸರ್ಕಾರದ ಮೊದಲ ವರ್ಷದ ಸಂದರ್ಭದಲ್ಲಿ ವರ್ಚುವಲ್ ರ್ಯಾಲಿಗಳನ್ನು ನಡೆಸಿ ಸರ್ಕಾರದ ಸಾಧನೆಗಳನ್ನು ಪಟ್ಟಿ ಮಾಡಿದ್ದರು.

ವಿರೋಧ ಪಕ್ಷಗಳ ಟೀಕೆ ಮೋದಿ ಸರ್ಕಾರದ ವಿರುದ್ಧ ಮುಂದುವರಿದೇ ಇದೆ. ಹೀಗಾಗಿ ಎರಡನೇ ವರ್ಷದ ಆಚರಣೆ ಸಂದರ್ಭದಲ್ಲಿ ನಿನ್ನೆ ಮೋದಿ ಸರ್ಕಾರ ಕೋವಿಡ್ ನಿಂದ ಮೃತಪಟ್ಟ ಪೋಷಕರ ಅನಾಥ ಮಕ್ಕಳು 18 ವರ್ಷ ತುಂಬುವವರೆಗೆ ಅವರ ಸಂಪೂರ್ಣ ಶಿಕ್ಷಣ, ಆರೋಗ್ಯ ಸೌಲಭ್ಯವನ್ನು ನೋಡಿಕೊಳ್ಳುವುದಾಗಿ ಘೋಷಿಸಿದೆ. ಅಲ್ಲದೆ ಕೊರೋನಾ ರೋಗದ ಸಂದರ್ಭದಲ್ಲಿ ದೇಶದ ವೈದ್ಯಕೀಯ ಮತ್ತು ಆರ್ಥಿಕ ಸವಾಲುಗಳನ್ನು ಹೇಗೆ ಎದುರಿಸಲಿದೆ ಎಂಬುದನ್ನು ಕೂಡ ಮೋದಿ ಸರ್ಕಾರ ವಿವರಿಸಿದೆ.

370 ನೇ ವಿಧಿಯನ್ನು ರದ್ದುಗೊಳಿಸುವುದರಿಂದ ಹಿಡಿದು ಅಯೋಧ್ಯೆಯಲ್ಲಿ ರಾಮ ದೇವಾಲಯದ ನಿರ್ಮಾಣದವರೆಗಿನ ಬಿಜೆಪಿಯ ಸೈದ್ಧಾಂತಿಕ ಭರವಸೆಗಳ ಜೊತೆಗೆ, ಆಗಿನ ಸಾಂಕ್ರಾಮಿಕ ರೋಗದಿಂದ ಉಂಟಾದ ಸಂಕಟಗಳ ಜೊತೆಗೆ, ಕಳೆದ ವರ್ಷ ತನ್ನ ವಾರ್ಷಿಕೋತ್ಸವದ ಘಟನೆಗಳಿಗೆ ವಿಜಯೋತ್ಸವದ ಪ್ರಜ್ಞೆಯನ್ನು ತುಂಬಿದ್ದರೆ, ಈ ವರ್ಷ ಪರಿಸ್ಥಿತಿ ಭಿನ್ನವಾಗಿದೆ.

ಕೊರೋನಾ ಸಾಂಕ್ರಾಮಿಕ ರೋಗವನ್ನು ನಿಭಾಯಿಸುವ ರೀತಿ ಮತ್ತು ದೇಶದ ನಾಗರಿಕರಿಗೆ ಕೊರೋನಾ ವಿರುದ್ಧ ಲಸಿಕೆ ನೀಡುವ ವಿಚಾರ ಮುಂದಿನ ಚುನಾವಣೆಗೆ ಬಿಜೆಪಿಗೆ ಪ್ರಮುಖ ವಿಷಯವಾಗಲಿದೆ ಎಂಬುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯ. ಜನರ ಬಳಿಗೆ ಹೋಗುವಂತೆ ಬಿಜೆಪಿ ನಾಯಕರು ಈ ಸಂದರ್ಭದಲ್ಲಿ ಕಾರ್ಯಕರ್ತರಿಗೆ ಸೂಚಿಸುತ್ತಿದ್ದಾರೆ.

ಇನ್ನು ಏಳೆಂಟು ತಿಂಗಳುಗಳಲ್ಲಿ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಣೆಯಾಗಲಿದೆ. ಮುಂದಿನ ವರ್ಷ ಜನವರಿಯಿಂದ ಮಾರ್ಚ್ ನಡುವೆ ಪಂಜಾಬ್, ಉತ್ತರಾಖಂಡ್, ಮಣಿಪುರ ಮತ್ತು ಗೋವಾ ರಾಜ್ಯಗಳಿಗೆ ಚುನಾವಣೆ ನಡೆಯಲಿವೆ. ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ಕಾರ್ಯವೈಖರಿ ಪ್ರಮುಖವಾಗುತ್ತದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com