ಚಂಡೀಘಡ: ಭೀತಿ ಆವರಿಸಿರುವ ಪಕ್ಷದಲ್ಲಿ ಅವ್ಯವಸ್ಥೆ ಮನೆಮಾಡಿದ್ದು, ಪಂಜಾಬ್ ಕಾಂಗ್ರೆಸ್ ನಲ್ಲಿನ ಬಿಕ್ಕಟ್ಟನ್ನು ಸರಿಯಾಗಿ ನಿಭಾಯಿಸದೆ ತೇಪೆ ಹಾಕಲು ಅದರ ನಾಯಕರು ಸುಳ್ಳು ಹೇಳುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಶನಿವಾರ ವಾಗ್ದಾಳಿ ನಡೆಸಿದ್ದಾರೆ.
ಸಿಂಗ್ ಅವರ ರಾಜೀನಾಮೆಗೆ ಒತ್ತಾಯಿಸಿ 78 ಶಾಸಕರು ಕೇಂದ್ರದ ವರಿಷ್ಠರಿಗೆ ಪತ್ರ ಬರೆದಿದ್ದರು, ಸೋನಿಯಾ ಗಾಂಧಿ ಅವರಿಂದ ರಾಜೀನಾಮೆ ಪಡೆಯಲಿಲ್ಲ ಎಂದು ಕಾಂಗ್ರೆಸ್ ಮುಖಂಡ ರಣದೀಪ್ ಸಿಂಗ್ ಸುರ್ಜೆವಾಲಾ ಹೇಳಿಕೆ ಬೆನ್ನಲ್ಲೇ, ಅಮರೀಂದರ್ ಸಿಂಗ್ ಈ ರೀತಿಯ ಹೇಳಿಕೆ ನೀಡಿದ್ದಾರೆ.
ಸುರ್ಜೆವಾಲಾ ಹಾಗೂ ಹರೀಶ್ ರಾವತ್ ಅವರ ಹೇಳಿಕೆ ದೋಷಗಳಿಂದ ಕೂಡಿರುವ ಹಾಸ್ಯಾಸ್ಪದವಾಗಿದೆ. ಇಡೀ ಪಕ್ಷವು ನವಜೋತ್ ಸಿಂಗ್ ಸಿಧು ಅವರ ಕಾಮಿಕ್ ಥಿಯೇಟರ್‌ಗಳ ಪ್ರಜ್ಞೆಯಿಂದ ತುಂಬಿದೆ ಎಂದು ತೋರುತ್ತದೆ. ನಂತರ ಅವರು 117 ಶಾಸಕರು ನನ್ನ ವಿರುದ್ಧ ಪತ್ರ ಬರೆದಿದ್ದರು ಎಂದು ಹೇಳುತ್ತಾರೆ, ಇದು ಪಕ್ಷದಲ್ಲಿನ ವ್ಯವಹಾರಗಳ ಸ್ಥಿತಿ. ಅವರು ತಮ್ಮ ಸುಳ್ಳನ್ನು ಸರಿಯಾಗಿ ಸಹ ಹೇಳಲು ಸಾಧ್ಯವಾಗುತ್ತಿಲ್ಲ ಎಂದು ಸಿಂಗ್ ಹೇಳಿದ್ದಾರೆ.
ಕಾಂಗ್ರೆಸ್ ಸಂಪೂರ್ಣ ಅಸ್ತವ್ಯಸ್ತವಾಗಿದೆ ಮತ್ತು ಬಿಕ್ಕಟ್ಟು ದಿನದಿಂದ ದಿನಕ್ಕೆ ಉಲ್ಬಣಗೊಳ್ಳುತ್ತಿರುವಂತೆ ಕಾಣುತ್ತಿದೆ, ಅದರ ಬಹುಪಾಲು ಹಿರಿಯ ನಾಯಕರು ಪಕ್ಷದ ಕಾರ್ಯವೈಖರಿಯಿಂದ ಸಂಪೂರ್ಣವಾಗಿ ನಿರಾಶೆಗೊಂಡಿದ್ದಾರೆ ಎಂದು ಅಮರೀಂದರ್ ಸಿಂಗ್ ಟೀಕಿಸಿದ್ದಾರೆ. ಈ ಸುಳ್ಳು ಗಳಿಗೆ ಪಕ್ಷವು ರಾಜ್ಯದಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಭಾರೀ ಬೆಲೆಯನ್ನು ತೆರಬೇಕಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.
Advertisement