ಬ್ಲಾಕ್ ಫಂಗಸ್ ಆಯ್ತು, ಈಗ ಗಾಲ್ ಬ್ಲಾಡರ್ ಗ್ಯಾಂಗ್ರೀನ್; ಕೋವಿಡ್ ನಿಂದ ಚೇತರಿಸಿಕೊಂಡವರಲ್ಲಿ ಹೊಸ ಸಮಸ್ಯೆ ಪತ್ತೆ

ಕೋವಿಡ್-19 ಸಾಂಕ್ರಾಮಿಕದಿಂದ ಚೇತರಿಸಿಕೊಂಡ ನಂತರ ಐದು ರೋಗಿಗಳಲ್ಲಿ ಪಿತ್ತಕೋಶದ ಗ್ಯಾಂಗ್ರೀನ್ ಕಂಡುಬಂದಿರುವ ಕುರಿತು ವರದಿ ಬಂದಿದೆ.
ಗಾಲ್ ಬ್ಲಾಡರ್ ಗ್ಯಾಂಗ್ರೀನ್-ಕೋವಿಡ್
ಗಾಲ್ ಬ್ಲಾಡರ್ ಗ್ಯಾಂಗ್ರೀನ್-ಕೋವಿಡ್
Updated on

ನವದೆಹಲಿ: ಕೋವಿಡ್-19 ಸಾಂಕ್ರಾಮಿಕದಿಂದ ಚೇತರಿಸಿಕೊಂಡ ನಂತರ ಐದು ರೋಗಿಗಳಲ್ಲಿ ಪಿತ್ತಕೋಶದ ಗ್ಯಾಂಗ್ರೀನ್ ಕಂಡುಬಂದಿರುವ ಕುರಿತು ವರದಿ ಬಂದಿದೆ.

ದೆಹಲಿಯ ಸರ್ ಗಂಗಾ ರಾಮ್ ಆಸ್ಪತ್ರೆಯ ವೈದ್ಯರು ಭಾರತದಲ್ಲಿ ಇಂತಹ ಪ್ರಕರಣಗಳ ಮೊದಲ ವರದಿ ಮಾಡಿದ್ದು, ಇದು ವೈದ್ಯರಿಗೆ ಹೊಸ ಸವಾಲಾಗಿದೆ. ಜೂನ್ ಮತ್ತು ಆಗಸ್ಟ್ ನಡುವೆ ಐದು ಕೋವಿಡ್ ರೋಗಿಗಳಿಗೆ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ಚಿಕಿತ್ಸೆ ನೀಡಲಾಗಿತ್ತು. ಈ ಐವರಲ್ಲಿ ಇದೀಗ ಪಿತ್ತಕೋಶದ ಗ್ಯಾಂಗ್ರೀನ್ ಕಂಡುಬಂದಿದೆ ಎಂದು ಹೇಳಲಾಗಿದೆ.

ಈ ಐದು ರೋಗಿಗಳ ಪೈಕಿ ನಾಲ್ಕು ಪುರುಷರು ಮತ್ತು ಮಹಿಳೆಯರು ಸೇರಿದ್ದು, ಇವರೆಲ್ಲರ ವಯಸ್ಸು 37 ರಿಂದ 75 ರ ನಡುವೆ ಇದೆ ಎನ್ನಲಾಗಿದೆ. ಈ ಎಲ್ಲಾ ರೋಗಿಗಳು ಜ್ವರ, ಹೊಟ್ಟೆಯ ಬಲ ಮೇಲ್ಭಾಗದ ನೋವು ಮತ್ತು ವಾಂತಿಯಿಂದ ಬಳಲುತ್ತಿದ್ದರು.  ಈ ಪೈಕಿ ಇಬ್ಬರು ಮಧುಮೇಹ ಮತ್ತು ಒಬ್ಬರು ಹೃದ್ರೋಗದಿಂದ ಬಳಲುತ್ತಿದ್ದರು. ಕೋವಿಡ್-19 ರೋಗಲಕ್ಷಣಗಳ ನಿರ್ವಹಣೆಗಾಗಿ ಮೂವರು ರೋಗಿಗಳು ಸ್ಟಿರಾಯ್ಡ್‌ಗಳನ್ನು ಪಡೆದಿದ್ದರು ಎನ್ನಲಾಗಿದೆ.

ಈ ಬಗ್ಗೆ ಮಾತನಾಡಿರುವ ಆಸ್ಪತ್ರೆಯ ಯಕೃತ್ತಿನ ಸಂಸ್ಥೆ, ಗ್ಯಾಸ್ಟ್ರೋಎಂಟರಾಲಜಿ ಮತ್ತು ಪ್ಯಾಂಕ್ರಿಯಾಟಿಕೊಬಿಲಿಯರಿ ಸೈನ್ಸಸ್‌ನ ಅಧ್ಯಕ್ಷ ಡಾ.ಅನಿಲ್ ಅರೋರಾ ಅವರು, 'ನಾವು ಜೂನ್ ಮತ್ತು ಆಗಸ್ಟ್ ನಡುವೆ ಇಂತಹ ಐದು ರೋಗಿಗಳಿಗೆ ಯಶಸ್ವಿಯಾಗಿ ಚಿಕಿತ್ಸೆ ನೀಡಿದ್ದೇವೆ. ಕೋವಿಡ್ -19 ನಿಂದ ಚೇತರಿಸಿಕೊಂಡ ನಂತರ, ಈ ರೋಗಿಗಳಿಗೆ ಪಿತ್ತಕೋಶದಲ್ಲಿ ತೀವ್ರವಾದ ಪಿತ್ತಕೋಶದ ಉರಿಯೂತ ಉಂಟಾಗಿತ್ತು. ಇಂತಹ ಸಂದರ್ಭದಲ್ಲಿ ಪಿತ್ತಕೋಶದ ಗ್ಯಾಂಗ್ರೀನ್‌ಗೆ ತುರ್ತು ಶಸ್ತ್ರಚಿಕಿತ್ಸೆಯ ಅಗತ್ಯವಿರುತ್ತದೆ ಎಂದು ಹೇಳಿದರು.

ಅಂತೆಯೇ ಕೋವಿಡ್ -19 ಸೋಂಕಿನಿಂದ ಚೇತರಿಸಿಕೊಂಡ ನಂತರ ಪಿತ್ತಕೋಶದ ಗ್ಯಾಂಗ್ರೀನ್ ಪ್ರಕರಣಗಳು ವರದಿಯಾಗಿರುವುದು ಇದೇ ಮೊದಲು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಅಂತೆಯೇ ಕೇವಲ 10 ಪ್ರತಿಶತದಷ್ಟು ರೋಗಿಗಳು ಪಿತ್ತಕೋಶದ ಕಲ್ಲು ಅಥವಾ ಸಿಸ್ಟಿಕ್ ಡಕ್ಟ್ ತೊಂದರೆಯ ಪುರಾವೆಗಳಿಲ್ಲದೆ ಪಿತ್ತಕೋಶದ ಉರಿಯೂತವಾಗಿರುವ "ಅಕಾಲಕ್ಯುಲಸ್ ಕೊಲೆಸಿಸ್ಟೈಟಿಸ್" ಅನ್ನು ಹೊಂದಿದ್ದಾರೆ. ಕೋವಿಡ್ -19 ರೋಗಲಕ್ಷಣಗಳು ಮತ್ತು "ಅಕಾಲ್ಕುಲಸ್ ಕೊಲೆಸಿಸ್ಟೈಟಿಸ್" ನ ರೋಗನಿರ್ಣಯದ ನಡುವಿನ ಸರಾಸರಿ ಅವಧಿ ಎರಡು ತಿಂಗಳುಗಳಾಗಿದ್ದು, ಅಲ್ಟ್ರಾಸೌಂಡ್ ಮತ್ತು ಹೊಟ್ಟೆಯ CT ಸ್ಕ್ಯಾನ್ ಮೂಲಕ ರೋಗನಿರ್ಣಯವನ್ನು ದೃಢಪಡಿಸಬಹುದಾಗಿದೆ. ಈ ಎಲ್ಲಾ ರೋಗಿಗಳಿಗೆ ಯಶಸ್ವಿಯಾಗಿ ಲ್ಯಾಪ್ರೊಸ್ಕೋಪಿಕ್ ನೆಕ್ರೋಟಿಕ್ ಮೂಲಕ ಸೋಂಕಿತ ಪಿತ್ತಕೋಶವನ್ನು ತೆಗೆಯಲಾಗಿದೆ  ಎಂದು ಹೇಳಿದರು.

ಇದು ಸಾಮಾನ್ಯವಾಗಿ ಮಧುಮೇಹ, ಎಚ್‌ಐವಿ ಸೋಂಕು, ನಾಳೀಯ ರೋಗ, ದೀರ್ಘಕಾಲದ ಉಪವಾಸದಲ್ಲಿರುವವರು, ತೀವ್ರ ನಿಗಾ ಘಟಕಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವವರು ಮತ್ತು ಆಘಾತ, ಸುಟ್ಟಗಾಯಗಳು ಮತ್ತು ಸೆಪ್ಸಿಸ್‌ಗಳ ಇತಿಹಾಸ ಹೊಂದಿರುವ ರೋಗಿಗಳಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತದೆ ಎಂದು ಆರೋರಾ ಹೇಳಿದರು. 

'ಪಿತ್ತಕೋಶದ ಎಪಿಥೇಲಿಯಲ್ ಕೋಶಗಳು ಪಿತ್ತರಸ ನಾಳದ ಕೋಶಗಳಿಗೆ ಹೋಲುತ್ತವೆ. SARS-CoV-2 ಅಥವಾ ವೈರಸ್ ವಿರುದ್ಧ ದೇಹದ ಅನಿಯಂತ್ರಿತ ಪ್ರತಿರಕ್ಷಣಾ ಪ್ರತಿಕ್ರಿಯೆಗೆ ಇದು ಗುರಿಯಾಗಬಹುದು. ಪಿತ್ತಕೋಶದ ತೀವ್ರವಾದ ಉರಿಯೂತಕ್ಕೂ ಇದು ಕಾರಣವಾಗುತ್ತದೆ ಎಂದು ವೈದ್ಯರು ಹೇಳಿದರು.

ಗ್ಯಾಸ್ಟ್ರೋಎಂಟರಾಲಜಿ ವಿಭಾಗದ ಹಿರಿಯ ಸಲಹೆಗಾರ ಡಾ. ಪ್ರವೀಣ್ ಶರ್ಮಾ ಅವರು ಮಾತನಾಡಿ, ಸಮಯೋಚಿತ ರೋಗನಿರ್ಣಯ ಮತ್ತು ಸ್ಪೆಕ್ಟ್ರಮ್ ಪ್ರತಿಜೀವಕಗಳ ಆರಂಭಿಕ ಹಸ್ತಕ್ಷೇಪವು ಗ್ಯಾಂಗ್ರೀನ್ ಮತ್ತು ಪಿತ್ತಕೋಶದ ರಂದ್ರದ ತೀವ್ರ ತೊಡಕುಗಳ ಬೆಳವಣಿಗೆಯನ್ನು ತಡೆಯಬಹುದು ಎಂದು ಹೇಳಿದರು.

ಪಿತ್ತಕೋಶದ ಕಲ್ಲಿನ ಸಮಸ್ಯೆಯು ಉತ್ತರ ಭಾರತದಲ್ಲಿ (ಸಾಮಾನ್ಯ ಜನಸಂಖ್ಯೆಯ ಶೇ.8ರಷ್ಟು) ಸಾಮಾನ್ಯ ಸಮಸ್ಯೆಯಾಗಿದೆ ಮತ್ತು ಕೊಲೆಸಿಸ್ಟೈಟಿಸ್ ಎಂದು ಕರೆಯಲ್ಪಡುವ ತೀವ್ರವಾದ ಉರಿಯೂತದ ಶೇ.90 ರಷ್ಟು ಪ್ರಕರಣಗಳಿಗೆ ಕಾರಣವಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com