ಮುಂಬೈ: ಅಶ್ಲೀಲ ಚಿತ್ರ ತಯಾರಿಕೆ ಪ್ರಕರಣದಲ್ಲಿ ಉದ್ಯಮಿ ಪತಿ ರಾಜ್ ಕುಂದ್ರಾ ವಿರುದ್ಧ ದಾಖಲಾಗಿರುವ ಒಂದೂವರೆ ಸಾವಿರ ಪುಟಗಳ ಚಾರ್ಜ್ಶೀಟ್ ನಲ್ಲಿ ಅವರ ಪತ್ನಿ ಬಾಲಿವುಡ್ ನಟಿ ಶಿಲ್ಪಾಶೆಟ್ಟಿ ಕೂಡ ತಮ್ಮ ಹೇಳಿಕೆ ದಾಖಲಿಸಿದ್ದಾರೆ ಎಂದು ಹೇಳಲಾಗಿದೆ.
ಅಶ್ಲೀಲ ಚಿತ್ರ ಪ್ರಕರಣ ವಿಚಾರವಾಗಿ ತನಿಖೆ ನಡೆಸುತ್ತಿರುವ ಮುಂಬೈ ಅಪರಾಧ ವಿಭಾಗದ ಪ್ರಾಪರ್ಟಿ ಸೆಲ್ ಬುಧವಾರ 1500 ಪುಟಗಳ ಪೂರಕ ಚಾರ್ಜ್ ಶೀಟ್ ಅನ್ನು ಎಸ್ ಪ್ಲನೇಡ್ ನ್ಯಾಯಾಲಯಕ್ಕೆ (Esplanade Court) ಸಲ್ಲಿಸಿದ್ದು, ಈ ಚಾರ್ಜ್ ಶೀಟ್ ನಲ್ಲಿ ರಾಜ್ ಕುಂದ್ರಾ ಪತ್ನಿ ಶಿಲ್ಪಾಶೆಟ್ಟಿ ಮತ್ತು ಈ ಹಿಂದೆ ಕಾಮಸೂತ್ರ 3ಡಿ ಚಿತ್ರದ ನಟಿ ಶೆರ್ಲಿನ್ ಚೋಪ್ರಾ, ಸೆಜಲ್ ಶಾ, ಹಲವು ಮಾಡೆಲ್ಗಳು ಸೇರಿದಂತೆ ಸುಮಾರು 43 ಸಾಕ್ಷಿಗಳ ಹೇಳಿಕೆಗಳನ್ನು ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
ಕುಂದ್ರಾ ಕಂಪನಿಯ ಉದ್ಯೋಗಿಗಳ ಹೇಳಿಕೆಗಳನ್ನೂ ಆರೋಪ ಪಟ್ಟಿಯಲ್ಲಿ ದಾಖಲಿಸಲಾಗಿದೆ. ಆರೋಪ ಪಟ್ಟಿಯಲ್ಲಿ ಪ್ರಕರಣದಲ್ಲಿ ಬೇಕಾಗಿರುವ ಇಬ್ಬರು ಆರೋಪಿಗಳ ಹೆಸರೂ ಇದೆ ಎನ್ನಲಾಗಿದೆ. ರಾಜ್ ಕುಂದ್ರಾ ಅವರನ್ನು ಅಶ್ಲೀಲ ಚಿತ್ರಗಳನ್ನು ನಿರ್ಮಿಸುತ್ತಿರುವ ಆರೋಪದಲ್ಲಿ ಜುಲೈ 19ರಂದು ಇತರ 11 ಮಂದಿಯೊಂದಿಗೆ ಬಂಧಿಸಲಾಗಿತ್ತು.
ಅಶ್ಲೀಲ ಚಿತ್ರಗಳ ನಿರ್ಮಾಣ ಮತ್ತು ಕೆಲವು ಅಪ್ಲಿಕೇಶನ್‌ಗಳ ಮೂಲಕ ಅವುಗಳನ್ನು ಪ್ರಕಟಿಸಿದ ಆರೋಪಕ್ಕೆ ಸಂಬಂಧಿಸಿದಂತೆ ರಾಜ್ ಕುಂದ್ರಾರನ್ನು ಜುಲೈನಲ್ಲಿ ಬಂಧಿಸಲಾಯಿತು. ಸಿಂಗಪುರದ ನಿವಾಸಿಯಾದ ಯಶ್ ಠಾಕೂರ್ ಮತ್ತು ಲಂಡನ್ ಮೂಲದ ಪ್ರದೀಪ್ ಬಕ್ಷಿ ಅವರನ್ನು ಇನ್ನಿಬ್ಬರು ಆರೋಪಿಗಳೆಂದು ಆರೋಪ ಪಟ್ಟಿಯಲ್ಲಿ ತೋರಿಸಲಾಗಿದೆ.
Advertisement