ದೆಹಲಿ: ಆಕ್ಸಿಜನ್ ಕೊರತೆಯಿಂದ ಗಂಗಾ ರಾಮ್ ಆಸ್ಪತ್ರೆಯಲ್ಲಿ 25 ರೋಗಿಗಳು ಸಾವು, 60 ಮಂದಿಯ ಜೀವ ಅಪಾಯದಲ್ಲಿ!

ದೇಶದ ರಾಜಧಾನಿ ದೆಹಲಿಯಲ್ಲಿ ಕೋವಿಡ್-19 ಸೋಂಕಿತರಿಗೆ ಚಿಕಿತ್ಸೆ ನೀಡಲು ಸರ್ಕಾರ ಹರಸಾಹಸಪಡುತ್ತಿದೆ. ಆಕ್ಸಿಜನ್, ಬೆಡ್ ಗಳ ಕೊರತೆಯಿದೆ ಎಂದು ಕಳೆದೊಂದು ವಾರದಿಂದ ಸ್ವತಃ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರೇ ಹೇಳುತ್ತಿದ್ದಾರೆ.
ದೆಹಲಿಯ ಗಂಗಾ ರಾಮ್ ಆಸ್ಪತ್ರೆ
ದೆಹಲಿಯ ಗಂಗಾ ರಾಮ್ ಆಸ್ಪತ್ರೆ

ನವದೆಹಲಿ: ದೇಶದ ರಾಜಧಾನಿ ದೆಹಲಿಯಲ್ಲಿ ಕೋವಿಡ್-19 ಸೋಂಕಿತರಿಗೆ ಚಿಕಿತ್ಸೆ ನೀಡಲು ಸರ್ಕಾರ ಹರಸಾಹಸಪಡುತ್ತಿದೆ. ಅಲ್ಲಿ ತುರ್ತು ಆರೋಗ್ಯ ಪರಿಸ್ಥಿತಿ ನಿರ್ಮಾಣವಾಗಿದೆ. ಆಕ್ಸಿಜನ್, ಬೆಡ್ ಗಳ ಕೊರತೆಯಿದೆ ಎಂದು ಕಳೆದೊಂದು ವಾರದಿಂದ ಸ್ವತಃ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರೇ ಹೇಳುತ್ತಿದ್ದಾರೆ. ಅದೀಗ ಅಕ್ಷರಶಃ ಎದ್ದು ಕಾಣುತ್ತಿದೆ.

ದೆಹಲಿಯ ಪ್ರಮುಖ ಆಸ್ಪತ್ರೆಯಾದ ಗಂಗಾ ರಾಮ್ ಆಸ್ಪತ್ರೆ ಮತ್ತು ಮ್ಯಾಕ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳು ತಮಗೆ ಆಕ್ಸಿಜನ್ ಟ್ಯಾಂಕರ್ ಕಳುಹಿಸಿಕೊಡಿ ಎಂದು ಸರ್ಕಾರಕ್ಕೆ ಎಸ್ಒಎಸ್ (Save Our Souls) ಕಳುಹಿಸಿವೆ.

ದೆಹಲಿಯ ಖ್ಯಾತ ಸರ್ ಗಂಗಾ ರಾಮ್ ಆಸ್ಪತ್ರೆಯಲ್ಲಿ ಕಳೆದ 24 ಗಂಟೆಗಳಲ್ಲಿ 25 ತೀವ್ರ ಅನಾರೋಗ್ಯಪೀಡಿತ ರೋಗಿಗಳು ಆಕ್ಸಿಜನ್ ಕೊರತೆಯಿಂದ ಮೃತಪಟ್ಟಿದ್ದಾರೆ. ಇಂದು ಸರ್ಕಾರಕ್ಕೆ ಎಸ್ಎಎಸ್ ನ್ನು ಕಳುಹಿಸಿರುವ ಆಸ್ಪತ್ರೆ ಇನ್ನು ಕೇವಲ ಎರಡು ಗಂಟೆಗಳವರೆಗೆ ರೋಗಿಗಳಿಗೆ ಆಕ್ಸಿಜನ್ ನೀಡಲು ವ್ಯವಸ್ಥೆಯಿದ್ದು 60 ಮಂದಿ ರೋಗಿಗಳ ಜೀವ ತೀವ್ರ ಅಪಾಯದಲ್ಲಿದೆ ಎಂದು ಹೇಳಿದೆ.

ಆಸ್ಪತ್ರೆಯಲ್ಲಿ ಕಳೆದ 24 ಗಂಟೆಗಳಲ್ಲಿ 25 ರೋಗಿಗಳು ಮೃತಪಟ್ಟಿದ್ದಾರೆ. ಇನ್ನು ಎರಡು ಗಂಟೆಯಲ್ಲಿ ಆಕ್ಸಿಜನ್ ಮುಗಿಯಲಿದೆ. ವೆಂಟಿಲೇಟರ್ ಗಳು ಮತ್ತು ಬಿಪಾಪ್ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಆಕ್ಸಿಜನ್ ನ್ನು ತುರ್ತಾಗಿ ಏರ್ ಲಿಫ್ಟ್ ಮೂಲಕ ಆಸ್ಪತ್ರೆಗೆ ವ್ಯವಸ್ಥೆ ಮಾಡಿ. ಇನ್ನೂ 60 ರೋಗಿಗಳ ಜೀವ ಗಂಡಾಂತರದಲ್ಲಿದೆ ಎಂದು ಸರ್ ಗಂಗಾ ರಾಮ್ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರು ಮನವಿ ಮಾಡಿಕೊಂಡಿದ್ದಾರೆ.

ಆಸ್ಪತ್ರೆಯ ಅಧಿಕಾರಿಗಳು ಹೇಳುವ ಪ್ರಕಾರ, ಇಲ್ಲಿ 510ಕ್ಕೂ ಅಧಿಕ ಕೋವಿಡ್ ರೋಗಿಗಳು ದಾಖಲಾಗಿದ್ದು ಅವರಲ್ಲಿ 142 ಮಂದಿ ಅಧಿಕ ಆಕ್ಸಿಜನ್ ನ ಅಗತ್ಯವಿರುವವರಾಗಿದ್ದಾರೆ.

ರಾಜಧಾನಿ ದೆಹಲಿ ಸೇರಿದಂತೆ ದೇಶದ ಹಲವು ಭಾಗಗಳಲ್ಲಿ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಕೊರತೆ ತೀವ್ರವಾಗಿ ಕಾಡುತ್ತಿದೆ. ಕೋವಿಡ್ ರೋಗಿಗಳಿಗೆ ದಾಖಲಾಗಲು ಬೆಡ್ ಸಿಗುತ್ತಿಲ್ಲ. ಅಗತ್ಯ ವೈದ್ಯಕೀಯ ಸೌಲಭ್ಯಗಳ ಕೊರತೆಯುಂಟಾಗಿದೆ. ಕೋವಿಡ್ ಸೋಂಕಿತರಿಗೆ ಆಕ್ಸಿಜನ್ ಬಹಳ ಮುಖ್ಯವಾಗಿ ಬೇಕಾಗಿರುವುದೇ ಇಂದಿನ ಆರೋಗ್ಯ ತುರ್ತು ಪರಿಸ್ಥಿತಿಯ ಸನ್ನಿವೇಶವಾಗಿದೆ.

ಆಕ್ಸಿಜನ್ ಟ್ಯಾಂಕರ್ ಆಗಮನ: ತುರ್ತಾಗಿ ಆಕ್ಸಿಜನ್ ಪೂರೈಕೆ ಮಾಡಿ ಎಂದು ಆಸ್ಪತ್ರೆ ಕೇಳಿಕೊಂಡ ಹಿನ್ನೆಲೆಯಲ್ಲಿ ದೆಹಲಿ ಸರ್ಕಾರ ವ್ಯವಸ್ಥೆ ಮಾಡಿ ಆಕ್ಸಿಜನ್ ಕಳುಹಿಸಿದ್ದು ಆಕ್ಸಿಜನ್ ಟ್ಯಾಂಕರ್ ಗಳು ಆಗಮಿಸಿವೆ. 

ಇನ್ನು ದೆಹಲಿಯ ಮ್ಯಾಕ್ಸ್ ಸ್ಮಾರ್ಟ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸಹ ತುರ್ತಾಗಿ ಆಕ್ಸಿಜನ್ ಕಳುಹಿಸಿಕೊಡುವಂತೆ ಎಸ್ ಒಎಸ್ ಕಳುಹಿಸಿದ ಹಿನ್ನೆಲೆಯಲ್ಲಿ ಆಕ್ಸಿಜನ್ ಟ್ಯಾಂಕರ್ ಆಗಮನವಾಗಿದೆ ಎಂದು ದೆಹಲಿ ದಕ್ಷಿಣ ವಿಭಾಗದ ಡಿಸಿಪಿ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com