ಅವಿಭಜಿತ ಆಂಧ್ರ ಪ್ರದೇಶ ಮಾಜಿ ಸಚಿವ ಎಂ.ಸತ್ಯನಾರಾಯಣ ರಾವ್ ನಿಧನ

ಅವಿಭಜಿತ ಆಂಧ್ರ ಪ್ರದೇಶ ಮಾಜಿ ಸಚಿವ, ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಎಂ.ಸತ್ಯನಾರಾಯಣ ರಾವ್ (88) ನಿಧನರಾಗಿದ್ದಾರೆ.
ಎಂ.ಸತ್ಯನಾರಾಯಣ ರಾವ್
ಎಂ.ಸತ್ಯನಾರಾಯಣ ರಾವ್

ಹೈದರಾಬಾದ್: ಅವಿಭಜಿತ ಆಂಧ್ರ ಪ್ರದೇಶ ಮಾಜಿ ಸಚಿವ, ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಎಂ.ಸತ್ಯನಾರಾಯಣ ರಾವ್ (88) ನಿಧನರಾಗಿದ್ದಾರೆ.

ತೆಲಂಗಾಣ ಪಿಸಿಸಿ ಮಾಜಿ ಅಧ್ಯಕ್ಷ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ಕಾಂಗ್ರೆಸ್ ಹಿರಿಯ ಮುಖಂಡರಾಗಿದ್ದ ಎಂ.ಸತ್ಯನಾರಾಯಣ ರಾವ್ ಅವರು ಕೋವಿಡ್-19 ಸೋಂಕಿನಿಂದಾಗಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಕೋವಿಡ್-19 ಸೋಂಕಿಗೆ ತುತ್ತಾಗಿದ್ದ ಅವರನ್ನು ನಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ ರಾತ್ರಿ 2: 45 ಕ್ಕೆ ಅವರು ನಿಧನರಾದರು ಎಂದು ತಿಳಿದುಬಂದಿದೆ. ಸತ್ಯನಾರಾಯಣ ರಾವ್ ಅವರ ಅಂತ್ಯಕ್ರಿಯೆಯನ್ನು ಇಂದು ಮಧ್ಯಾಹ್ನ ಜುಬಿಲಿ ಹಿಲ್ಸ್ ನ ಮಹಾಪ್ರಸ್ಥಾನ ಸ್ಮಶಾನದಲ್ಲಿ ನಡೆಸಲು ಕುಟುಂಬ ಸದಸ್ಯರು  ನಿರ್ಧರಿಸಿದ್ದಾರೆ. ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿ ಎಂಎಸ್ಆರ್ ಎಂದೇ ಖ್ಯಾತರಾಗಿದ್ದ ಸತ್ಯನಾರಾಯಣ ರಾವ್ ಅವರು ಜನವರಿ 14, 1934 ರಂದು ಕರೀಂನಗರ ಜಿಲ್ಲೆಯ ವೇದೈರ್ ಗ್ರಾಮದಲ್ಲಿ ಜನಿಸಿದರು. 1980 ರಿಂದ '83 ರವರೆಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ಗರು.

1969 ರ ಆರಂಭದಲ್ಲಿ ತೆಲಂಗಾಣ ಚಳವಳಿಯಲ್ಲಿ ಭಾಗವಹಿಸಿದರು. 1971 ರಲ್ಲಿ ಅವರು ತೆಲಂಗಾಣ ಪ್ರಜಾ ಸಮಿತಿ ಸಂಸದರಾಗಿ ಗೆದ್ದರು. ನಂತರ ಅವರು ಕಾಂಗ್ರೆಸ್ ಸಂಸದರಾಗಿ ಇನ್ನೂ ಎರಡು ಭಾರಿ ಸಂಸದರಾಗಿ ಆಯ್ಕೆಯಾಗಿದ್ದರು. ಸತತ 14 ವರ್ಷಗಳ ಕಾಲ ಸಂಸದರಾಗಿ ಸೇವೆ ಸಲ್ಲಿಸಿದ ಕೀರ್ತಿ  ಅವರದ್ದು. ನಾಗಾರ್ಜುನ ಸಾಗರ ಅಣೆಕಟ್ಟು ಯೋಜನೆ ಉದ್ಘಾಟನೆಯ ಸಮಯದಲ್ಲಿ ರಾವ್ ಅವರು ಅಂದಿನ ಪ್ರಧಾನಿ ಜವಾಹರಲಾಲ್ ನೆಹರೂ ಅವರನ್ನು ಭೇಟಿಯಾಗಿ ತೆಲಂಗಾಣದ ರಾಜಕೀಯದ ಬಗ್ಗೆ ಚರ್ಚಿಸಿದ್ದರು. ತೆಲಂಗಾಣ ರಾಜ್ಯವನ್ನು ಆಂಧ್ರಪ್ರದೇಶದೊಂದಿಗೆ ವಿಲೀನಗೊಳಿಸುವುದನ್ನು ಅವರು ತೀವ್ರವಾಗಿ  ವಿರೋಧಿಸಿದ್ದರು. ಇನ್ನು ಎಂಎಸ್ಆರ್ 2000 ರಿಂದ 2004 ರವರೆಗೆ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ಎಂ.ಸತ್ಯನಾರಾಯಣ ರಾವ್ ಅವರು 2004 ರಿಂದ 2007 ರವರೆಗೆ ಅವಿಭಜಿತ ಆಂಧ್ರ ಪ್ರದೇಶದ ವೈಎಸ್ ರಾಜಶೇಖರ ರೆಡ್ಡಿ ಸರ್ಕಾರದಲ್ಲಿ ಸಚಿವರಾಗಿ ಮತ್ತು 2007 ರ ನಂತರ  ಆರ್‌ಟಿಸಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು.

ತೆಲುಗು ಚಿತ್ರವೊಂದರಲ್ಲೂ ನಟಿಸಿದ್ದ ರಾವ್ ಅವರು. ತೆಲುಗಿನ 'ಚಿವರಕು ಮಿಗಿಲೇದಿ' ಚಿತ್ರದಲ್ಲಿ ಸುಪ್ರೀಂ ಕೋರ್ಟ್ ವಕೀಲರಾಗಿ ನಟಿಸಿದ್ದರು. ಅಂತೆಯೇ ಅದೇ ಚಿತ್ರಕ್ಕೆ ಸಹ ನಿರ್ಮಾಪಕರಾಗಿದ್ದರು. 

ಇನ್ನು ಎಂಎಸ್ ಆರ್ ಅವರ ನಿಧನಕ್ಕೆ ಟಿಪಿಸಿಸಿ ಅಧ್ಯಕ್ಷ ಉತ್ತಮ್ ಕುಮಾರ್ ರೆಡ್ಡಿ, ಕಾರ್ಯಕಾರಿ ಅಧ್ಯಕ್ಷ ಪೊನ್ನಮ್ ಪ್ರಭಾಕರ್, ಪಿಸಿಸಿ ಮಾಜಿ ಅಧ್ಯಕ್ಷ ಪೊನ್ನಳ ಲಕ್ಷ್ಮಯ್ಯ ಮತ್ತು ಸಿಎಲ್ ಪಿ ಮಾಜಿ ನಾಯಕ ಜನರೆಡ್ಡಿ ಸತ್ಯನಾರಾಯಣ ರಾವ್ ಅವರು ಸಂತಾಪ ಸೂಚಿಸಿದ್ದಾರೆ.  
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com