ಪ್ರಜಾಪ್ರಭುತ್ವ, ಜಾತ್ಯತೀತತೆಯಲ್ಲಿ ನಂಬಿಕೆ ಇರುವವರು ಒಂದಾಗಬೇಕು: ಶರದ್ ಪವಾರ್
ಪ್ರಜಾಪ್ರಭುತ್ವ ಮತ್ತು ಜಾತ್ಯತೀತತೆಯಲ್ಲಿ ನಂಬಿಕೆ ಇರುವವರು ಒಂದಾಗಬೇಕು ಮತ್ತು "ಕಾಲಮಿತಿಯಲ್ಲಿ ಕ್ರಿಯಾ ಯೋಜನೆ" ರೂಪಿಸಬೇಕು ಎಂದು ಎನ್‌ಸಿಪಿ ವರಿಷ್ಠ ಶರದ್ ಪವಾರ್ ಅವರು ಶುಕ್ರವಾರ ಹೇಳಿದ್ದಾರೆ.
Published: 20th August 2021 08:36 PM | Last Updated: 20th August 2021 08:36 PM | A+A A-

ಎನ್'ಸಿಪಿ ಮುಖ್ಯಸ್ಥ ಶರದ್ ಪವಾರ್
ಮುಂಬೈ: ಪ್ರಜಾಪ್ರಭುತ್ವ ಮತ್ತು ಜಾತ್ಯತೀತತೆಯಲ್ಲಿ ನಂಬಿಕೆ ಇರುವವರು ಒಂದಾಗಬೇಕು ಮತ್ತು "ಕಾಲಮಿತಿಯಲ್ಲಿ ಕ್ರಿಯಾ ಯೋಜನೆ" ರೂಪಿಸಬೇಕು ಎಂದು ಎನ್‌ಸಿಪಿ ವರಿಷ್ಠ ಶರದ್ ಪವಾರ್ ಅವರು ಶುಕ್ರವಾರ ಹೇಳಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಇಂದು ಕರೆದಿದ್ದ ವಿರೋಧ ಪಕ್ಷಗಳ ನಾಯಕರ ವರ್ಚುವಲ್ ಸಭೆಯಲ್ಲಿ ಭಾಗವಹಿಸಿದ ನಂತರ ಟ್ವೀಟ್ ಮಾಡಿರುವ ಶರದ್ ಪವಾರ್ ಅವರು, ದೇಶದ ಪ್ರಸ್ತುತ ಸನ್ನಿವೇಶಗಳನ್ನು ಗಮನದಲ್ಲಿಟ್ಟುಕೊಂಡು ಸಮಾನ ಮನಸ್ಕ ಪಕ್ಷಗಳ ಸಭೆಯನ್ನು ಆಯೋಜಿಸುವ ಕ್ರಮ ಶ್ಲಾಘನೀಯ ಎಂದು ಹೇಳಿದ್ದಾರೆ.
"ಭಾರತದ ಪ್ರಸ್ತುತ ಸನ್ನಿವೇಶವು ತುಂಬಾ ಮಂಕಾಗಿ ಕಾಣುತ್ತಿದೆ. ರೈತರು ಹಲವು ತಿಂಗಳುಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ, ಇದು ಭಾರತದಂತಹ ಪ್ರಜಾಪ್ರಭುತ್ವ ರಾಷ್ಟ್ರಕ್ಕೆ ನೋವಿನ ಸಂಗತಿ. ದೇಶ ಹಣದುಬ್ಬರ, ಆರ್ಥಿಕ ಕುಸಿತ, ಕೋವಿಡ್ ತಗ್ಗಿಸುವಿಕೆ, ನಿರುದ್ಯೋಗ, ಗಡಿ ವಿವಾದಗಳು, ಅಲ್ಪಸಂಖ್ಯಾತ ಸಮುದಾಯಗಳು ಸೇರಿದಂತೆ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದೆ" ಎಂದು ಮಾಜಿ ಕೇಂದ್ರ ಸಚಿವ ಟ್ವೀಟ್ ಮಾಡಿದ್ದಾರೆ.
ಪ್ರಸ್ತುತ ಸರ್ಕಾರ ಈ ಸಮಸ್ಯೆಗಳನ್ನು ಪರಿಹರಿಸಲು ವಿಫಲವಾಗಿದೆ ಎಂದ ಅವರು, "ಪ್ರಜಾಪ್ರಭುತ್ವ ಮತ್ತು ಜಾತ್ಯತೀತತೆಯಲ್ಲಿ ನಂಬಿಕೆ ಇಟ್ಟವರು, ನಮ್ಮ ದೇಶದ ಪ್ರಜಾಪ್ರಭುತ್ವ ತತ್ವಗಳನ್ನು ಉಳಿಸಲು ಒಟ್ಟಾಗಿ ಕೆಲಸ ಮಾಡಲು ಇಷ್ಟಪಡುವವರು ಒಗ್ಗಟ್ಟಾಗಿ ಬರಬೇಕು" ಎಂದು ಪವಾರ್ ಹೇಳಿದ್ದಾರೆ.