ಪ್ರಧಾನಿ ಮೋದಿ
ಪ್ರಧಾನಿ ಮೋದಿ

ಕೊರೋನಾ ಸಾಂಕ್ರಾಮಿಕದ ವಿರುದ್ಧದ ಹೋರಾಟ ಕುರಿತು ಚರ್ಚಿಸಲು ಅಧಿವೇಶನದಲ್ಲಿ ಹೆಚ್ಚಿನ ಆದ್ಯತೆ ನೀಡಬೇಕು: ಪ್ರಧಾನಿ ಮೋದಿ

ಕೊರೋನಾ ಸಾಂಕ್ರಾಮಿಕ ರೋಗ ಇಡೀ ವಿಶ್ವವನ್ನು ಕಾಡುತ್ತಿದ್ದು, ಕೋವಿಡ್ ವಿರುದ್ಧದ ಹೋರಾಟ ಕುರಿತು ಚರ್ಚಿಸಲು ಸಂಸತ್ ಅಧಿವೇಶನದಲ್ಲಿ ಹೆಚ್ಚಿನ ಆದ್ಯತೆ ನೀಡಬೇಕೆಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸೋಮವಾರ ಹೇಳಿದ್ದಾರೆ. 
Published on

ನವದೆಹಲಿ: ಕೊರೋನಾ ಸಾಂಕ್ರಾಮಿಕ ರೋಗ ಇಡೀ ವಿಶ್ವವನ್ನು ಕಾಡುತ್ತಿದ್ದು, ಕೋವಿಡ್ ವಿರುದ್ಧದ ಹೋರಾಟ ಕುರಿತು ಚರ್ಚಿಸಲು ಸಂಸತ್ ಅಧಿವೇಶನದಲ್ಲಿ ಹೆಚ್ಚಿನ ಆದ್ಯತೆ ನೀಡಬೇಕೆಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸೋಮವಾರ ಹೇಳಿದ್ದಾರೆ. 

ಸಂಸತ್ತಿನ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಲಸಿಕೆಯನ್ನು ಬಾಹು (ತೋಳು)ಗಳಿಗೆ ನೀಡಲಾಗಿದೆ. ಲಸಿಕೆ ಪಡೆದುಕೊಂಡವರು ಬಾಹುಬಲಿಗಳಾಗಿದ್ದಾರೆ. ದೇಶದಲ್ಲಿನ 40 ಕೋಟಿ ಜನರು ಬಾಹುಬಲಿಗಳಾಗಿದ್ದಾರೆ. ಇದರಂತೆ ಲಸಿಕೆ ಪಡೆದ ಜನರಲ್ಲಿ ಸೋಂಕಿನ ವಿರುದ್ಧ ಹೋರಾಟಡಲು ತೋಳ್ಬಲ ಹೆಚ್ಚಾದಂತಾಗಿದೆ ಎಂದು ಹೇಳಿದ್ದಾರೆ. 

ಕೊರೋನಾ ಸಾಂಕ್ರಾಮಿಕ ರೋಗ ಇಡೀ ವಿಶ್ವವನ್ನು ವ್ಯಾಪಿಸಿದ್ದು, ಕೊರೊನಾವೈರಸ್ ಕುರಿತು ಸಂಸತ್ ಅಧಿವೇಶನದಲ್ಲಿ ಅರ್ಥಪೂರ್ಣ ಚರ್ಚೆ ನಡೆಸಬೇಕಾಗಿದೆ. ಹೀಗಾಗಿ ಕೇಂದ್ರ ಸರ್ಕಾರಕ್ಕೆ ಅತ್ಯಂತ ಕಠಿಣ ಮತ್ತು ತೀಕ್ಷ್ಣ ಪ್ರಶ್ನೆಗಳನ್ನು ಕೇಳುವಂತೆ, ಅದೇ ರೀತಿ ಸರ್ಕಾರಕ್ಕೆ ಉತ್ತರ ನೀಡುವುದಕ್ಕೂ ಅವಕಾಶ ನೀಡುವಂತೆ ಪ್ರತಿಪಕ್ಷದ ನಾಯಕರಲ್ಲಿ ನಾವು ಮನವಿ ಮಾಡಿಕೊಳ್ಳುತ್ತೇನೆ. ಈ ಮೂಲಕ ಸಂಸತ್ತಿನಲ್ಲಿ ಶಿಸ್ತುಬದ್ಧ ವಾತಾವರಣ ಕಾಪಾಡಿಕೊಳ್ಳಬೇಕಿದೆ ಎಂದು ತಿಳಿಸಿದ್ದಾರೆ.

ವಿರೋಧ ಪಕ್ಷದ ನಾಯಕರು ನಾಳೆ ಸಂಜೆ ಸ್ವಲ್ಪ ಸಮಯ ನೀಡುವುದಾದರೆ ಸಾಂಕ್ರಾಮಿಕ ರೋಗದ ಬಗ್ಗೆ ಎಲ್ಲಾ ರೀತಿಯ ವಿವರವಾದ ಮಾಹಿತಿಯನ್ನು ನೀಡಲು ನಾನು ಬಯಸುತ್ತೇನೆ. ಸಂಸತ್ತಿನ ಒಳಗೆ ಮತ್ತು ಸಂಸತ್ತಿನ ಹೊರಗಿನ ಎಲ್ಲಾ ನಾಯಕರೊಂದಿಗೆ ಚರ್ಚಿಸಲು ನಾವು ಬಯಸುತ್ತಿದ್ದೇವೆಂದು ಎಂದು ಹೇಳಿದ್ದಾರೆ. 

ಈ ನಡುವೆ ಲೋಕಸಭಾ ಸ್ವೀಕರ್ ಓಂ ಬಿರ್ಲಾ ಅವರು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿದ್ದು, ಜನರು ತಮ್ಮ ನಿರೀಕ್ಷೆ ಮತ್ತು ಭರವಸೆಗಳನ್ನು ಸಂಸತ್ತಿನ ಮೂಲಕ ಸರ್ಕಾರವನ್ನು ತಲುಪಬೇಕೆಂದು ಬಯಸುತ್ತಾರೆ. ಈ ದಿಕ್ಕಿನಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ಸಕಾರಾತ್ಮಕ ಪಾತ್ರ ವಹಿಸುತ್ತವೆ ಎಂದು ನಾನು ಭಾವಿಸುತ್ತೇನೆಂದು ಹೇಳಿದ್ದಾರೆ.

ಸಂಸತ್ ಅಧಿವೇಶನ ಆರಂಭವಾಗಿದ್ದು, ವೈಎಸ್ಆರ್ ಸಿಪಿ ಮದ್ದಿಲ ಗುರುಮೂರ್ತಿ, ಬಿಜೆಪಿ ಮಂಗಳಾ ಸುರೇಶ್, ಐಯುಎಂಎಲ್ ಅಬ್ದುಸಮ್ಮಾದ್ ಸಮದಾನ್ ಮತ್ತು ಕಾಂಗ್ರೆಸ್ಸಿನ ವಿಜಯ್ ವಸಂತ್ ಲೋಕಸಭೆ ಸದಸ್ಯರಾಗಿ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ.

ಇದೇ ವೇಳೆ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಪಕ್ಷದ ಅಬ್ದುಲ್ ವಹಾಬ್ ರಾಜ್ಯಸಭಾ ಸದಸ್ಯರಾಗಿ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com