ಕರ್ನಾಟಕದ ಬೆನ್ನಲ್ಲೇ ತಮಿಳುನಾಡಿನಲ್ಲೂ ದ್ವಿತೀಯ ಪಿಯುಸಿ ಪರೀಕ್ಷೆ ರದ್ದು; ಅಂಕ ನೀಡಿಕೆಗೆ ಸಮಿತಿ ರಚನೆ

ಮಾರಕ ಕೊರೋನಾ ವೈರಸ್ ಸಾಂಕ್ರಾಮಿಕದ 2ನೇ ಅಲೆಯ ಹಿನ್ನಲೆಯಲ್ಲಿ ತಮಿಳುನಾಡು ಸರ್ಕಾರ 12ನೇ ತರಗತಿ ಅಥವಾ ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ರದ್ದು ಮಾಡಿದೆ.
ಸಿಎಂ ಎಂ ಕೆ ಸ್ಟಾಲಿನ್
ಸಿಎಂ ಎಂ ಕೆ ಸ್ಟಾಲಿನ್

ಚೆನ್ನೈ: ಮಾರಕ ಕೊರೋನಾ ವೈರಸ್ ಸಾಂಕ್ರಾಮಿಕದ 2ನೇ ಅಲೆಯ ಹಿನ್ನಲೆಯಲ್ಲಿ ತಮಿಳುನಾಡು ಸರ್ಕಾರ 12ನೇ ತರಗತಿ ಅಥವಾ ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ರದ್ದು ಮಾಡಿದೆ.

ಈ ಕುರಿತಂತೆ ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್ ಅವರು ಮಾಹಿತಿ ನೀಡಿದ್ದು, ಮಕ್ಕಳ ಆರೋಗ್ಯದ ಮುಂಜಾಗ್ರತೆ ದೃಷ್ಟಿಯಿಂದ ದ್ವೀತಿಯ ಪಿಯುಸಿ ಪರೀಕ್ಷೆಗಳನ್ನು ರದ್ದು ಮಾಡಲಾಗಿದೆ. ಪರೀಕ್ಷೆಯನ್ನು ಮತ್ತಷ್ಟು ಮುಂದೂಡುವುದು ವಿದ್ಯಾರ್ಥಿಗಳ ಮೇಲೆ ಮಾನಸಿಕವಾಗಿ ಪರಿಣಾಮ ಬೀರುತ್ತದೆ ಎಂದು ವೈದ್ಯರು  ಅಭಿಪ್ರಾಯಪಟ್ಟಿದ್ದಾರೆ. ವೈದ್ಯಕೀಯ ಸಲಹೆ ಮತ್ತು ಇತರೆ ಶಿಫಾರಸುಗಳ ಆಧಾರದ ಮೇಲೆ ರಾಜ್ಯ ಸರ್ಕಾರ ಹನ್ನೆರಡನೇ ತರಗತಿಯ ರಾಜ್ಯ ಮಂಡಳಿ ಪರೀಕ್ಷೆಗಳನ್ನು ರದ್ದುಗೊಳಿಸಿದೆ ಎಂದು ಹೇಳಿದರು.

ಅಂತೆಯೇ ಮಕ್ಕಳ ಶೈಕ್ಷಣಿಕ ಭವಿಷ್ಯದ ದೃಷ್ಟಿಯಿಂದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಅಂಕಗಳನ್ನು ನೀಡುವ ವಿಧಾನಗಳ ಬಗ್ಗೆ ನಿರ್ಧರಿಸಲು ರಾಜ್ಯ ಸರ್ಕಾರ ಶಾಲಾ ಶಿಕ್ಷಣ ಕಾರ್ಯದರ್ಶಿ ಕಾಕರ್ಲಾ ಉಷಾ ನೇತೃತ್ವದ ಸಮಿತಿಯನ್ನು ರಚಿಸಿದೆ. ಸಮಿತಿಯ ವರದಿಯ ಆಧಾರದ ಮೇಲೆ ಅಂಕಗಳನ್ನು  ನೀಡಲಾಗುವುದು ಮತ್ತು ಈ ಅಂಕಗಳ ಆಧಾರದ ಮೇಲೆ ಪ್ರವೇಶ ನೀಡಲಾಗುವುದು ಎಂದು ಸ್ಟಾಲಿನ್ ಹೇಳಿದರು.

ನೀಟ್ ಪರೀಕ್ಷೆ ಸಾಧ್ಯವಿಲ್ಲ
ಕೋವಿಡ್-19 ಸಾಂಕ್ರಾಮಿಕ ರೋಗದ ದೃಷ್ಟಿಯಿಂದ ರಾಜ್ಯ ಸರ್ಕಾರ ಬೋರ್ಡ್ ಪರೀಕ್ಷೆಗಳನ್ನು ರದ್ದುಗೊಳಿಸಿದ್ದರಿಂದ ನೀಟ್ ನಂತಹ ಅಖಿಲ ಭಾರತ ಪ್ರವೇಶ ಪರೀಕ್ಷೆಗಳನ್ನು ನಡೆಸಲು ಸಾಧ್ಯವಿಲ್ಲ ಎಂದು ಅವರು ಹೇಳಿದರು. ಎಲ್ಲಾ ಪ್ರವೇಶ ಪರೀಕ್ಷೆಗಳನ್ನು ರದ್ದುಗೊಳಿಸುವಂತೆ ನಾನು ಪ್ರಧಾನಿ ಮೋದಿಗೆ ಪತ್ರ  ಬರೆದಿದ್ದೇನೆ. ವಿದ್ಯಾರ್ಥಿಗಳ ಆರೋಗ್ಯದ ಕಾರಣದಿಂದಾಗಿ ಪರೀಕ್ಷೆಗಳು ರದ್ದಾಗಿದ್ದರೂ ಉನ್ನತ ಶಿಕ್ಷಣಕ್ಕೆ ದಾಖಲಾತಿ ಪರಿಣಾಮ ಬೀರದಂತೆ ಕ್ರಮ ಕೈಗೊಳ್ಳುತ್ತೇವೆ ಎಂದು ಸ್ಟಾಲಿನ್ ಹೇಳಿದರು.

18 ವರ್ಷದೊಳಗಿನ ವಿದ್ಯಾರ್ಥಿಗಳಿಗೆ ಲಸಿಕೆ ಸಾಧ್ಯವಿಲ್ಲ
ಇದೇ ವೇಳೆ 18 ವರ್ಷದೊಳಗಿನ ವಿದ್ಯಾರ್ಥಿಗಳಿಗೆ ಲಸಿಕೆ ನೀಡಿಕೆ ಸಾಧ್ಯವಿಲ್ಲ ಎಂದು ಹೇಳಿರುವ ಸ್ಟಾಲಿನ್, 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಿಕೆಗೆ ಸರ್ಕಾರ ಕ್ರಮ ಕೈಗೊಂಡಿದೆ ಎಂದು ಹೇಳಿದರು.

ಪರೀಕ್ಷೆಗಳನ್ನು ನಡೆಸುವ ಬಗ್ಗೆ ರಾಜ್ಯ ಸರ್ಕಾರ ಕಳೆದ ಮೂರು ದಿನಗಳಿಂದ ಪೋಷಕರು, ಶಿಕ್ಷಕರು, ಶಿಕ್ಷಣತಜ್ಞರು, ಆರೋಗ್ಯ ತಜ್ಞರು ಮತ್ತು ರಾಜಕೀಯ ಪಕ್ಷಗಳೊಂದಿಗೆ ಚರ್ಚೆ ನಡೆಸಿತ್ತು. ತಮಿಳುನಾಡು ಶಿಕ್ಷಣ ಸಚಿವ ಅನ್ಬಿಲ್ ಮಹೇಶ್ ಪೊಯ್ಯಮೊಳಿ ಶನಿವಾರ ಶಾಸಕಾಂಗ ಪಕ್ಷದ 13 ಪ್ರತಿನಿಧಿಗಳೊಂದಿಗೆ ಉನ್ನತ  ಮಟ್ಟದ ಸಭೆ ನಡೆಸಿ 12 ನೇ ತರಗತಿ ಮಂಡಳಿಯ ಪರೀಕ್ಷೆಗಳ ಕುರಿತು ಚರ್ಚಿಸಲು ವೈದ್ಯರು, ಪೋಷಕರು, ವಿದ್ಯಾರ್ಥಿಗಳು, ಮಾನಸಿಕ ಆರೋಗ್ಯ ತಜ್ಞರು ಮತ್ತು ಶಿಕ್ಷಕರೊಂದಿಗೆ ಚರ್ಚೆ ನಡೆಸಿದ್ದರು. ಪರೀಕ್ಷೆಗಳ ನಡೆಸುವ ಬಗ್ಗೆ ಮಿಶ್ರ ಅಭಿಪ್ರಾಯದ ಹೊರತಾಗಿಯೂ ಬಹುತೇಕ ಪೋಷಕರು ಮಕ್ಕಳ ಸುರಕ್ಷತೆಯನ್ನು  ಖಚಿತಪಡಿಸಿಕೊಳ್ಳಲು ಬಯಸಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com