ಏನಿದು 'ಬ್ರೇಕ್‌ಥ್ರೂ ಇನ್‌ಫೆಕ್ಷನ್'‌?: ಕೋವಿಡ್-19 ಲಸಿಕೆಯ ಎರಡು ಡೋಸ್‌ನಿಂದ ಅಧಿಕ ರಕ್ಷಣೆ ಹೇಗೆ?

ಕೋವಿಡ್-19 ಬ್ರೇಕ್‌ಥ್ರೂ ಇನ್‌ಫೆಕ್ಷನ್ ಸೋಂಕಿಗೆ ತುತ್ತಾಗುವ ಸೋಂಕಿತರಲ್ಲಿ ಲಸಿಕೆಯ ಎರಡು ಡೋಸ್‌ನಿಂದ ಅಧಿಕ ರಕ್ಷಣೆ ಸಿಗಲಿದೆ ಎಂದು ತಜ್ಞರು ಹೇಳಿದ್ದಾರೆ.
ಕೊರೋನಾ ವೈರಸ್
ಕೊರೋನಾ ವೈರಸ್

ನವದೆಹಲಿ: ಕೋವಿಡ್-19 ಬ್ರೇಕ್‌ಥ್ರೂ ಇನ್‌ಫೆಕ್ಷನ್ ಸೋಂಕಿಗೆ ತುತ್ತಾಗುವ ಸೋಂಕಿತರಲ್ಲಿ ಲಸಿಕೆಯ ಎರಡು ಡೋಸ್‌ನಿಂದ ಅಧಿಕ ರಕ್ಷಣೆ ಸಿಗಲಿದೆ ಎಂದು ತಜ್ಞರು ಹೇಳಿದ್ದಾರೆ.

ಕೋವಿಡ್‌ ಲಸಿಕೆಯ ಎರಡನೇ ಡೋಸ್‌ ತೆಗೆದುಕೊಂಡ ವ್ಯಕ್ತಿಯಲ್ಲಿ, 14 ದಿನಗಳ ನಂತರ ಸೋಂಕು ಕಾಣಿಸಿಕೊಳ್ಳಬಹುದು. ಆದರೆ, ಎರಡು ಡೋಸ್‌ಗಳನ್ನು ತೆಗೆದುಕೊಂಡ ಕಾರಣ ವ್ಯಕ್ತಿಗೆ ಸೋಂಕಿನಿಂದ ಅಧಿಕ ರಕ್ಷಣೆ ಸಿಗುವುದು ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ತು (ಐಸಿಎಂಆರ್‌)  ಬಿಡುಗಡೆ ಮಾಡಿರುವ ವರದಿಯಲ್ಲಿ ಹೇಳಲಾಗಿದೆ.

ಕೋವಿಡ್ ಲಸಿಕೆಯ ಎರಡೂ ಡೋಸ್ ಪಡೆದ ಹೊರತಾಗಿಯೂ ಸೋಂಕಿಗೆ ತುತ್ತಾದ ಸಂಖ್ಯೆ ಭಾರತದಲ್ಲಿ ಹೆಚ್ಚಿದ್ದು, ಭಾರತದಲ್ಲಿ ಈ ಪ್ರಮಾಣ ಶೇ.1.6ರಷ್ಟಿದ್ದು, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇಂತಹ ಪ್ರಕರಣಗಳು ಹೆಚ್ಚಿವೆ ಎಂದು ಅಧ್ಯಯನದಿಂದ ತಿಳಿದುಬಂದಿದೆ. ಪ್ರಮುಖವಾಗಿ ಭಾರತದಲ್ಲಿ ಮೊದಲು  ಪತ್ತೆಯಾದ B.1617.2 ಡೆಲ್ಚಾ ರೂಪಾಂತರವೇ ಸೋಂಕು ಪ್ರಸರಣ ಹೆಚ್ಚಾಗಲು ಕಾರಣ ಎಂದು ಹೇಳಲಾಗಿದೆ.

ಚಂಡೀಗಡ ಮೂಲದ ಪಿಜಿಐಎಂಇಆರ್‌, ದೆಹಲಿಯ ಎಐಐಎಂಎಸ್‌ ಹಾಗೂ ಇನ್ಸ್‌ಟಿಟ್ಯೂಟ್‌ ಫಾರ್ ಜಿನೋಮಿಕ್ಸ್‌ ಆ್ಯಂಡ್ ಇಂಟಿಗ್ರೇಟಿವ್ ಬಯೋಲಜಿ (ಐಜಿಐಬಿ) ಸಂಸ್ಥೆಗಳು ಈ ಅಧ್ಯಯನ ನಡೆಸಿದ್ದು, ಅಧ್ಯಯನ ವರದಿಯು ‘ನ್ಯೂ ಇಂಗ್ಲಂಡ್‌ ಜರ್ನಲ್‌ ಆಫ್‌ ಮೆಡಿಸಿನ್‌’ನಲ್ಲಿ ಪ್ರಕಟವಾಗಿದೆ.

ಇಷ್ಟಕ್ಕೂ ಏನಿದು ಬ್ರೇಕ್‌ಥ್ರೂ ಇನ್‌ಫೆಕ್ಷನ್?
ಲಸಿಕೆಯ ಎರಡು ಡೋಸ್‌ಗಳನ್ನು ತೆಗೆದುಕೊಂಡ ವ್ಯಕ್ತಿಯಲ್ಲಿ ಕೋವಿಡ್‌ ದೃಢಪಟ್ಟರೆ ಅದನ್ನು ‘ಬ್ರೇಕ್‌ಥ್ರೂ ಇನ್‌ಫೆಕ್ಷನ್‌’ ಎಂದು ಕರೆಯಲಾಗುತ್ತದೆ. ಆರೋಗ್ಯ ಕಾರ್ಯಕರ್ತರು ‘ಬ್ರೇಕ್‌ಥ್ರೂ ಇನ್‌ಫೆಕ್ಷನ್‌’ಗೆ ಒಳಗಾಗುವ ಅಪಾಯ ಹೆಚ್ಚು. ಆದರೆ, ಲಸಿಕೆಯ ಎರಡು ಡೋಸ್‌ಗಳನ್ನು ಪಡೆಯುವ ಮೂಲಕ ಅವರಿಗೆ ಇಂಥ  ಸೋಂಕಿನಿಂದ ರಕ್ಷಣೆ ಸಿಗಲಿದೆ ಎಂದು ಮೂರು ಪ್ರತ್ಯೇಕ ಅಧ್ಯಯನಗಳಿಂದ ತಿಳಿದು ಬಂದಿದೆ. ‘ಬ್ರೇಕ್‌ಥ್ರೂ ಇನ್‌ಫೆಕ್ಷನ್‌’ಗೆ ಸಂಬಂಧಿಸಿ ದೇಶದಲ್ಲಿ ನಡೆದ ಬೃಹತ್‌ ಸಮೀಕ್ಷೆಯೂ ಇದಾಗಿದೆ.

12,248 ಆರೋಗ್ಯ ಕಾರ್ಯಕರ್ತರಲ್ಲಿ ಪರೀಕ್ಷೆ
ಈ ಅಧ್ಯಯನಕ್ಕಾಗಿ ಒಟ್ಟು 12,248 ಆರೋಗ್ಯ ಕಾರ್ಯಕರ್ತರನ್ನು ಬಳಸಿಕೊಳ್ಳಲಾಗಿದ್ದು, ಈ ಪೈಕಿ 7170 ಮೊದಲ ಡೋಸ್ ಪಡೆದಿದ್ದರೆ, 3650 ಮಂದಿ ಕಾರ್ಯಕರ್ತರು 2ನೇ ಡೋಸ್ ಕೋವಿಡ್ ಲಸಿಕೆ ಪಡೆದವರಾಗಿದ್ದರು. 7170 ಆರೋಗ್ಯ ಕಾರ್ಯಕರ್ತರಲ್ಲಿ (2.6%) ಒಟ್ಟು 184 ಮಂದಿ ಲಸಿಕೆ ಪಡೆದ ನಂತರ  ಸೋಂಕಿಗೆ ತುತ್ತಾಗಿದ್ದು, ಮೊದಲ ಡೋಸ್ ಲಸಿಕೆ ಸ್ವೀಕರಿಸಿದ ಮತ್ತು ಸೋಂಕಿಗೆ ತುತ್ತಾದ ನಡುವಿನ ಸರಾಸರಿ ಸಮಯ 44 ದಿನಗಳು ಮತ್ತು ಅಂತೆಯೇ 2ನೇ ಡೋಸ್ ಲಸಿಕೆ ಪಡೆದ 3650 ಆರೋಗ್ಯ ಕಾರ್ಯಕರ್ತರಲ್ಲಿ ಒಟ್ಟು 72 ಮಂದಿ (2%) ಸೋಂಕಿಗೆ ತುತ್ತಾಗಿದ್ದು, ಎರಡನೇ ಡೋಸ್ ಸ್ವೀಕರಿಸಿದ ನಂತರ  ಸೋಂಕಿಗೆ ತುತ್ತಾದ ಸರಾಸರಿ ಸಮಯ 20 ದಿನಗಳು ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. 

ಅಂತೆಯೇ ಎರಡೂ ಡೋಸ್‌ ಕೋವಿಡ್ ಲಸಿಕೆ ಪಡೆದ ಮತ್ತು ಎರಡನೆಯ ಡೋಸ್‌ನ ನಂತರ ಕನಿಷ್ಠ 14 ದಿನಗಳ ಫಾಲೋ-ಅಪ್ ಪೂರ್ಣಗೊಳಿಸಿದ ಆರೋಗ್ಯ ಕಾರ್ಯಕರ್ತರಲ್ಲಿ ಬ್ರೇಕ್‌ಥ್ರೂ ಇನ್‌ಫೆಕ್ಷನ್ ನ ಸಂಭವವು ಶೇ.1.6ರಷ್ಟು (3000 ಆರೋಗ್ಯ ಕಾರ್ಯಕರ್ತರಲ್ಲಿ 48 ಮಂದಿ) ಮತ್ತು ಎರಡನೆಯ  ಡೋಸ್ ಲಸಿಕೆ ಸ್ವೀಕರಿಸಿದ ಬಳಿಕ ಬ್ರೇಕ್‌ಥ್ರೂ ಇನ್‌ಫೆಕ್ಷನ್ ಗೆ ತುತ್ತಾಗುವ ಸರಾಸರಿ ಸಮಯ 29.5 ದಿನಗಳು ಎಂದು ಹೇಳಲಾಗಿದೆ. 

ಅಮೆರಿಕದಲ್ಲಿ 47 ಬ್ರೇಕ್‌ಥ್ರೂ ಇನ್‌ಫೆಕ್ಷನ್ ಪ್ರಕರಣಗಳು
ಇನ್ನು ಅಮೆರಿಕದಲ್ಲಿ ಫಿಜರ್-ಬಯೋಎನ್ಟೆಕ್ ಅಥವಾ ಮಾಡೆರ್ನಾ ಸಂಸ್ಥೆಯ ಕೋವಿಡ್ ಲಸಿಕೆಗಳನ್ನು ನೀಡಲಾಗುತ್ತಿದ್ದು, ಇಲ್ಲಿ ಅತ್ಯಂತ ಕಡಿಮೆ ಎಂದರೆ 47 (ಶೇ.0.5)ಬ್ರೇಕ್‌ಥ್ರೂ ಇನ್‌ಫೆಕ್ಷನ್ ಪ್ರಕರಣಗಳು ಮಾತ್ರ ಕಂಡುಬಂದಿದೆ ಎಂದು ಅಧ್ಯಯನದ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ದೆಹಲಿಯ ನ್ಯಾಷನಲ್ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್, ಸಿಎಸ್ಐಆರ್ ಇನ್ಸ್ಟಿಟ್ಯೂಟ್ ಆಫ್ ಜೀನೋಮಿಕ್ಸ್ ಅಂಡ್ ಇಂಟಿಗ್ರೇಟಿವ್ ಬಯಾಲಜಿ ಮತ್ತು ರಾಷ್ಟ್ರ ರಾಜಧಾನಿಯಲ್ಲಿನ ಅಕಾಡೆಮಿ ಫಾರ್ ಸೈಂಟಿಫಿಕ್ ಅಂಡ್ ಇನ್ನೋವೇಟಿವ್ ರಿಸರ್ಚ್ ನಡೆಸಿದ ಪ್ರತ್ಯೇಕ ವೈಜ್ಞಾನಿಕ ಸಂಶೋಧನೆಯಲ್ಲಿ ಕೋವಿಡ್  -19 ಎರಡನೇ ತರಂಗವನ್ನು ಜೀನೋಮಿಕ್ ಎಂದು ಅರ್ಥಮಾಡಿಕೊಳ್ಳುವ ಪ್ರಕ್ರಿಯೆಲ್ಲಿ ಒಟ್ಟು 27 ಬ್ರೇಕ್‌ಥ್ರೂ ಇನ್‌ಫೆಕ್ಷನ್ ಪ್ರಕರಣಗಳು ಕಂಡುಬಂದವು ಎಂದು ಹೇಳಲಾಗಿದೆ.

ಈ ಪ್ರಕರಣಗಳಲ್ಲಿ, ಶೇ.8ರಷ್ಟು ಬ್ರೇಕ್‌ಥ್ರೂ ಇನ್‌ಫೆಕ್ಷನ್ ಗಳು B.617.1 ಕಪ್ಪಾ ರೂಪಾಂತರ ವೈರಸ್ ತಳಿಯಿಂದ  ಕಂಡುಬಂದಿದ್ದರೆ, ಮತ್ತು ಶೇ.76ರಷ್ಟು ಪ್ರಕರಣಗಳು B.1.617.2 ಡೆಲ್ಚಾ ತಳಿಯಿಂದ ಉಂಟಾಗಿದೆ. - ಈ ಕೋವಿಡ್ ರೂಪಾಂತರವು ಈಗ ಹೆಚ್ಚು ಹರಡುವ ಮತ್ತು ಇತರ ರೋಗನಿರೋಧಕ ಶಕ್ತಿಗಳಿಂದ ತಪ್ಪಿಸಿಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ ಎಂದು ಹೇಳಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com