ಇಷ್ಟಕ್ಕೂ ಏನಿದು 'ಇಂಡೆಮಿನಿಟಿ ಪ್ರೊಟೆಕ್ಷನ್'? ಲಸಿಕೆ ತಯಾರಿಕಾ ಸಂಸ್ಥೆಗಳ ವಾದವೇನು? ಸರ್ಕಾರದ ನಿಲುವೇನು?

ವಿದೇಶಿ ಲಸಿಕೆ ತಯಾರಕಾ ಸಂಸ್ಥೆಗಳಾದ ಫೈಜರ್ ಮತ್ತು ಮೊಡೆರ್ನಾ ಸಂಸ್ಥೆಗಳು ಭಾರತಕ್ಕೆ ಲಸಿಕೆ ಪೂರೈಕೆ ಮಾಡಲು 'ಇಂಡೆಮಿನಿಟಿ ಪ್ರೊಟೆಕ್ಷನ್ ಅಥವಾ ಕೋರ್ಟ್ ವಿಚಾರಣೆಯಿಂದ ರಕ್ಷಣೆ' ಕೇಳಿ ಹೊಸದೊಂದು ಚರ್ಚೆ ಹುಟ್ಟುಹಾಕಿವೆ.. ಇಷ್ಟಕ್ಕೂ ಏನಿದು 'ಇಂಡೆಮಿನಿಟಿ ಪ್ರೊಟೆಕ್ಷನ್'..?, ಲಸಿಕೆ  ತಯಾರಿಕಾ ಸಂಸ್ಥೆಗಳ ವಾದವೇನು? ಸರ್ಕಾರದ ನಿಲುವೇನು? ಇಲ್ಲಿದೆ ಉತ್ತರ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ವಿದೇಶಿ ಲಸಿಕೆ ತಯಾರಕಾ ಸಂಸ್ಥೆಗಳಾದ ಫೈಜರ್ ಮತ್ತು ಮೊಡೆರ್ನಾ ಸಂಸ್ಥೆಗಳು ಭಾರತಕ್ಕೆ ಲಸಿಕೆ ಪೂರೈಕೆ ಮಾಡಲು 'ಇಂಡೆಮಿನಿಟಿ ಪ್ರೊಟೆಕ್ಷನ್ ಅಥವಾ ಕೋರ್ಟ್ ವಿಚಾರಣೆಯಿಂದ ರಕ್ಷಣೆ' ಕೇಳಿ ಹೊಸದೊಂದು ಚರ್ಚೆ ಹುಟ್ಟುಹಾಕಿವೆ.. ಇಷ್ಟಕ್ಕೂ ಏನಿದು 'ಇಂಡೆಮಿನಿಟಿ ಪ್ರೊಟೆಕ್ಷನ್'..?, ಲಸಿಕೆ  ತಯಾರಿಕಾ ಸಂಸ್ಥೆಗಳ ವಾದವೇನು? ಸರ್ಕಾರದ ನಿಲುವೇನು? ಇಲ್ಲಿದೆ ಉತ್ತರ..

ಕೊರೋನಾ ಸಾಂಕ್ರಾಮಿಕ ಜಗತ್ತಿನ ಎಲ್ಲ ದೇಶಗಳನ್ನೂ ಹೈರಾಣಾಗಿಸಿದ್ದು, ಕೊರೋನಾ ವೈರಸ್ ನಿಗ್ರಹಕ್ಕೆ ಎಲ್ಲ ದೇಶಗಳೂ ಲಸಿಕೆ ಮೊರೆ ಹೋಗಿವೆ. ಇದೇ ಕಾರಣಕ್ಕೆ ಜಗತ್ತಿನಾದ್ಯಂತ ಲಸಿಕೆಗೆ ಹಾಹಾಕಾರ ಸೃಷ್ಟಿಯಾಗಿದ್ದು, ಇನ್ನೂ ಪ್ರಯೋಗದ ಹಂತದಲ್ಲಿರುವ ಲಸಿಕೆಗಳನ್ನು ಕೂಡ ವಿತರಣೆ  ಮಾಡಲಾಗುತ್ತಿದೆ.ಇದಕ್ಕೆ ಆಯಾ ದೇಶಗಳ ಸರ್ಕಾರಗಳು ತುರ್ತುಬಳಕೆಗೆ ಅನುಮತಿ ನೀಡುತ್ತಿದ್ದು, ಇದೇ ಕಾರಣಕ್ಕೆ ಲಸಿಕೆ ತಯಾರಿಕಾ ಸಂಸ್ಥೆಗಳು ಲಸಿಕೆ ಪೂರೈಕೆ ಮಾಡಲು 'ಇಂಡೆಮಿನಿಟಿ ಪ್ರೊಟೆಕ್ಷನ್ ಅಥವಾ ಕೋರ್ಟ್ ವಿಚಾರಣೆಯಿಂದ ರಕ್ಷಣೆ'ಯ ಷರತ್ತು ವಿಧಿಸುತ್ತಿದೆ.

ಇಷ್ಟಕ್ಕೂ ಏನಿದು 'ಇಂಡೆಮಿನಿಟಿ ಪ್ರೊಟೆಕ್ಷನ್'..?
ಸಾಮಾನ್ಯವಾಗಿ ಯಾವುದೇ ರೋಗಕ್ಕೆ ಲಸಿಕೆ ಕಂಡುಹಿಡಿದಾಗ ಅದರ ಪ್ರಯೋಗಗಳು ವರ್ಷಾನುಗಟ್ಟಲೆ ಹಿಡಿಯುತ್ತವೆ. ಲಸಿಕೆಯನ್ನು ಮಾನವರ ಮೇಲೆ ಪ್ರಯೋಗ ಮಾಡಿದಾಗ ಯಾವುದೇ ರೀತಿಯ ಅಡ್ಡ ಪರಿಣಾಮಗಳು ಸಂಭವಿಸದೇ ಇರಲಿ ಎಂದು ಲಸಿಕೆ ತಯಾರಿಕಾ ಸಂಸ್ಥೆಗಳು ಪ್ರತೀಯೊಂದು ಹಂತದಲ್ಲಿ  ವಿವಿಧ ರೀತಿಯ ಪರೀಕ್ಷೆಗಳನ್ನು ನಡೆಸುತ್ತವೆ. ಇದೇ ಕಾರಣಕ್ಕೆ ಲಸಿಕೆ ಅಂತಿಮ ಹಂತ ತಲುಪಲು ವರ್ಷಾನುಗಟ್ಟಲೆ ಸಮಯ ಹಿಡಿಯುತ್ತದೆ. ಆದರೆ ಪ್ರಸ್ತುತ ಕೊರೋನಾ ಸಾಂಕ್ರಾಮಿಕ ಅತ್ಯಂತ ವೇಗವಾಗಿ ಪ್ರಸರಿಸುತ್ತಿದ್ದು, ಲಕ್ಷಾಂತರ ಮಂದಿಯ ಜೀವ ಬಲಿಪಡೆಯುತ್ತಿದೆ. ಹೀಗಾಗಿ ಲಸಿಕೆಯ ಪ್ರಯೋಗಳಿಗೆ  ಸಾಕಷ್ಟು ಸಮಯ ದೊರೆಯುತ್ತಿಲ್ಲ. ಇದೇ ಕಾರಣಕೆ ಲಸಿಕೆ ತಯಾರಿಕಾ ಸಂಸ್ಥೆಗಳು ಲಸಿಕೆಯ ಪ್ರಯೋಗಗಳನ್ನು ವೇಗವಾಗಿ ನಡೆಸುತ್ತಿದ್ದು, ಈಗಾಗಲೇ ಲಸಿಕೆಗಳನ್ನು ಮಾನವರಿಗೆ ನೀಡಲು ಆರಂಭಿಸಿವೆ.

ವಿವಿಧ ದೇಶಗಳಿಗೆ ಲಸಿಕೆ ನೀಡಿದಾಗ ಅಲ್ಲಿ ಸಂಭಾವ್ಯ ಅಡ್ಡ ಪರಿಣಾಮಗಳೇನಾದರೂ ಸಂಭವಿಸಿದರೆ ಆಗ ಕೋರ್ಟ್ ಪ್ರಕರಣ, ವಿಚಾರಣೆ ನಡೆಯುವ ಸಾಧ್ಯತೆ ಇದೆ. ಇದು ಸುದೀರ್ಘ ಪ್ರಕ್ರಿಯೆಯಾಗಿದ್ದು, ಇದೇ ಕಾರಣಕ್ಕೆ ಲಸಿಕೆ ತಯಾರಿಕಾ ಸಂಸ್ಥೆಗಳು ಈ ಕೋರ್ಟ್ ಪ್ರಕರಣ ಮತ್ತು ವಿಚಾರಣೆಯಿಂದ ರಕ್ಷಣೆ  ನೀಡಿದರೆ ಮಾತ್ರ ಲಸಿಕೆ ಪೂರೈಕೆ ಮಾಡುವುದಾಗಿ ಷರತ್ತು ವಿಧಿಸಿವೆ. ಈ ಹಿಂದೆ ಫೈಜರ್ ಮತ್ತು ಮೊಡೆರ್ನಾ ಸಂಸ್ಥೆಗಳು ಭಾರತಕ್ಕೆ ಈ ಬೇಡಿಕೆ ಇಟ್ಟಿದ್ದವು. ಇದೀಗ ಈ ರಕ್ಷಣೆಯನ್ನು ಎಲ್ಲ ಲಸಿಕೆ ತಯಾರಿಕಾ ಸಂಸ್ಥೆಗಳಿಗೆ ನೀಡಬೇಕು ಎಂದು ಸೇರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಸಂಸ್ಥೆ ಕೇಳುತ್ತಿದೆ. 

ಕೇಂದ್ರ ಸರ್ಕಾರದ ನಿಲುವೇನು?
ಫೈಜರ್ ಮತ್ತು ಮೊಡೆರ್ನಾ ಸಂಸ್ಥೆಗಳು ಭಾರತಕ್ಕೆ ಲಸಿಕೆ ಪೂರೈಕೆ ಮಾಡಲು 'ಇಂಡೆಮಿನಿಟಿ ಪ್ರೊಟೆಕ್ಷನ್' ಕೇಳಿದೆ. ಈ ಸಂಬಂಧ ಕೇಂದ್ರ ಸರ್ಕಾರ ಗಂಭೀರ ಚಿಂತನೆಯಲ್ಲಿದ್ದು, ಮೂಲಗಳ ಪ್ರಕಾರ ಈ ಎರಡೂ ಸಂಸ್ಥೆಗಳಿಗೆ 'ಇಂಡೆಮಿನಿಟಿ ಪ್ರೊಟೆಕ್ಷನ್' ನೀಡುವ ಕುರಿತು ಮೌಖಿಕ ಒಪ್ಪಿಗೆ ನೀಡಿದೆ ಎನ್ನಲಾಗಿದೆ.  ಒಂದು ವೇಳೆ ಸರ್ಕಾರ ಈ ಎರಡೂ ಸಂಸ್ಥೆಗಳಿಗೆ ಈ 'ಇಂಡೆಮಿನಿಟಿ ಪ್ರೊಟೆಕ್ಷನ್' ನೀಡಿದ್ದೇ ಆದರೆ ಇತರೆ ಲಸಿಕೆ ತಯಾರಿಕಾ ಸಂಸ್ಥೆಗಳೂ ಕೂಡ ಕೇಳುವ ಸಾಧ್ಯತೆ. ಈಗಾಗಲೇ ಸೇರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಸಂಸ್ಥೆ ಕೂಡ ಈ ಬಗ್ಗೆ ಧನಿ ಎತ್ತಿದ್ದು, ಎಲ್ಲ ಲಸಿಕೆ ತಯಾರಿಕಾ ಸಂಸ್ಥೆಗಳಿಗೆ ರಕ್ಷಣೆ ನೀಡಬೇಕು  ಎಂದು ಆಗ್ರಹಿಸಿದೆ. ಹೀಗಾಗಿ ಈ ಬಗ್ಗೆ ಕೂಲಂಕುಷ ಚರ್ಚೆ ಬಳಿಕ ಎಲ್ಲ ಲಸಿಕೆ ತಯಾರಿಕಾ ಸಂಸ್ಥೆಗಳಿಗೂ ಈ 'ಇಂಡೆಮಿನಿಟಿ ಪ್ರೊಟೆಕ್ಷನ್' ನೀಡುವ ನಿರ್ಧಾರಕ್ಕೆ ಕೇಂದ್ರ ಸರ್ಕಾರ ಬರಬಹುದು ಎಂದು ತಜ್ಞರು ವಿಶ್ಲೇಷಿಸಿದ್ದಾರೆ. ಪ್ರಸ್ತುತ ಕೋವಿಡ್ 2ನೇ ಅಲೆಯಲ್ಲಿ ಸಿಲುಕಿರುವ ಭಾರತಕ್ಕೆ ಈ ನಿರ್ಧಾರ ಬಿಟ್ಟರೆ ಬೇರೆ  ಆಯ್ಕೆ ಕೂಡ ಇಲ್ಲ.. ಆದರೆ ಈ ವಿಚಾರವಾಗಿ ಇತರೆ ದೇಶಗಳು ಕೈಗೊಳ್ಳುವ ನಿರ್ಧಾರದ ಕುರಿತು ಭಾರತ ಸರ್ಕಾರ ಕಾದು ನೋಡುವ ತಂತ್ರ ಕೂಡ ಅನುಸರಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಲಸಿಕೆ ತಯಾರಿಕಾ ಸಂಸ್ಥೆಗಳಿಗೆ ಈಗಾಗಲೇ ಹಲವು ವಿನಾಯಿತಿ ನೀಡಿರುವ ಕೇಂದ್ರ ಸರ್ಕಾರ
ಇನ್ನು ಕೋವಿಡ್ ಲಸಿಕೆಗಳನ್ನು ಖರೀದಿ ಮಾಡಲು ಭಾರತ ಸರ್ಕಾರ ಈಗಾಗಲೇ ಲಸಿಕೆ ತಯಾರಿಕಾ ಸಂಸ್ಥೆಗಳಿಗೆ ಹಲವು ಸವಲತ್ತುಗಳನ್ನು ಕಲ್ಪಿಸಿದೆ. ಅಮೆರಿಕ, ಬ್ರಿಟನ್ ಮತ್ತು ಜಪಾನ್ ದೇಶಗಳು ಅನುಮೋದನೆ ನೀಡಿರುವ ಲಸಿಕೆಗಳಿಗೆ ಭಾರತದಲ್ಲಿ ಡಿಸಿಜಿಐ ಯಾವುದೇ ರೀತಿಯ ಪ್ರಯೋಗವಿಲ್ಲದೇ  ತುರ್ತುಬಳಕೆಗೆ ಅನುಮತಿ ನೀಡಿದೆ. ವಿದೇಶದಲ್ಲಿ ಅನುಮೋದನೆಗೊಂಡ ಲಸಿಕೆಯನ್ನು ಭಾರತದಲ್ಲಿ ಬ್ರಿಡ್ಜ್ ಪ್ರಯೋಗ ನಡೆಸುವ ಅಗತ್ಯವಿಲ್ಲ ಎಂದು ಡಿಸಿಜಿಐ ಆದೇಶ ಹೊರಡಿಸಿದೆ. ಈ ಹಿಂದೆ ಯಾವುದೇ ಲಸಿಕೆಗಳನ್ನು ಭಾರತದಲ್ಲಿ ಬಳಕೆ ಮಾಡುವ ಮುನ್ನ ಪ್ರಯೋಗ ನಡೆಸುವುದು ಕಡ್ಡಾಯವಾಗಿತ್ತು. ಅದರಂತೆ ರಷ್ಯಾ ನಿರ್ಮಿತ ಸ್ಪುಟ್ನಿಕ್ ವಿ ಕೋವಿಡ್ ಲಸಿಕೆ ಭಾರತದಲ್ಲಿ ಪ್ರಯೋಗಕ್ಕೆ ಒಳಗಾಗುತ್ತಿದೆ. ಆದರೆ ಫೈಜರ್ ಮತ್ತು ಮೊಡೆರ್ನಾ ಸೇರಿದಂತೆ ಇತರೆ ಲಸಿಕೆಗಳು ಈ ನಿಯಮದಿಂದ ವಿನಾಯಿತಿ ಪಡೆದಿದ್ದು, ವಿಶ್ವಸಂಸ್ಥೆ ತುರ್ತು ಬಳಕೆಗೆ ಅನುಮೋದಿಸಿದ ಮತ್ತು ಬೇರೆ ದೇಶಗಳಲ್ಲಿ ಬಳಕೆಗೆ ಅನುಮತಿ ಪಡೆದ ಲಸಿಕೆಗಳನ್ನು ಭಾರತದಲ್ಲಿ ನೇರವಾಗಿ ತುರ್ತು ಬಳಕೆಗೆ ಒಳಪಡಿಸಬಹುದಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com