ಡಿಎಲ್ಎಫ್ ಲಂಚ ಪ್ರಕರಣ: ಲಾಲು ಪ್ರಸಾದ್ ಯಾದವ್ ಗೆ ಸಿಬಿಐ ಕ್ಲೀನ್ ಚಿಟ್!

ಡಿಎಲ್ಎಫ್ ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಜನತಾದಳ (ಆರ್ ಜೆಡಿ) ಪಕ್ಷದ ಮುಖ್ಯಸ್ಥ ಹಾಗೂ ಮಾಜಿ ಕೇಂದ್ರ ಸಚಿವ ಲಾಲು ಪ್ರಸಾದ್ ಯಾದವ್ ಅವರಿಗೆ ಸಿಬಿಐ ಕ್ಲೀನ್ ಚಿಟ್ ನೀಡಿದೆ ಎನ್ನಲಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಡಿಎಲ್ಎಫ್ ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಜನತಾದಳ (ಆರ್ ಜೆಡಿ) ಪಕ್ಷದ ಮುಖ್ಯಸ್ಥ ಹಾಗೂ ಮಾಜಿ ಕೇಂದ್ರ ಸಚಿವ ಲಾಲು ಪ್ರಸಾದ್ ಯಾದವ್ ಅವರಿಗೆ ಸಿಬಿಐ ಕ್ಲೀನ್ ಚಿಟ್ ನೀಡಿದೆ ಎನ್ನಲಾಗಿದೆ.

ಈ ಬಗ್ಗೆ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿದ್ದು, 'ಡಿಎಲ್ಎಫ್ ಲಂಚ ಪ್ರಕರಣದಲ್ಲಿ ಸಿಬಿಐ ಮಾಜಿ ರೈಲ್ವೆ ಸಚಿವ ಹಾಗೂ ರಾಷ್ಟ್ರೀಯ ಜನತಾದಳದ ನಾಯಕ ಲಾಲು ಪ್ರಸಾದ್ ಯಾದವ್ ಅವರಿಗೆ ಕ್ಲೀನ್ ಚಿಟ್ ನೀಡಿದೆ. ಸಿಬಿಐನ ಆರ್ಥಿಕ ಅಪರಾಧ ಬ್ರ್ಯಾಂಚ್ ನ ಮೂಲಗಳ ಪ್ರಕಾರ, ಭ್ರಷ್ಟಾಚಾರ ಆರೋಪದ  ಮೇಲೆ ರಿಯಲ್ ಎಸ್ಟೇಟ್ ಗ್ರೂಪ್ ಡಿಎಲ್ ಎಫ್ ಹಾಗೂ ಲಾಲು ಪ್ರಸಾದ್ ವಿರುದ್ಧ 2018ರಲ್ಲಿ ಪ್ರಾಥಮಿಕ ತನಿಖೆ ಆರಂಭಿಸಿರುವುದಾಗಿ ವಿವರಿಸಿದೆ. ಮುಂಬೈನ ಬಾಂದ್ರಾದ ರೈಲ್ವೆ ಭೂ ಗುತ್ತಿಗೆ ಯೋಜನೆ ಮತ್ತು ನವದೆಹಲಿ ರೈಲ್ವೆ ನಿಲ್ದಾಣ ಮೇಲ್ದರ್ಜೆಗೇರಿಸುವ ಯೋಜನೆ ಮೇಲೆ ಡಿಎಲ್ ಎಫ್ ಗ್ರೂಪ್ ಕಣ್ಣಿಟ್ಟಿತ್ತು. ಈ  ಹಿನ್ನೆಲೆಯಲ್ಲಿ ದಕ್ಷಿಣ ದೆಹಲಿ ಪ್ರದೇಶದಲ್ಲಿನ ಆಸ್ತಿಯನ್ನು ಡಿಎಲ್ ಎಫ್ ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್ ಗೆ ಲಂಚ ರೂಪದಲ್ಲಿ ನೀಡಿರುವುದಾಗಿ ವರದಿ ತಿಳಿಸಿತ್ತು.

ಆದರೆ ಈ ಪ್ರಕರಣದ ಬಗ್ಗೆ ಎರಡು ವರ್ಷಗಳ ಕಾಲ ಪ್ರಾಥಮಿಕ ತನಿಖೆಯನ್ನು ನಡೆಸಿ ಮುಕ್ತಾಯಗೊಳಿಸಲಾಗಿದ್ದು, ಈ ಆರೋಪ ಸಾಬೀತುಪಡಿಸುವ ಯಾವುದೇ ಸುಳಿವು ಲಭ್ಯವಾಗಿಲ್ಲ ಎಂದು ಸಿಬಿಐ ತಿಳಿಸಿರುವುದಾಗಿ ವರದಿಯಲ್ಲಿ ಹೇಳಲಾಗಿದೆ.

ಮೇವು ಹಗರಣಕ್ಕೆ ಸಂಬಂಧಿಸಿದಂತೆ ಮೂರು ವರ್ಷಗಳಿಗಿಂತ ಹೆಚ್ಚು ಜೈಲಿನಲ್ಲಿದ್ದ ಲಾಲೂ ಪ್ರಸಾದ್ ಅವರು ಎಪ್ರಿಲ್‌ನಿಂದ ಜಾಮೀನಿನ ಮೇಲೆ ಹೊರಗಿದ್ದಾರೆ. ಕಳೆದ ತಿಂಗಳು, ಲಾಲು ಯಾದವ್ ಅವರಿಗೆ ಜಾರ್ಖಂಡ್ ಹೈಕೋರ್ಟ್ ಜಾಮೀನು ನೀಡಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com