ದೆಹಲಿಯಲ್ಲಿ ಅಫ್ಘಾನಿಸ್ತಾನ ಕುರಿತು ಚರ್ಚೆ: ಭಾರತ ಆಹ್ವಾನ ತಿರಸ್ಕರಿಸಿ ಪಾಕ್, ಚೀನಾ ಸಭೆಗೆ ಗೈರು!
ಅಫ್ಘಾನಿಸ್ತಾನವನ್ನು ತಾಲಿಬಾನಿಗಳು ಕೈವಶ ಮಾಡಿಕೊಂಡ ಮೇಲೆ ಸದ್ಯದ ಪರಿಸ್ಥಿತಿ ಕುರಿತು ಚರ್ಚೆ ಮಾಡಲು 8 ರಾಷ್ಟ್ರಗಳನ್ನೊಳಗೊಂಡ ಭದ್ರತಾ ಸಲಹೆಗಾರರ ಸಭೆ ದೆಹಲಿಯಲ್ಲಿ ನಡೆಯುತ್ತಿದೆ. ಭಯೋತ್ಪಾದನೆ, ಮಹಿಳೆಯರ ಮೇಲಿನ ಹಲ್ಲೆ, ಹಿಂಸಾಚಾರ ಸೇರಿದಂತೆ ಅನೇಕ ವಿಚಾರಗಳ ಕುರಿತಂತೆ ಚರ್ಚಿಸಲಾಗುತ್ತಿದೆ.
Published: 10th November 2021 03:24 PM | Last Updated: 10th November 2021 03:32 PM | A+A A-

ಮೋದಿ-ಇಮ್ರಾನ್-ಜಿನ್ ಪಿಂಗ್
ನವದೆಹಲಿ: ಅಫ್ಘಾನಿಸ್ತಾನವನ್ನು ತಾಲಿಬಾನಿಗಳು ಕೈವಶ ಮಾಡಿಕೊಂಡ ಮೇಲೆ ಸದ್ಯದ ಪರಿಸ್ಥಿತಿ ಕುರಿತು ಚರ್ಚೆ ಮಾಡಲು 8 ರಾಷ್ಟ್ರಗಳನ್ನೊಳಗೊಂಡ ಭದ್ರತಾ ಸಲಹೆಗಾರರ ಸಭೆ ದೆಹಲಿಯಲ್ಲಿ ನಡೆಯುತ್ತಿದೆ. ಭಯೋತ್ಪಾದನೆ, ಮಹಿಳೆಯರ ಮೇಲಿನ ಹಲ್ಲೆ, ಹಿಂಸಾಚಾರ ಸೇರಿದಂತೆ ಅನೇಕ ವಿಚಾರಗಳ ಕುರಿತಂತೆ ಚರ್ಚಿಸಲಾಗುತ್ತಿದೆ.
ಸುಸ್ಥಿರ ಸರ್ಕಾರ ಹಾಗೂ ಅಫ್ಘಾನಿಸ್ತಾನದಲ್ಲಿ ಶಾಂತಿ ನೆಲಸುವ ದೃಷ್ಟಿಯಿಂದ ದೆಹಲಿ ಸಭೆ ಅತ್ಯಂತ ಮಹತ್ವ ಪಡೆದುಕೊಂಡಿದೆ. ಇರಾನ್, ರಷ್ಯಾ, ಮಧ್ಯ ಏಷ್ಯಾದ ದೇಶಗಳಾದ ತಜಕಿಸ್ತಾನ್, ಕಿರ್ಗಿಸ್ತಾನ್, ಕಜಕಿಸ್ತಾನ್, ಉಜ್ಬೇಕಿಸ್ತಾನ್ ಮತ್ತು ತುರ್ಕಿಮೆನಿಸ್ತಾನ್ ಸಹ ಈ ಸಭೆಯಲ್ಲಿ ಪಾಲ್ಗೊಂಡಿವೆ.
ಸಭೆಯಲ್ಲಿ, ಎಲ್ಲಾ ದೇಶಗಳು ಅಫ್ಘಾನಿಸ್ತಾನದ ಪ್ರಸ್ತುತ ಪರಿಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿವೆ. ಆ ರಾಷ್ಟ್ರದಲ್ಲಿನ ಭಯೋತ್ಪಾದನೆ ಮತ್ತು ಮಾದಕವಸ್ತುಗಳ ಕಳ್ಳಸಾಗಣೆಯನ್ನು ಅಲ್ಲಿಂದ ನಿಲ್ಲಿಸಬೇಕು ಅನ್ನೋ ಬಗ್ಗೆ ಗಡಿ ಹಂಚಿಕೊಂಡಿರುವ ರಾಷ್ಟ್ರಗಳ ಒತ್ತಾಯವಾಗಿದೆ.
ರಷ್ಯಾದ ನಂತರ ಭಾರತದಲ್ಲಿ ಅಪ್ಘಾನಿಸ್ತಾನ ಕುರಿತಾದ ಮೊದಲ ಮಹತ್ವದ ಚರ್ಚೆ ನಡೆಯುತ್ತಿದೆ. ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಆಗಿರುವ ಅಜಿತ್ ಧೋವಲ್ ಅಧ್ಯಕ್ಷತೆಯಲ್ಲಿ ಈ ಮಹತ್ವದ ಚರ್ಚೆ ನಡೆಯುತ್ತಿವೆ.
ಈ ಸಭೆಯಲ್ಲಿ ಭಾಗವಹಿಸುವಂತೆ ಪಾಕಿಸ್ತಾನಕ್ಕೆ ಆಹ್ವಾನ ನೀಡಲಾಗಿತ್ತು. ಆದರೆ, ಪಾಕಿಸ್ತಾನದ ಭದ್ರತಾ ಸಲಹೆಗಾರರಾಗಿರುವ ಮೋಯಿದ್ ಯೂಸುಫ್ ದೆಹಲಿ ಭೇಟಿ ತಿರಸ್ಕರಿಸಿದ್ದರು. ಇನ್ನು ಪಾಕ್ ನ ವಿಶೇಷ ಸ್ನೇಹಿತನಾಗಿರುವ ಚೀನಾ ಕೂಡ ವೇಳಾಪಟ್ಟಿಯ ನೆಪದಲ್ಲಿ ಸಭೆಗೆ ಬರಲು ನಿರಾಕರಿಸಿದೆ.