ಅಮೆರಿಕದ ಮೆರ್ಕ್ ಕಂಪೆನಿಯ ಕೋವಿಡ್-19 ಮಾತ್ರೆ: ಸದ್ಯದಲ್ಲಿಯೇ ಭಾರತದ ಮಾರುಕಟ್ಟೆಗೆ ಬಿಡುಗಡೆ ಸಾಧ್ಯತೆ
ಅಮೆರಿಕದ ಔಷಧ ತಯಾರಿಕಾ ಕಂಪೆನಿ ಮೆರ್ಕ್ ಮತ್ತು ರಿಡ್ಜ್‌ಬ್ಯಾಕ್ ಬಯೋಥೆರಪ್ಯೂಟಿಕ್ಸ್ ಅಭಿವೃದ್ಧಿಪಡಿಸಿದ ಕೋವಿಡ್-19 ಮಾತ್ರೆ ಮುಂದಿನ ವಾರಗಳಲ್ಲಿ ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಬಹುದು ಎಂದು ಹೇಳಲಾಗುತ್ತಿದೆ. ಸಂಪೂರ್ಣ ಚಿಕಿತ್ಸೆಗೆ 500 ರಿಂದ ಸಾವಿರ ರೂಪಾಯಿ ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿದೆ.
Published: 13th November 2021 09:05 AM | Last Updated: 13th November 2021 01:42 PM | A+A A-

ಮೆರ್ಕ್ ಕಂಪೆನಿಯ ಕೇಂದ್ರ ಕಚೇರಿ
ನವದೆಹಲಿ: ಅಮೆರಿಕದ ಔಷಧ ತಯಾರಿಕಾ ಕಂಪೆನಿ ಮೆರ್ಕ್ ಮತ್ತು ರಿಡ್ಜ್‌ಬ್ಯಾಕ್ ಬಯೋಥೆರಪ್ಯೂಟಿಕ್ಸ್ ಅಭಿವೃದ್ಧಿಪಡಿಸಿದ ಕೋವಿಡ್-19 ಮಾತ್ರೆ ಮುಂದಿನ ವಾರಗಳಲ್ಲಿ ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಬಹುದು ಎಂದು ಹೇಳಲಾಗುತ್ತಿದೆ. ಸಂಪೂರ್ಣ ಚಿಕಿತ್ಸೆಗೆ 500 ರಿಂದ ಸಾವಿರ ರೂಪಾಯಿ ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿದೆ.
ಮೊಲ್ನುಪ್ರಿರಾವಿರ್ ಎಂಬ ಬ್ರಾಡ್ ಸ್ಪೆಕ್ಟ್ರಮ್ ಆಂಟಿವೈರಲ್ ಔಷಧಿ , ಅದರ ಆರಂಭಿಕ ಹಂತಗಳಲ್ಲಿ ಕೋವಿಡ್ -19 ಸೋಂಕನ್ನು ತಡೆಗಟ್ಟಲು ಅಂತಾರಾಷ್ಟ್ರೀಯ ಪ್ರಯೋಗಗಳಲ್ಲಿ ಭರವಸೆಯನ್ನು ತೋರಿಸಿದೆ.ಕಳೆದ ವಾರ, ಇಂಗ್ಲೆಂಡ್ ಈ ಡ್ರಗ್ ಗೆ ಅನುಮತಿ ನೀಡುವ ಮೂಲಕ ವಿಶ್ವದಲ್ಲಿಯೇ ಮೊದಲ ದೇಶ ಎನಿಸಿಕೊಂಡಿತು. ಕೊರೋನಾ ವೈರಸ್ ಪರೀಕ್ಷೆ ಮಾಡಿಸಿಕೊಂಡು ಪಾಸಿಟಿವ್ ಬಂದವರಿಗೆ ಸೋಂಕಿನ ಲಕ್ಷಣ ಕಾಣಿಸಿಕೊಂಡ 5 ದಿನಗಳ ಒಳಗೆ ಬಳಕೆ ಮಾಡಬಹುದೆಂದು ಶಿಫಾರಸು ಮಾಡಲಾಗಿದೆ.
ಮುಂದಿನ ವಾರ ಈ ಔಷಧಿಯ ನಿರ್ಬಂಧಿತ ತುರ್ತುಬಳಕೆಗೆ ಅನುಮತಿಯನ್ನು ಕೇಂದ್ರದ ಪ್ರಾಧಿಕಾರ ನೀಡಬಹುದು ಎಂದು ಕೇಂದ್ರ ಡ್ರಗ್ಸ್ ಸ್ಟಾಂಡರ್ಡ್ ಕಂಟ್ರೋಲ್ ಆರ್ಗನೈಸೇಷನ್ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ತಿಳಿಸಿದೆ. ಭಾರತದಲ್ಲಿ ಸುಮಾರು 700 ರೋಗಿಗಳ ಅಂಕಿಅಂಶಗಳನ್ನು ಅಂತಿಮ ಹಂತದಲ್ಲಿ ಪರಿಶೀಲಿಸಲು ಮುಂದಾಗಿದೆ.
ಈ ಮೂಲಕ ಮುಂದಿನ ದಿನಗಳಲ್ಲಿ ಭಾರತದಲ್ಲಿ ಕೋವಿಡ್-19 ಬಾಯಿಯಲ್ಲಿ ಹಾಕಿಕೊಳ್ಳುವ ಮಾತ್ರೆ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರತಿ ಮಾತ್ರೆಗೆ 25ರಿಂದ 50 ರೂಪಾಯಿಯನ್ನು ನಿಗದಿಪಡಿಸುವ ಸಾಧ್ಯತೆಯಿದೆ. 5 ದಿನಗಳ ಚಿಕಿತ್ಸಾ ದಿನಗಳಲ್ಲಿ ಕೋವಿಡ್-19 ರೋಗಿಯೊಬ್ಬ 15 ರಿಂದ 20 ಮಾತ್ರೆಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಅಂದರೆ ಒಟ್ಟಾರೆ ಚಿಕಿತ್ಸೆಗೆ 500 ರಿಂದ ಸಾವಿರ ರೂಪಾಯಿಗಳನ್ನು ರೋಗಿ ಭರಿಸಬೇಕಾಗಬಹುದು ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಅಧಿಕಾರಿಗಳು ಹೇಳುತ್ತಾರೆ.
ಭಾರತದಲ್ಲಿ ಈ ಮಾತ್ರೆ ತಯಾರಿಕೆಗೆ ಅನುಮತಿ ಪಡೆದಿರುವ ಕಂಪೆನಿ ಸನ್ ಫಾರ್ಮ, ಸಂಸ್ಥೆಯು ಇದನ್ನು ಜನರಿಗೆ ಕೈಗೆಟಕುವ ದರದಲ್ಲಿ ಮೊಲ್ಕ್ಸ್ವಿರ್ ಹೆಸರಿನಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ. ಸನ್ ಫಾರ್ಮಾ, ಡಾ ರೆಡ್ಡೀಸ್ ಲ್ಯಾಬೋರೇಟರೀಸ್, ನ್ಯಾಟ್ಕೋ, ಹೆಟೆರೊ ಫಾರ್ಮಾ ಮತ್ತು ಅರಬಿಂದೋ ಫಾರ್ಮಾ ಸೇರಿದಂತೆ ಎಂಟು ಕಂಪನಿಗಳು ಔಷಧದ ಜೆನೆರಿಕ್ ಆವೃತ್ತಿಗಳನ್ನು ಉತ್ಪಾದಿಸಲು ಸ್ವಯಂಪ್ರೇರಿತ ಪರವಾನಗಿ ಒಪ್ಪಂದಗಳಿಗೆ ಸಹಿ ಹಾಕಿವೆ. ಈಗ ಆರ್‌ಇಯುಗೆ ಅರ್ಜಿ ಸಲ್ಲಿಸಿದ್ದಾರೆ.