ಮಹಾರಾಷ್ಟ್ರ: ದೇವರ ಪ್ರಾರ್ಥಿಸಿ ಹುಂಡಿ ದೋಚಿದ ಖದೀಮ, ವಿಡಿಯೋ ವೈರಲ್!
ದೇವರಿಗೆ ಒಳ್ಳೆಯದು ಮಾಡಪ್ಪ ಎಂದು ದೇವರಿಗೆ ಕೈ ಮುಗಿದು ಬೇಡಿಕೊಳ್ಳುವ ಭಕ್ತರನ್ನು ನೋಡಿದ್ದೇವೆ, ಆದರೆ ಇಲ್ಲೊಬ್ಬ ಖದೀಮ ಕಾಪಾಡು ಎಂದು ಪ್ರಾರ್ಥಿಸಿ ದೇವಸ್ಥಾನದ ಹುಂಡಿಯನ್ನು ದೋಚಿದ್ದಾನೆ.
Published: 14th November 2021 12:33 PM | Last Updated: 14th November 2021 12:33 PM | A+A A-

ದೇವರ ಮುಂದೆ ಪ್ರಾರ್ಥಿಸುತ್ತಿರುವ ಖದೀಮ.
ಥಾಣೆ: ದೇವರಿಗೆ ಒಳ್ಳೆಯದು ಮಾಡಪ್ಪ ಎಂದು ದೇವರಿಗೆ ಕೈ ಮುಗಿದು ಬೇಡಿಕೊಳ್ಳುವ ಭಕ್ತರನ್ನು ನೋಡಿದ್ದೇವೆ, ಆದರೆ ಇಲ್ಲೊಬ್ಬ ಖದೀಮ ಕಾಪಾಡು ಎಂದು ಪ್ರಾರ್ಥಿಸಿ ದೇವಸ್ಥಾನದ ಹುಂಡಿಯನ್ನು ದೋಚಿದ್ದಾನೆ.
ಮಹಾರಾಷ್ಟ್ರದ ಥಾಣೆಯ ಖೋಪಾಟ್ ಬಸ್ ಡಿಪೋ ಬಳಿಯಿರುವ ಆಂಜನೇಯ ದೇವಸ್ಥಾನದಲ್ಲಿ ಈ ಘಟನೆ ನಡೆದಿದ್ದು, ಘಟನೆಯ ವಿಡಿಯೋ ವೈರಲ್ ಆಗುತ್ತಿದೆ.
ಘಟನೆ ಬಳಿಕ ಪೊಲೀಸರು ಸ್ಥಳದಲ್ಲಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದು, ಈ ವೇಳೆ ಖದೀಮನ ಚಟವಟಿಕೆಗಳು ಪತ್ತೆಯಾಗಿದೆ.
ವಿಡಿಯೋದಲ್ಲಿ ಯುವಕನೊಬ್ಬ ದೇಗುಲಕ್ಕೆ ಎಂಟ್ರಿಯಾಗುತ್ತಾನೆ. ಯಾರಿಗೂ ಅನುಮಾನ ಬರದಂತೆ ತನ್ನ ಮೊಬೈಲ್ ಕ್ಯಾಮರಾದಲ್ಲಿ ದೇವರ ಫೋಟೋಗಳನ್ನು ತೆಗೆಯುತ್ತಾನೆ. ಅತ್ತ ಇತ್ತ ನೋಡುತ್ತಾನೆ. ಯಾರೂ ಇಲ್ಲದ್ದನ್ನು ಖಚಿತಪಡಿಸಿಕೊಂಡ ನಂತರ ಆಂಜನೇಯನ ವಿಗ್ರಹದ ಬಳಿ ಬರುತ್ತಾನೆ. ನಂತರ ದೇವರ ಪಾದ ಮುಟ್ಟಿ ನಮಸ್ಕಾರ ಮಾಡುತ್ತಾನೆ. ಇದಾದ ಕೆಲವೇ ಕ್ಷಣಗಳಲ್ಲಿ ಅಲ್ಲಿದ್ದ ಸಣ್ಣ ಹುಂಡಿಯೊಂದನ್ನು ಕದ್ದು ಓಡಿಹೋಗುತ್ತಾನೆ.
ಈ ದೇಗುಲದಲ್ಲಿ ಸದಾ ಪೂಜಾರಿಯೊಬ್ಬರು ಇರುತ್ತಿದ್ದರು. ಆದರೆ ಯಾವುದೋ ಕೆಲಸದ ನಿಮಿತ್ತ ನಿಮಿಷ ಹೊರಗಡೆ ಹೋಗಿದ್ದಾರೆ. ಇದೇ ಸಮಯಕ್ಕಾಗಿ ಕಾದು ಕುಳಿತಿದ್ದ ಯುವಕ, ದೇಗಲಕ್ಕೆ ಬಂದು ತನ್ನ ಕೈಚಳಕ ತೋರಿದ್ದಾನೆ. ಆ ಹುಂಡಿಯಲ್ಲಿ ಅಂದಾಜು 1 ಸಾವಿರ ರೂಪಾಯಿ ಇತ್ತು ಎಂದು ಪೂಜಾರಿ ಪೊಲೀಸರ ಬಳಿ ಹೇಳಿದ್ದಾರೆ.
ಇನ್ನೂ ಈ ಹುಂಡಿ ಕದಿಯಲು ಬಂದಿದ್ದು ಇಬ್ಬರು. ಒಬ್ಬ ಹುಂಡಿ ಕದ್ದವ. ಮತ್ತೊಬ್ಬ ದೇಗುಲದ ಹೊರಗಡೆ ನೋಡಿಕೊಳ್ಳುತ್ತಿದ್ದ ಆರೋಪಿ ಎಂದು ತಿಳಿದುಬಂದಿದೆ. ಇಬ್ಬರೂ ಪ್ಲ್ಯಾನ್ ಮಾಡಿ ದೇಗುಲದ ಹುಂಡಿ ಕದ್ದಿದ್ದಾರೆಂದು ಅಧಿಕಾರಿಗಳು ಹೇಳಿದ್ದಾರೆ.
ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದ್ದ ವಿಡಿಯೋವನ್ನೇ ಪೊಲೀಸರು ಆ ಊರಿನ ಜನರಿಗೆ ತೋರಿಸಿ ಕಳ್ಳರ ಮಾಹಿತಿ ಕಲೆಹಾಕಿದ್ದಾರೆ. ಕಳ್ಳರು ಅದೇ ಗ್ರಾಮದವರು ಎಂದು ತಿಳಿದು ಬಂದಿದೆ. ಇಬ್ಬರನ್ನು ಪೊಲೀಸರು ಪತ್ತೆ ಮಾಡಿ ವಶಕ್ಕೆ ಪಡೆದುಕೊಂಡಿದ್ದಾರೆ. ತಾವು ಹಣ ಕದ್ದಿರುವುದು ತಪ್ಪು ಎಂದು ಅವರು ಒಪ್ಪಿಕೊಂಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಕಳ್ಳನ ದೈವ ಭಕ್ತಿ ಬಗ್ಗೆ ನೆಟ್ಟಿಗರು ಚರ್ಚೆ ಮಾಡುತ್ತಿದ್ದಾರೆ