ಪುಲ್ವಾಮದಲ್ಲಿ ಭಾರತೀಯ ಸೇನಾಪಡೆಯ ಭರ್ಜರಿ ಬೇಟೆ: 5 ಎಲ್ಇಟಿ ಉಗ್ರರ ಬಂಧನ
ಜಮ್ಮು ಮತ್ತು ಕಾಶ್ಮೀರದ ಪುಲ್ವಾಮದಲ್ಲಿ ಭಾರತೀಯ ಸೇನಾಪಡೆ ಶನಿವಾರ ಭರ್ಜರಿ ಬೇಟೆ ನಡೆಸಿದ್ದು, ಪಾಕಿಸ್ತಾನ ಮೂಲಕ ಲಷ್ಕರ್-ಇ-ತೊಯ್ಬಾ ಉಗ್ರ ಸಂಘಟನೆಯ ಐವರು ಭಯೋತ್ಪಾದಕರನ್ನು ಬಂಧನಕ್ಕೊಳಪಡಿಸಿದ್ದಾರೆಂದು ತಿಳಿದುಬಂದಿದೆ.
Published: 21st November 2021 07:56 AM | Last Updated: 21st November 2021 08:10 AM | A+A A-

ಸಂಗ್ರಹ ಚಿತ್ರ
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮದಲ್ಲಿ ಭಾರತೀಯ ಸೇನಾಪಡೆ ಶನಿವಾರ ಭರ್ಜರಿ ಬೇಟೆ ನಡೆಸಿದ್ದು, ಪಾಕಿಸ್ತಾನ ಮೂಲಕ ಲಷ್ಕರ್-ಇ-ತೊಯ್ಬಾ ಉಗ್ರ ಸಂಘಟನೆಯ ಐವರು ಭಯೋತ್ಪಾದಕರನ್ನು ಬಂಧನಕ್ಕೊಳಪಡಿಸಿದ್ದಾರೆಂದು ತಿಳಿದುಬಂದಿದೆ.
ಅಧಿಕೃತ ಪ್ರಕಟಣೆಯ ಪ್ರಕಾರ, ಪುಲ್ವಾಮಾ ಪೊಲೀಸರು, ಪುಲ್ವಾಮಾ ಜಿಲ್ಲೆಯಲ್ಲಿ ಅನೇಕ ಗ್ರೆನೇಡ್ ದಾಳಿಗಳಿಗೆ ಸಂಬಂಧಿಸಿದ ಪ್ರಕರಣಗಳ ತನಿಖೆಯ ಸಮಯದಲ್ಲಿ ಈ ಜಾಲವನ್ನು ಭೇದಿಸಿದ್ದಾರೆಂದು ತಿಳಿಸಿದೆ.
ಬಂಧಿತ ಉಗ್ರರನ್ನು ಶೋಕೆಟ್ ಇಸ್ಲಾಂ ದಾರ್, ಐಜಾಜ್ ಅಹ್ಮದ್ ಲೋನ್, ಐಜಾಜ್ ಗುಲ್ಜಾರ್ ಲೋನ್, ಮಂಜೂರ್ ಅಹ್ಮದ್ ಭಟ್ ಮತ್ತು ನಾಸರ್ ಅಹ್ಮದ್ ಶಾ ಎಂದು ಗುರ್ತಿಸಲಾಗಿದೆ. ಬಂಧಿತ ಉಗ್ರರೆಲ್ಲರೂ ಪುಲ್ವಾಮಾದ ಲೆಲ್ಹರ್ ನಿವಾಸಿಗಳಾಗಿದ್ದಾರೆಂದು ತಿಳಿದುಬಂದಿದೆ.
ಬಂಧಿತ ಉಗ್ರರು ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳ ಸಂಗ್ರಹಣೆಯಲ್ಲಿ ತೊಡಗಿಸಿಕೊಂಡಿದ್ದು, ತಮ್ಮ ಹ್ಯಾಂಡ್ಲರ್‌ಗಳ ಆಜ್ಞೆಯ ಮೇರೆಗೆ ಭದ್ರತಾ ಪಡೆಗಳ ಮೇಲೆ ಗ್ರೆನೇಡ್ ದಾಳಿ ನಡೆಸುವಲ್ಲಿಯೂ ಇವರು ತೊಡಗಿಸಿಕೊಂಡಿದ್ದರು. ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಬಂಧಿತ ಉಗ್ರರಿಂದ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು ಹಾಗೂ ಇತರೆ ಸ್ಫೋಟಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಕಾಕಪೋರಾ ಪೊಲೀಸ್ ಠಾಣೆಯಲ್ಲಿ ಸಂಬಂಧಿತ ಕಾನೂನು ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದಾರೆಂದು ವರದಿಗಳು ತಿಳಿಸಿವೆ.