ಕೇರಳದಲ್ಲಿ ಧಾರಾಕಾರ ಮಳೆ: 5 ಮಂದಿ ಸಾವು, 18 ಮಂದಿ ಕಾಣೆ, ಹಲವು ಜಿಲ್ಲೆಗಳಲ್ಲಿ ಹೈ ಅಲರ್ಟ್ ಘೋಷಣೆ 

ದೇವರನಾಡು ಕೇರಳದಲ್ಲಿ ಧಾರಾಕಾರ ಮಳೆಗೆ ಪ್ರವಾಹ ಮತ್ತು ಭೂಕುಸಿತ ಉಂಟಾಗಿ ಕನಿಷ್ಠ 5 ಮಂದಿ ಮೃತಪಟ್ಟಿದ್ದು 18 ಮಂದಿ ಕಾಣೆಯಾಗಿದ್ದಾರೆ.
ಚಿತ್ತರ್ ನದಿ ತುಂಬಿ ಹರಿದು ಕಂಜಿರಪಲ್ಲಿ ಪಟ್ಟಣ ಮುಳುಗಿರುವುದು
ಚಿತ್ತರ್ ನದಿ ತುಂಬಿ ಹರಿದು ಕಂಜಿರಪಲ್ಲಿ ಪಟ್ಟಣ ಮುಳುಗಿರುವುದು

ತಿರುವನಂತಪುರ: ದೇವರನಾಡು ಕೇರಳದಲ್ಲಿ ಧಾರಾಕಾರ ಮಳೆಗೆ ಪ್ರವಾಹ ಮತ್ತು ಭೂಕುಸಿತ ಉಂಟಾಗಿ ಕನಿಷ್ಠ 5 ಮಂದಿ ಮೃತಪಟ್ಟಿದ್ದು 18 ಮಂದಿ ಕಾಣೆಯಾಗಿದ್ದಾರೆ.

ಕೊಟ್ಟಾಯಂ ಮತ್ತು ಇಡುಕ್ಕಿ ಜಿಲ್ಲೆಗಳಲ್ಲಿ ಎರಡು ಕಡೆ ಭೂಕುಸಿತ ಉಂಟಾಗಿದೆ. ಇಲ್ಲಿ ಮೂವರು ಮೃತಪಟ್ಟರೆ 11 ಮಂದಿ ಕಾಣೆಯಾಗಿದ್ದಾರೆ. ಇಡುಕ್ಕಿಯ ಕೊಕ್ಕಯಾರ್ ನಲ್ಲಿ ಭೂಕುಸಿತಕ್ಕೆ 11 ಮಂದಿ ಕಾಣೆಯಾಗಿದ್ದಾರೆ. ತೊಡುಪುಝದ ಕಂಜಾರ್ ನಲ್ಲಿ ಭಾರೀ ಪ್ರವಾಹಕ್ಕೆ ಕಾರು ಕೊಚ್ಚಿ ಹೋಗಿದ್ದು ಅದರಲ್ಲಿದ್ದ ಓರ್ವ ಪುರುಷ ಮತ್ತು ಮಹಿಳೆ ಕಾಣೆಯಾಗಿದ್ದಾರೆ.

ಶುಕ್ರವಾರ ರಾತ್ರಿಯಿಂದ ಆರಂಭವಾದ ಭಾರೀ ಮಳೆ ದಕ್ಷಿಣ ಮತ್ತು ಮಧ್ಯ ಕೇರಳದಲ್ಲಿ ದಿನವಿಡೀ ಮುಂದುವರಿಯಿತು. ಉತ್ತರ ಕೇರಳದಲ್ಲಿ ಹಗಲಿನ ವೇಳೆಯಲ್ಲಿ ಸಾಧಾರಣವಾಗಿರುವ ಮಳೆ ಸಂಜೆಯ ವೇಳೆಗೆ ತೀವ್ರಗೊಂಡಿದ್ದು, ಕೋಝಿಕ್ಕೋಡು, ಮಲಪ್ಪುರಂ ಮತ್ತು ಕಣ್ಣೂರು ಜಿಲ್ಲೆಗಳಲ್ಲಿ ಕೆಲವೆಡೆ ಪ್ರವಾಹ ಉಂಟಾಗಿದೆ. ಭಾರತೀಯ ಹವಾಮಾನ ಇಲಾಖೆ(ಐಎಂಡಿ)ವರದಿ ಪ್ರಕಾರ, ನಿನ್ನೆಯ ಭಾರೀ ಮಳೆಯು ಕೇರಳ ಕರಾವಳಿಯಲ್ಲಿ ಆಗ್ನೇಯ ಅರಬ್ಬಿ ಸಮುದ್ರದ ಮೇಲೆ ಇರುವ ಕಡಿಮೆ ಒತ್ತಡದ ಪ್ರದೇಶ ಮತ್ತು ಅದಕ್ಕೆ ಸಂಬಂಧಿಸಿದ ಚಂಡಮಾರುತದ ಪರಿಚಲನೆಯಿಂದ ಉಂಟಾಗಿದೆ.

ವಾಯುಮಂಡಲದಲ್ಲಿ ಒತ್ತಡವು ರಾಜ್ಯದ ಕಡೆಗೆ ಚಲಿಸಿತು, ಇದು ಧಾರಾಕಾರ ಮಳೆಗೆ ಕಾರಣವಾಯಿತು. ಇಂದು ಮಧ್ಯಾಹ್ನದವರೆಗೂ ಮಳೆ ಮುಂದುವರಿಯಲಿದೆ. ಕಡಿಮೆ ಒತ್ತಡದ ಪ್ರದೇಶ ಕ್ಷೀಣಿಸಿದಂತೆ ಮಧ್ಯಾಹ್ನದ ವೇಳೆಗೆ ಅದರ ತೀವ್ರತೆಯು ಕಡಿಮೆಯಾಗುತ್ತದೆ ಎಂದು ಐಎಂಡಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಯಲ್ಲೋ ಅಲರ್ಟ್ ಘೋಷಣೆ: ಇಂದು ಕೇರಳದ ಯಾವುದೇ ಜಿಲ್ಲೆಗೆ ರೆಡ್ ಅಲರ್ಟ್ ಘೋಷಿಸಲಾಗಿಲ್ಲ. ಇಂದು ಪತ್ತನಂತಿಟ್ಟ, ಅಲಪುಳ, ಕೊಟ್ಟಾಯಂ, ಇಡುಕ್ಕಿ, ಮಲಪ್ಪುರಂ, ಕಣ್ಣೂರು ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಯಲ್ಲೋ ಅಲರ್ಟ್ ನ್ನು ಘೋಷಿಸಲಾಗಿದೆ. ಇಂದು ಮಧ್ಯಾಹ್ನ 2 ಗಂಟೆಯಿಂದ ರಾತ್ರಿ 10 ರ ಮಧ್ಯೆ ಗುಡುಗು-ಮಿಂಚು ಉಂಟಾಗುವ ಸಾಧ್ಯತೆಯಿದ್ದು ಜನರು ಹೊರಗೆ ಓಡಾಡುವಾಗ ಎಚ್ಚರಿಕೆಯಿಂದ ಇರಬೇಕು ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಅತಿ ಹೆಚ್ಚು ಹಾನಿಗೊಳಗಾದ ಪ್ರದೇಶಗಳು ಕೊಟ್ಟಾಯಂ ಮತ್ತು ಇಡುಕ್ಕಿಯ ಹೈ ರೇಂಜ್ ಪ್ರದೇಶಗಳಾಗಿವೆ, ಅಲ್ಲಿ ಮಣಿಮಾಲಾ ಮತ್ತು ಮೀನಾಚಿಲ್ ನದಿಗಳಲ್ಲಿ ಪ್ರವಾಹಗಳು ಮತ್ತು ಪಶ್ಚಿಮ ಘಟ್ಟಗಳಲ್ಲಿನ ಭೂಕುಸಿತಗಳಿಂದಾಗಿ ಜೀವ ಮತ್ತು ಆಸ್ತಿಗೆ ಭಾರೀ ಹಾನಿಯನ್ನುಂಟುಮಾಡಿದೆ. ರಸ್ತೆಗಳು ಜಲಾವೃತಗೊಂಡಿದ್ದರಿಂದ, ಹೈ ರೇಂಜ್ ಪ್ರದೇಶಗಳ ಹಲವಾರು ಗ್ರಾಮಗಳು ಸಂಪರ್ಕ ಕಡಿತಗೊಂಡಿವೆ. ಕಂಜೀರಪ್ಪಳ್ಳಿ, ಮುಂಡಕ್ಕಾಯಂ, ಎರುಮೇಲಿ ಪಟ್ಟಣಗಳು ಜಲಾವೃತಗೊಂಡಿವೆ. ಮೇಜರ್ ಅಬಿನ್ ಪೌಲ್ ನೇತೃತ್ವದ ಸೇನಾ ಸಿಬ್ಬಂದಿಯ ಒಂದು ತಂಡವನ್ನು ಕಂಜೀರಪಲ್ಲಿಯಲ್ಲಿ ರಕ್ಷಣಾ ಕಾರ್ಯಾಚರಣೆಯನ್ನು ಮುನ್ನಡೆಸಲು ನಿಯೋಜಿಸಲಾಗಿದೆ.

ಕಾಲೇಜು ಮುಂದೂಡಿಕೆ: ನಾಳೆ ಸೋಮವಾರ ನಿಗದಿಯಾಗಿದ್ದ ಕಾಲೇಜು ಆರಂಭವನ್ನು ರಾಜ್ಯಾದ್ಯಂತ ಅಕ್ಟೋಬರ್ 20 ಕ್ಕೆ ಮುಂದೂಡಲಾಗಿದೆ.

ಶಬರಿಮಲೆಯಲ್ಲಿ ಪೂಜೆ ಸ್ಥಗಿತ: ಐಎಂಡಿ ಮುನ್ಸೂಚನೆಯನ್ನು ಅನುಸರಿಸಿ ನಾಡಿದ್ದು ಮಂಗಳವಾರದವರೆಗೆ ಶಬರಿಮಲೆ ಯಾತ್ರೆಯನ್ನು ತುಲಾಮ್ ತಿಂಗಳ ಪೂಜೆಯನ್ನು ಸ್ಥಗಿತಗೊಳಿಸಲಾಗುತ್ತದೆ.

ಎನ್ ಡಿಆರ್ ಎಫ್ ತಂಡಗಳಿಂದ ಸಹಾಯ ಪಡೆಯಿರಿ: ಸಿಎಂ
ರಾಜ್ಯದಲ್ಲಿ ಬೀಡುಬಿಟ್ಟಿರುವ ಎನ್‌ಡಿಆರ್‌ಎಫ್ ತಂಡಗಳ ಸಹಾಯ ಪಡೆಯಲು ಜಿಲ್ಲಾಡಳಿತಕ್ಕೆ ಸಿಎಂ ಸೂಚಿಸಿದ್ದಾರೆ. ಸೇನೆ, ನೌಕಾಪಡೆ ಮತ್ತು ವಾಯುಪಡೆಯನ್ನೂ ಕರೆಸಿಕೊಳ್ಳುವಂತೆ ಸೂಚಿಸಲಾಗಿದೆ. ರಕ್ಷಣಾ ಚಟುವಟಿಕೆಗಳಿಗೆ ಲಭ್ಯವಿರುವ ದೋಣಿಗಳ ಪಟ್ಟಿಯನ್ನು ತಯಾರಿಸಲು ಸ್ಥಳೀಯಾಡಳಿತಕ್ಕೆ ಸೂಚಿಸಲಾಗಿದೆ. ತುರ್ತು ರಕ್ಷಣಾ ಕಾರ್ಯಾಚರಣೆಗಾಗಿ ಮೋಟಾರ್ ವಾಹನಗಳ ಇಲಾಖೆಯು ಪ್ರದೇಶವಾರು ಮಣ್ಣು ಸಾಗಿಸುವವರು, ಟಿಪ್ಪರ್‌ಗಳು, ಕ್ರೇನ್‌ಗಳು ಮತ್ತು ಆಂಬ್ಯುಲೆನ್ಸ್‌ಗಳ ಸೇವೆಗೆ ಸೂಚಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com